
ಬಿಇಒ ಎ.ಕೆ.ನಾಗೇಂದ್ರಪ್ಪ
ಶಿವಮೊಗ್ಗ: ಇಲಾಖೆಯಿಂದ ಬರಬೇಕಾದ ವಾರ್ಷಿಕ ವೇತನ ಬಡ್ತಿಗಳು ಹಾಗೂ ಇತರೆ ಭತ್ಯೆಗಳ ಕೊಡಿಸಲು ಕಚೇರಿಯ ಅಧೀನ ಸಿಬ್ಬಂದಿಯಿಂದ ₹1 ಲಕ್ಷ ಲಂಚ ಪಡೆಯುವಾಗ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಹಾಗೂ ಮಧ್ಯವರ್ತಿ ಮಂಜುನಾಥ ಅವರನ್ನು ಸೋಮವಾರ ಸಂಜೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿ ಬಿಇಒ ಕಚೇರಿಯಲ್ಲಿ ಅಧೀಕ್ಷಕ ಆಗಿದ್ದ ಲಿಂಗರಾಜು ಅವರಿಗೆ 2011ರಿಂದ ತಾಂತ್ರಿಕ ಕಾರಣಗಳಿಂದ ಇಲಾಖೆಯಿಂದ ವಾರ್ಷಿಕ ವೇತನ ಬಡ್ತಿ ಹಾಗೂ ಇತರೆ ಭತ್ಯೆಗಳನ್ನು ನೀಡಿರಲಿಲ್ಲ. ಅದನ್ನು ಕೊಡಿಸುವಂತೆ ಬಿಇಒ ನಾಗೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದ್ದರು. ಬಡ್ತಿ ಹಾಗೂ ಹಿಂದಿನ ವೇತನ ಭತ್ಯೆ ಕೊಡಿಸಲು ಬಿಇಒ ಮಧ್ಯವರ್ತಿ, ಖಾಸಗಿ (ಖಾಸಗಿ ವ್ಯಕ್ತಿ) ಮಂಜುನಾಥ ಮೂಲಕ ₹4 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಲಿಂಗರಾಜು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.
ಲಂಚದ ಮೊತ್ತದಲ್ಲಿ ಮೊದಲ ಕಂತು ₹1 ಲಕ್ಷವನ್ನು ಕಚೇರಿಯಲ್ಲಿ ಸ್ವೀಕರಿಸುವಾಗ ದಾಳಿ ನಡೆಸಿದ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ನೇತೃತ್ವದ ತಂಡ ಹಣದ ಸಮೇತ ಬಂಧಿಸಿದೆ. ಮಂಜುನಾಥ ಆರ್‌ಟಿಐ ಕಾರ್ಯಕರ್ತ ಹಾಗೂ ಪತ್ರಕರ್ತ ಎಂದು ಹೇಳಿಕೊಂಡಿದ್ದು, ಆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಮಧ್ಯವರ್ತಿ ಮಂಜುನಾಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.