ಭದ್ರಾವತಿ: ನಗರದ ನಾಗರಿಕರ ಮನರಂಜನೆಯ ತಾಣಗಳಾಗಿದ್ದ ಇಲ್ಲಿನ ಚಿತ್ರಮಂದಿರಗಳು ಪ್ರೇಕ್ಷಕರ ಕೊರತೆಯಿಂದ ನಿಧಾನವಾಗಿ ಬಾಗಿಲು ಮುಚ್ಚುತ್ತಿವೆ.
ಎರಡು ವರ್ಷಗಳ ಹಿಂದೆ ನಗರದಲ್ಲಿ ಒಟ್ಟು 8 ಸಿನಿಮಾ ಮಂದಿರಗಳು ಇದ್ದವು. ಆದರೆ ಪ್ರಸ್ತುತ ಸತ್ಯ, ನೇತ್ರಾವತಿ, ವೀರಭದ್ರೇಶ್ವರ ಮತ್ತು ಶಂಕರ್ ಹೆಸರಿನ ಚಿತ್ರಮಂದಿರಗಳಷ್ಟೇ ಕಾರ್ಯನಿರ್ವಹಿಸುತ್ತಿವೆ. ಅದರಲ್ಲೂ ವೀರಭದ್ರೇಶ್ವರ ಮತ್ತು ಶಂಕರ್ ಚಿತ್ರಮಂದಿರಗಳು ಪ್ರೇಕ್ಷಕರ ಕೊರತೆಯಿಂದ ತಿಂಗಳಲ್ಲಿ 15 ದಿನಗಳು ಮಾತ್ರ ಪ್ರದರ್ಶನ ನಡೆಸುತ್ತಿವೆ.
‘ನಗರದ ಮಧ್ಯ ಭಾಗದಲ್ಲಿದ್ದ ವಾಗೀಶ್, ವಿನಾಯಕ, ಭಾಗ್ಯವತಿ ಮತ್ತು ಜಯಶ್ರೀ ಚಿತ್ರಮಂದಿರಗಳಿಗೆ ಬೀಗ ಬಿದ್ದಿದೆ. ಜಯಶ್ರೀ ಚಿತ್ರಮಂದಿರ ಕಲ್ಯಾಣ ಮಂದಿರವಾಗಿ ಮಾರ್ಪಟ್ಟಿದ್ದು, ವಿನಾಯಕ, ಬಸವೇಶ್ವರ ಚಿತ್ರಮಂದಿರದ ಸ್ಥಳಗಳಲ್ಲಿ ಮಾಲ್‌ಗಳು ತಲೆ ಎತ್ತಿವೆ’ ಎಂದು ವೀರಭದ್ರೇಶ್ವರ ಚಿತ್ರಮಂದಿರದ ಮಾಲೀಕ ಎನ್.ಜೆ.ಈರಪ್ಪ ತಿಳಿಸಿದರು.
ಓಟಿಟಿ ಹಾವಳಿ: ‘ಓಟಿಟಿ ಹಾವಳಿಗೆ ಚಿತ್ರಮಂದಿರಗಳು ನಲುಗಿವೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ ಹಾಟ್ ಸ್ಟಾರ್, ಜೀ ಫೈವ್ ಮತ್ತಿತರ ವೇದಿಕೆಗಳು ಚಲನಚಿತ್ರಗಳನ್ನು ಖರೀದಿಸಿ ಮೊಬೈಲ್‌ಗಳಲ್ಲೇ ಅವು ವೀಕ್ಷಕರಿಗೆ ಸಿಗುವಂತೆ ಮಾಡುತ್ತಿವೆ. ಇದರಿಂದ ಚಿತ್ರಮಂದಿರಗಳಿಗೆ ಭಾರಿ ಪೆಟ್ಟು ಬಿದ್ದಿದೆ. ತೆರೆಗೆ ಬಂದ ಕೆಲವೇ ದಿನಗಳಲ್ಲಿ ಚಿತ್ರಗಳು ಓಟಿಟಿಯಲ್ಲಿ ಸಿಗುವುದರಿಂದ ಪ್ರೇಕ್ಷಕರು ಸಿನಿಮಾ ಮಂದಿರಗಳತ್ತ ಸುಳಿಯುತ್ತಿಲ್ಲ. ಕೆಲವೊಬ್ಬರು ಮನೆಗಳಲ್ಲಿ ಮಿನಿ ಥಿಯೇಟರ್‌ಗಳನ್ನು ನಿರ್ಮಿಸಿಕೊಂಡು ಬೇಕಾದ ಚಿತ್ರಗಳನ್ನು ಆ್ಯಪ್‌ಗಳ ಮೂಲಕ ವೀಕ್ಷಿಸುತ್ತಾರೆ’ ಎಂದು ವೀರಭದ್ರೇಶ್ವರ ಚಿತ್ರಮಂದಿರದ ವ್ಯವಸ್ಥಾಪಕ ಸುಬ್ಬಣ್ಣ ಹೇಳಿದರು.
‘ಕ್ರಿಕೆಟ್ ವಿಶ್ವಕಪ್, ಐಪಿಎಲ್, ಲೋಕಸಭಾ ಚುನಾವಣೆ ಮತ್ತು ಹೊಸ ಸಿನಿಮಾಗಳ ಕೊರತೆಯಿಂದಾಗಿ ಆರು ತಿಂಗಳಿಂದ ಪ್ರೇಕ್ಷಕರು ಚಿತ್ರಮಂದಿರದ ಕಡೆ ಬರುವುದನ್ನೇ ಬಿಟ್ಟಿದ್ದಾರೆ. ಒಮ್ಮೊಮ್ಮೆ ಒಂದು ಪ್ರದರ್ಶನದಲ್ಲಿ ಕೇವಲ 4ರಿಂದ 6 ಮಂದಿ ಮಾತ್ರ ಇರುತ್ತಾರೆ. ಚಿತ್ರಮಂದಿರ ನಡೆಸಲು ತಿಂಗಳಿಗೆ ಕನಿಷ್ಠ ₹ 80,000ದಿಂದ ₹ 90,000 ಬಂಡವಾಳ ಬೇಕಾಗುತ್ತದೆ. ಸಿಬ್ಬಂದಿ ವೇತನ, ವಿದ್ಯುತ್ ಬಿಲ್, ಯಂತ್ರೋಪಕರಣ, ಚಿತ್ರಮಂದಿರದ ನಿರ್ವಹಣೆ ವೆಚ್ಚ ಇವೆಲ್ಲವನ್ನೂ ಲೆಕ್ಕ ಹಾಕಿದರೆ ಚಿತ್ರಮಂದಿರ ನಡೆಸುವುದೇ ಬೇಡ ಎನಿಸುತ್ತದೆ’ ಎಂದು ಮಾಲೀಕರೊಬ್ಬರು ಬೇಸರ ವ್ಯಕ್ತಪಡಿಸಿದರು.
‘ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರಲಿ, ಬರದೇ ಇರಲಿ ಸಿಬ್ಬಂದಿಗೆ ಕನಿಷ್ಠ ವೇತನವಾದರೂ ಕೊಡಬೇಕಾಗುತ್ತದೆ. ಕಳೆದ ಹಲವು ತಿಂಗಳಿಂದ ಲಾಭವಿಲ್ಲದೆ ಕೈಯಿಂದಲೇ ಹೆಚ್ಚಿನ ಹಣ ವ್ಯಯಿಸುತ್ತಿದ್ದೇವೆ. ಚಿತ್ರಮಂದಿರದಲ್ಲೇ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಸಿಬ್ಬಂದಿಗೆ ಬೇರೆ ಕೆಲಸ ಬರುವುದಿಲ್ಲ. ಮುಚ್ಚಿದರೆ ಅವರು ಬೀದಿ ಪಾಲಾಗುತ್ತಾರೆ’ ಎಂದು ಸತ್ಯ ಚಿತ್ರಮಂದಿರದ ಮಾಲೀಕ ದುಶ್ಯಂತರಾಜ್ ತಿಳಿಸಿದರು.
‘ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ತೀರ ಕಡಿಮೆಯಾಗುತ್ತಿರುವುದರಿಂದ, ಕನಿಷ್ಠ ಪಕ್ಷ ಕನ್ನಡ ಸಿನಿಮಾಗಳನ್ನಾದರೂ ಓಟಿಟಿ ಮೂಲಕ ಬಿಡುಗಡೆಗೊಳಿಸುವುದನ್ನು ಸ್ಥಗಿತಗೊಳಿಸುವಂತೆ ಜಿಲ್ಲೆಯ ಚಿತ್ರಮಂದಿರಗಳ ಮಾಲೀಕರ ಸಂಘದಿಂದ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಅದಕ್ಕೆ ಸ್ಪಂದನೆಯೇ ಸಿಗಲಿಲ್ಲ. ನಿರ್ಮಾಪಕರೇ ನೇರವಾಗಿ ಓಟಿಟಿಗೆ ಸಿನಿಮಾ ಕೊಡುತ್ತಿದ್ದಾರೆ. ನಿಮಗೆ ಚಿತ್ರಮಂದಿರ ನಡೆಸಲು ಸಾಧ್ಯವಾಗದಿದ್ದರೆ ಮುಚ್ಚಿಬಿಡಿ ಎಂದು ಹೇಳುತ್ತಾರೆ’ ಎಂದು ಮಾಲೀಕರು ತಿಳಿಸಿದರು.
‘ಬಿಡುಗಡೆಯಾದ ಹೊಸ ಸಿನಿಮಾ ನೋಡಲು ಒಂದೆರಡು ದಿನ ತಾಳ್ಮೆ ವಹಿಸಿದರೆ ಸಾಕು, ನಂತರ ಮೊಬೈಲ್‌ಗಳಲ್ಲೇ ದೊರೆಯುತ್ತವೆ. ಹೀಗಿರುವಾಗ ₹ 150 ಕೊಟ್ಟು ಟಿಕೆಟ್ ಪಡೆದು ಒಬ್ಬರೇ ಥಿಯೇಟರ್‌ನಲ್ಲಿ ನೋಡುವ ಬದಲು ಮನೆಯಲ್ಲೇ ಕುಟುಂಬದವರೆಲ್ಲಾ ಕುಳಿತು ನೋಡಬಹುದು’ ಎಂದು ಕಾಲೇಜು ವಿದ್ಯಾರ್ಥಿ ದೇವು ಹೇಳುತ್ತಾರೆ.
35 ವರ್ಷಗಳಿಂದ ಸತ್ಯ ಚಿತ್ರಮಂದಿರದಲ್ಲಿ ಗೇಟ್ ಕೀಪರ್ ಆಗಿದ್ದೇನೆ. ಪ್ರೇಕ್ಷಕರ ಸಂಖ್ಯೆ ಕಡಿಮೆಯಾದರೂ ಮಾಲೀಕರು ತಪ್ಪದೇ ತಿಂಗಳ ಸಂಬಳ ಕೊಡುತ್ತಿದ್ದಾರೆ.
-ಕಾಂತರಾಜ್ ಸತ್ಯ ಚಿತ್ರಮಂದಿರದ ಸಿಬ್ಬಂದಿ
ನಟರ ಚಿತ್ರಗಳ ಕೊರತೆ...
ಇತ್ತೀಚೆಗೆ ಸ್ಟಾರ್ ನಟರ ಚಿತ್ರಗಳು ಕಡಿಮೆಯಾಗಿವೆ. ಎರಡು ವರ್ಷ ಅಥವಾ ವರ್ಷಕ್ಕೊಂದು ಚಿತ್ರ ಮಾತ್ರ ತೆರೆ ಕಾಣುತ್ತಿವೆ. ಪರ ಭಾಷೆಗಳಲ್ಲೂ ಉತ್ತಮ ಚಿತ್ರಗಳು ವರ್ಷಕ್ಕೆ ಒಂದು ಅಥವಾ ಎರಡು ಮಾತ್ರ ಬಿಡುಗಡೆಯಾಗುತ್ತಿವೆ. ಕನ್ನಡದಲ್ಲಿ ಸುದೀಪ್ ದರ್ಶನ್ ಯಶ್ ಶಿವರಾಜಕುಮಾರ್ ದುನಿಯಾ ವಿಜಯ್ ಅಭಿನಯದ ಚಿತ್ರಗಳು ಬಿಡುಗಡೆ ಆದಾಗ ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ತೋರುತ್ತಾರೆ. ಅದು ಬಿಟ್ಟರೆ ತಮಿಳಿನಲ್ಲಿ ವಿಜಯ್ ರಜನಿಕಾಂತ್ ನಟನೆಯ ಚಿತ್ರಗಳಿಗೆ ಪ್ರೇಕ್ಷಕರು ಬರುತ್ತಾರೆ ಅಷ್ಟೇ. ಚಿತ್ರರಂಗದಲ್ಲಿ ಇತ್ತೀಚಿನ ಕೆಲ ಕಹಿ ಘಟನೆಗಳಿಂದಲೂ ಕೆಲವರು ಚಿತ್ರಮಂದಿರದಿಂದ ದೂರ ಸರಿದಿದ್ದಾರೆ ಎಂದು ವೀರಭದ್ರೇಶ್ವರ ಚಿತ್ರಮಂದಿರದ ವ್ಯವಸ್ಥಾಪಕ ಸುಬ್ಬಣ್ಣ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.