
ಭದ್ರಾವತಿ: ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ವಾರ್ಷಿಕ ಮಹೋತ್ಸವದ ಅಂಗವಾಗಿ ಭಾನುವಾರ ನಗರದ ಮುಖ್ಯಬೀದಿಗಳಲ್ಲಿ ಮಾತೆಯ ಅಲಂಕೃತ ತೇರಿನ ಮೆರವಣಿಗೆ ನಡೆಯಿತು.
ಬೆಂಗಳೂರಿನ ಪ್ರಾಂತೀಯ ಆರಾಧನ ವಿಧಿ ಆಯೋಗ ಹಾಗೂ ಅಂತರ್ಧರ್ಮಿಯ ಸಂವಾದ ಕಾರ್ಯದರ್ಶಿಗಳಾದ ಫಾದರ್ ವಿನಯ್ ಕುಮಾರ್ ರವರಿಂದ ಪೂಜಾ ವಿಧಿ–ವಿಧಾನಗಳು ನೆರವೇರಿದವು.
ಶಾಸಕರಾದ ಬಿ.ಕೆ ಸಂಗಮೇಶ್ವರ್ ರವರಿಂದ ತೇರಿನ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಹಳೇ ನಗರ, ಕಾಗದನಗರ, ಕಾರೇಹಳ್ಳಿ, ಮಾವಿನಕೆರೆ ಮತ್ತು ಇತರೆ ಸುತ್ತಮುತ್ತಲ ಧರ್ಮ ಕೇಂದ್ರಗಳಿಂದ ಭಕ್ತರು ಆಗಮಿಸಿದ್ದರು. ಬ್ಯಾಂಡ್ ಸೆಟ್ ಮೂಲಕ ಮೆರವಣಿಗೆ ಪ್ರಾರಂಭಿಸಿದ ಭಕ್ತರು ಕೈಯಲ್ಲಿ ಮೊಂಭತ್ತಿಗಳನ್ನು ಹಿಡಿದು, ಪ್ರಾರ್ಥಿಸುತ್ತಾ ಸಾಲಾಗಿ ಮುನ್ನಡೆದರು.
ಭಕ್ತರಿಗೆ ಅಲ್ಲಲ್ಲಿ ಸಿಹಿ ಹಂಚಿ, ಪಟಾಕಿಗಳನ್ನು ಸಿಡಿಸಲಾಯಿತು. ಮೆರವಣಿಗೆ ನಂತರ ಈ ಬಾರಿ ವಿಶೇಷವಾದ ವಿದ್ಯುತ್ ದೀಪಾಲಂಕಾರ, ಪಟಾಕಿ ಮತ್ತು ಸಂಗೀತದೊಂದಿಗೆ ಮಾತೆಯ ತೇರನ್ನು ಮರಳಿ ದೇವಾಲಯದೊಳಗೆ ಬರಮಾಡಿಕೊಳ್ಳಲಾಯಿತು. ನಂತರ ಅನ್ನ ಸಂತರ್ಪಣೆ ನಡೆಯಿತು.
ಧರ್ಮ ಕೇಂದ್ರದ ಗುರುಗಳಾದ ಫಾದರ್ ಲ್ಯಾನ್ಸಿ ಡಿಸೋಜ, ಧರ್ಮಭಗೀನಿಯರು, ಪಂಚ ಯೋಜನೆಗಳ ಗ್ಯಾರಂಟಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಸ್. ಗಣೇಶ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.