
ಭದ್ರಾವತಿ: ನಗರದಲ್ಲಿ ರಂಗ ಚಟುವಟಿಕೆಗಳನ್ನು ನಡೆಸಲು ಸರ್ಕಾರ ಸುಸಜ್ಜಿತ ರಂಗಮಂದಿರವೊಂದನ್ನು ನಿರ್ಮಿಸಿ ಕೊಡಬೇಕೆಂದು ಇಲ್ಲಿನ ರಂಗಭೂಮಿ ಕಲಾವಿದರು ಒತ್ತಾಯಿಸಿದ್ದಾರೆ.
ಕಲಾವಿದರ ಸಂಘಟನೆಯಾದ ‘ರಂಗ ಕಲಾವಿದರು’ ವತಿಯಿಂದ ಶನಿವಾರ ನಗರದ ಮಹಾತ್ಮ ಗಾಂಧಿ ಉದ್ಯಾನದಲ್ಲಿ ನಡೆದ ಸಭೆಯಲ್ಲಿ ಈ ಕುರಿತಂತೆ ನಿರ್ಣಯವೊಂದನ್ನು ತೆಗೆದುಕೊಂಡಿದೆ.
80ರ ದಶಕದಲ್ಲಿ ನಗರದಲ್ಲಿ 40ಕ್ಕೂ ಹೆಚ್ಚು ರಂಗತಂಡಗಳು ಸಕ್ರಿಯವಾಗಿದ್ದವು. ಖ್ಯಾತ ನಟ ದೊಡ್ಡಣ್ಣ, ನಿರ್ದೇಶಕ ಎಸ್. ನಾರಾಯಣ್, ನಟಿ ಶ್ರೀಲಲಿತಾ ಭದ್ರಾವತಿಯಲ್ಲಿ ಅರಳಿದ ಪ್ರತಿಭೆಗಳು. ವಿಐಎಸ್ಎಲ್ ಕ್ರೀಡಾಂಗಣದ ಬಳಿಯಿರುವ ಶಾರದಾ ಮಂದಿರ ಹಾಗೂ ಪೇಪರ್ ಟೌನ್‌ನ ವಾರ್ಷಿಕೋತ್ಸವ ಮಂಟಪದಲ್ಲಿ ಪ್ರತಿ ವಾರ ನಾಟಕ ಪ್ರದರ್ಶನವಿರುತ್ತಿತ್ತು. ಖ್ಯಾತ ಕಲಾವಿದರಾದ ಶ್ರೀನಾಥ್, ಉಮಾಶ್ರೀ, ಗಿರಿಜಾ ಲೋಕೇಶ್ ಇಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮಿತ್ರ ಕಲಾ ಮಂಡಳಿ ವತಿಯಿಂದ ಭದ್ರಾವತಿಯಲ್ಲಿ ಪ್ರತಿ ವರ್ಷ ರಾಜ್ಯ ಮಟ್ಟದ ನಾಟಕ ಸ್ಪರ್ಧೆ ಕೂಡ ನಡೆಯುತ್ತಿತ್ತು.
ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳಲ್ಲಿ ಕಾರ್ಮಿಕರ ಸಂಖ್ಯೆ ಕುಸಿದಂತೆ ಇಲ್ಲಿನ ರಂಗ ಚಟುವಟಿಕೆಗಳಿಗೂ ಗರ ಬಡಿದಂತಾಯಿತು. ಪ್ರಸ್ತುತ ನಗರದಲ್ಲಿ ಹತ್ತು ರಂಗ ತಂಡಗಳು ಸಕ್ರಿಯವಾಗಿವೆಯಾದರೂ, ಇಲ್ಲಿ ನಾಟಕ ಪ್ರದರ್ಶನಕ್ಕೆ ಸುಸಜ್ಜಿತ ರಂಗಮಂದಿರವಿಲ್ಲ.
ಸಭೆಯಲ್ಲಿ ಮಾತನಾಡಿದ ಕಲಾವಿದ ತಮಟೆ ಜಗದೀಶ್, ‘ರಾಜ್ಯ ಸರ್ಕಾರ ನಗರದಲ್ಲಿ ರಂಗಮಂದಿರ ನಿರ್ಮಿಸಲು ನಿವೇಶನವೊಂದನ್ನು ನೀಡಿ ನಿರ್ಮಾಣ ಕಾರ್ಯವನ್ನು ಶೀಘ್ರದಲ್ಲೇ ಆರಂಭಿಸಬೇಕು’ ಎಂದು ಒತ್ತಾಯ ಮಾಡಿದರು.
‘ನಿರ್ಮಾಣವಾಗುವ ರಂಗಮಂದಿರದಲ್ಲಿ ಕನಿಷ್ಠ 800 ಪ್ರೇಕ್ಷಕರಿಗೆ ಕೂರಲು ಆಸನ ವ್ಯವಸ್ಥೆ ಇರಬೇಕು. ಗ್ರೀನ್ ರೂಮ್, ತಾಲೀಮು ನಡೆಸಲು ಪ್ರತ್ಯೇಕ ಸ್ಥಳ, ಬೆಳಕಿನ ವ್ಯವಸ್ಥೆ ಇರಬೇಕು’ ಎಂದರು.
ಹಿರಿಯ ಕಲಾವಿದ ಕೆ.ಎಸ್. ರವಿಕುಮಾರ್ ಮಾತನಾಡಿ ‘ನಗರದ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ರಂಗಭೂಮಿ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರಕಬೇಕು’ ಎಂದರು.
ಸಭೆ ನಡೆಯುವಾಗಲೇ ರಂಗ ಕಲಾವಿದರಿಗೆ ಕರೆ ಮಾಡಿದ ಶಾಸಕ ಬಿ.ಕೆ. ಸಂಗಮೇಶ್ವರ್, ರಂಗಮಂದಿರ ನಿರ್ಮಾಣ ವಿಚಾರವಾಗಿ ಚರ್ಚಿಸಲು ಫೆ. 23ರಂದು ಸಂಜೆ 6.30ಕ್ಕೆ ಸಭೆ ಕರೆಯುವುದಾಗಿ ಹೇಳಿದರು. ಈ ಸಭೆಯಲ್ಲಿ ತಹಶೀಲ್ದಾರ್ ಹಾಗೂ ನಗರಸಭೆ ಆಯುಕ್ತರು ಇರಲಿದ್ದು, ನೀವೂ ಭಾಗವಹಿಸಿ ಎಂದು ಕಲಾವಿದರನ್ನು ಆಹ್ವಾನಿಸಿದರು.
ಕಲಾವಿದರಾದ ಕದರಿ ನರಸಿಂಹಯ್ಯ, ಕಮಲಾಕರ ಬಿ., ನಂದಿನಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.