
ಭದ್ರಾವತಿ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಗೆ (ಟಿಎಪಿಸಿಎಂಎಸ್) 13 ಜನ ನಿರ್ದೇಶಕರು ಆಯ್ಕೆಯಾಗಿದ್ದು, ನಗರದ ಚನ್ನಗಿರಿ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ಗುರುವಾರ ಅವರನ್ನು ಅಭಿನಂದಿಸಲಾಯಿತು.
ಸಂಘದಲ್ಲಿ 253 ಷೇರುದಾರರಿದ್ದು, ₹25 ಲಕ್ಷ ನಷ್ಟದಲ್ಲಿದೆ. ಸಂಘವನ್ನು ಸಾಲದಿಂದ ಮುಕ್ತಿಗೊಳಿಸಿ ರೈತರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದಾಗಿ ನೂತನ ನಿರ್ದೇಶಕ ಬಿ.ಕೆ ಶಿವಕುಮಾರ್ ಭರವಸೆ ನೀಡಿದರು.
ಸಹಕಾರಿ ಕ್ಷೇತ್ರದಲ್ಲೂ ಕಾಂಗ್ರೆಸ್ ಮುಂಚೂಣಿ: ಚುನಾವಣೆಯಲ್ಲಿ 8 ಕ್ಷೇತ್ರಗಳಿಂದ ಒಟ್ಟು 17 ಮಂದಿ ಸ್ಪರ್ಧಿಸಿದ್ದರು. ಉಳಿದ ಐವರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಒಟ್ಟು 13 ನಿರ್ದೇಶಕರ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಎಲ್ಲಾ 13 ನಿರ್ದೇಶಕರು ಕಾಂಗ್ರೆಸ್ ಬೆಂಬಲಿತರಾಗಿದ್ದು, ಸಹಕಾರಿ ಕ್ಷೇತ್ರದಲ್ಲೂ ಕಾಂಗ್ರೆಸ್ ಮುಂಚೂಣಿಯಲ್ಲಿದೆ ಎಂದು ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಎಸ್. ಕುಮಾರ್ ಮತ್ತು ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ ಅಭಿಪ್ರಾಯಪಟ್ಟರು.
ಶಾಸಕರ ಸಹೋದರ ಬಿ.ಕೆ ಶಿವಕುಮಾರ್ ಅವರು ಆಯ್ಕೆಯಾಗಿರುವುದರಿಂದ ಸಂಘಕ್ಕೆ ಹೆಚ್ಚಿನ ಬಲಬಂದಿದೆ. ಮುಂದಿನ ದಿನಗಳಲ್ಲಿ ಸಂಘ ಹೆಚ್ಚಿನ ಬೆಳವಣಿಗೆ ಹೊಂದುವ ಮೂಲಕ ರೈತರ ನೆರವಿಗೆ ಮುಂದಾಗುವ ವಿಶ್ವಾಸವಿದೆ ಎಂದರು.
ನೂತನ ನಿರ್ದೇಶಕರಾದ ತಳ್ಳಿಕಟ್ಟೆ ಕ್ಷೇತ್ರದ ಎಚ್. ಲೋಕೇಶಪ್ಪ, ಜಯನಗರ ಕ್ಷೇತ್ರದ ರವೀಂದ್ರನಾಯ್ಡು, ಕೆಂಚೇನಹಳ್ಳಿ ಕ್ಷೇತ್ರದ ಸುರೇಶ್, ಭದ್ರಾವತಿ ಕ್ಷೇತ್ರದ ಬಿ.ಟಿ ನಾಗರಾಜ್, ಬಾರಂದೂರು ಕ್ಷೇತ್ರದ ಡಿ. ಶಿವಶಂಕರ್, ಮಾರಶೆಟ್ಟಿಹಳ್ಳಿ ಕ್ಷೇತ್ರದ ಕೆ. ಶ್ರೀನಿವಾಸ್, ಅಗಸನಹಳ್ಳಿ ಕ್ಷೇತ್ರದ ಕೃಷ್ಣಪ್ಪ, ಕೊಮಾರನಹಳ್ಳಿ ಕ್ಷೇತ್ರದ ಸತ್ಯನಾರಾಯಣರಾವ್, ತಡಸ ಕ್ಷೇತ್ರದ ಖಲೀಂ ಉಲ್ಲಾ, ತಳ್ಳಿಕಟ್ಟೆ ಕ್ಷೇತ್ರದ ಒ.ಎನ್ ರತ್ನಮ್ಮ ಹಾಗೂ ಭದ್ರಾವತಿ ಕ್ಷೇತ್ರದ ವಿನೋದಬಾಯಿ ಹಾಗೂ ಪ್ರಮುಖರಾದ ದಶರಥಗಿರಿ, ಬಸವಂತಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.