ಶಿವಮೊಗ್ಗ: ಲಕ್ಕವಳ್ಳಿಯ ಭದ್ರಾ ಜಲಾಶಯ ಭರ್ತಿಯಾಗಲು ಏಳು ಅಡಿ ಮಾತ್ರ ಬಾಕಿ ಇದ್ದು, ಮುಂಗಾರು ಹಂಗಾಮಿನ ಬೆಳೆಗಳನ್ನು ಬೆಳೆಯಲು ಬಲದಂಡೆ ಕಾಲುವೆಗೆ ನೀರು ಹರಿಸಬೇಕಿದೆ. ಇದರ ವೇಳಾಪಟ್ಟಿ ನಿಗದಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರವು (ಕಾಡಾ) ಜುಲೈ 21ರಂದು ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆದಿದೆ.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ಸಭೆ ನಿಗದಿಯಾಗಿದೆ. ಬಲದಂಡೆ ನಾಲೆಗೆ ನೀರು ಹರಿಸಿದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ದಾವಣಗೆರೆ ಜಿಲ್ಲೆ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆ ಜೀವ ಪಡೆಯಲಿದೆ.
ಜಲಾಶಯ ಈ ಬಾರಿ ಜುಲೈ ಆರಂಭದಲ್ಲಿಯೇ ಭರ್ತಿಯತ್ತ ಸಾಗಿದ್ದರಿಂದ ಭದ್ರಾ ಅಣೆಕಟ್ಟೆ ನಿರ್ವಹಣಾ ಪ್ರಾಧಿಕಾರ ಕ್ರಸ್ಟ್‌ಗೇಟ್ ಮೂಲಕ ನದಿಗೆ ನೀರು ಹರಿಸಲು ಆರಂಭಿಸಿದೆ. ಸದ್ಯ ಜಲಾಶಯದಲ್ಲಿ 178.9 ಅಡಿ ನೀರು ಇದ್ದು, ಗರಿಷ್ಠ ಸಂಗ್ರಹಣಾ ಸಾಮರ್ಥ್ಯ 186 ಅಡಿ ಇದೆ. ಒಳಹರಿವು 10,462 ಕ್ಯುಸೆಕ್ ಇದ್ದು, 3,680 ಕ್ಯುಸೆಕ್ ಹೊರಹರಿವು ಇದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 157.11 ಅಡಿ ನೀರು ಇತ್ತು. ಈ ಬಾರಿ 22 ಅಡಿಯಷ್ಟು ಹೆಚ್ಚು ಸಂಗ್ರಹ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.