
ಭದ್ರಾವತಿ : ಆಟೋ ಚಾಲಕರೊಬ್ಬರು ಈ ಬಾರಿ ಸಹ ತಮ್ಮ ಆಟೋಗೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶನಿವಾರ ವಿಶಿಷ್ಟವಾಗಿ ಅಲಂಕಾರ ಮಾಡುವ ಮೂಲಕ ಕನ್ನಡಾಭಿಮಾನ ಪ್ರದರ್ಶಿಸಿದ್ದಾರೆ.
ಜನ್ನಾಪುರ ನಿವಾಸಿ, ಆಟೋ ಶಂಕರ್ ಎಂದೇ ಗುರುತಿಸಿಕೊಂಡಿರುವ ಚಾಲಕ ಶಂಕರಮೂರ್ತಿಯವರು ಕಳೆದ ವರ್ಷ ಸುಮಾರು 3 ಲಕ್ಷ ರು. ವೆಚ್ಚದಲ್ಲಿ ಹೊಸ ಆಟೋ ಖರೀದಿಸಿದ್ದರು. ಆಟೋ ನಂಬಿ ಬದುಕು ಸಾಗಿಸುತ್ತಿರುವ ಇವರು ಕನ್ನಡಾಭಿಮಾನಿಯಾಗಿದ್ದು, ಹೊಸ ಆಟೋಗೆ ಕಳೆದ ಬಾರಿ ವಿಶೇಷವಾಗಿ ಅಲಂಕಾರ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಈ ಬಾರಿ ಮತ್ತಷ್ಟು ವಿಭಿನ್ನವಾಗಿ ಕರ್ನಾಟಕ ರತ್ನ, ಚಲನಚಿತ್ರ ನಟ, ಸಮಾಜ ಸೇವಕ, ಪವರ್ ಸ್ಟಾರ್ ಪುನೀತ್ ರಾಜಕುಮಾರ್‌ರವರ ಪ್ರತಿಮೆಯನ್ನು ಆಟೋ ಮೇಲ್ಭಾಗದಲ್ಲಿರಿಸಿ, ಅದರ ಹಿಂಬದಿಯಲ್ಲಿ ಕರ್ನಾಟಕ ಭೂಪಟ ಇರಿಸಲಾಗಿದೆ. ಜೊತೆಗೆ ಬಣ್ಣ ಬಣ್ಣದ ಹೂವುಗಳಿಂದ, ಕೆಂಪು ಮತ್ತು ಹಳದಿ ನಾಡದ್ವಜದಿಂದ ಅಲಂಕರಿಸಲಾಗಿದೆ.
ಆಟೋ ಮುಂಭಾಗದಲ್ಲಿ ಬೃಹತ್ ಗಾತ್ರದ ಕೆಂಪು ಮತ್ತು ಹಳದಿ ಬಣ್ಣದ ಮಾಲೆಯನ್ನು ಹಾಕಲಾಗಿದೆ. ಆಟೋ ತುಂಬಾ ಆಕರ್ಷಕವಾಗಿ ಕಂಗೊಳಿಸುತ್ತಿದ್ದು, ಸ್ನೇಹಿತರು, ಬಂಧು-ಬಳಗದವರು, ಪ್ರಯಾಣಿಕರು, ರಸ್ತೆಯಲ್ಲಿ ಸಂಚರಿಸುವವರು ಆಟೋ ಮುಂಭಾಗ ನಿಂತುಕೊಂಡು ತಮ್ಮ ಮೊಬೈಲ್‌ಗಳಲ್ಲಿ ಪೋಟೋ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ.
ಆಟೋ ಶಂಕರ್ ಪ್ರತಿಕ್ರಿಯಿಸಿ, ನಾನು ಅಪ್ಪಟ್ಟ ಕನ್ನಡದ ಅಭಿಮಾನಿಯಾಗಿದ್ದು, ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ನಾನೇ ಸ್ವಯಂ ಪ್ರೇರಣೆಯಿಂದ ಆಟೋ ವಿಶೇಷವಾಗಿ ಅಲಂಕರಿಸಿದ್ದೇನೆ. ಈ ಬಾರಿ ನನಗೆ ನನ್ನ ಕಾರ್ಯಕ್ಕೆ ಸ್ನೇಹಿತರೊಬ್ಬರು ಸಹ ಕೈಜೋಡಿಸಿದ್ದು, ಇದರಿಂದಾಗಿ ಈ ಬಾರಿ ಅಲಂಕಾರ ಇನ್ನೂ ಹೆಚ್ಚಿನ ಆಕರ್ಷಣೆಯಿಂದ ಕೂಡಿದೆ ಎಂದರು.
ಜನ್ನಾಪುರ ಹಾಗು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ದಿನವಿಡೀ ಈ ಆಟೋ ಸಂಚಾರ ಬಹುತೇಕ ಜನರಲ್ಲಿ ತಮ್ಮಲ್ಲಿನ ಕನ್ನಡದ ಅಸ್ಮಿತೆಯನ್ನು ಪ್ರಶ್ನಿಸಿಕೊಳ್ಳುವಂತೆ ಮಾಡಿದೆ. ಸಾಮಾನ್ಯ ಆಟೋ ಚಾಲಕನ ಕನ್ನಡಾಭಿಮಾನಕ್ಕೆ ಒಂದು ನಮನವಿರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.