ADVERTISEMENT

ಭದ್ರಾವತಿ ರಿಪಬ್ಲಿಕ್‌ಗೆ ಅವಕಾಶ ಕೊಡೊಲ್ಲ: ಎಸ್.ಎನ್. ಚನ್ನಬಸಪ್ಪ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 14:47 IST
Last Updated 11 ಫೆಬ್ರುವರಿ 2025, 14:47 IST
<div class="paragraphs"><p>ಎಸ್.ಎನ್. ಚನ್ನಬಸಪ್ಪ</p></div>

ಎಸ್.ಎನ್. ಚನ್ನಬಸಪ್ಪ

   

ಶಿವಮೊಗ್ಗ: ಭದ್ರಾವತಿಯಲ್ಲಿ ಅರಾಜಕತೆ ತಲೆದೋರಿದೆ. ಅಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಅಪಮಾನವಾಗಿದೆ. ಕೂಡಲೇ ಪೊಲೀಸರು ಸುಮೊಟೋ ಕೇಸ್ ದಾಖಲಿಸಿ ಮರಳು ದಂಧೆಕೋರರ ಬಂಧಿಸಬೇಕು ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭದ್ರಾವತಿ ರಿಪಬ್ಲಿಕ್ ಮಾಡಲು ಶಾಸಕರು ಮತ್ತು ಪುತ್ರನ ತಂಡ ಹೊರಟಿದೆ. ಅದಕ್ಕೆ ಭದ್ರಾವತಿ ನಾಗರಿಕರು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ನಾಗರಿಕ ಸಮಾಜ ಇನ್ನೂ ಅಲ್ಲಿ ಬದುಕಿದೆ ಎಂದರು.

ADVERTISEMENT

ಗೋಹತ್ಯೆಗೆ ಸಂಬಂಧಿಸಿದಂತೆ ಭದ್ರಾವತಿಯಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ಪ್ರಶ್ನಿಸಿದ ಚನ್ನಬಸಪ್ಪ, ಶಿವಮೊಗ್ಗಕ್ಕೆ ಬನ್ನಿ, ಗಾಂಜಾ ಮತ್ತು ಮರಳು ದಂಧೆ ನಿಯಂತ್ರಿಸಿ ಎಂದು ಹಲವು ಬಾರಿ ವಿನಂತಿಸಿದ್ದೇನೆ. ವಿಧಾನಸಭಾ ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದೇನೆ. ಆದರೂ ನೀವು ಬಂದಿಲ್ಲ. ಈಗ ಆ ಹೆಣ್ಣುಮಗಳಿಗೆ ನ್ಯಾಯ ಕೊಡಿಸಿ ಎಂದರು.

ಅಪಮಾನ ಮಾಡಿಸಿಕೊಂಡು ಮನೆಗೆ ಹಿಂದಿರುಗಿದ ಆ ಮಹಿಳಾ ಅಧಿಕಾರಿಗೆ ರಕ್ಷಣೆ ಕೊಡಿ. ಯಾರಾದರೂ ಅವರ ಹಿರಿಯ ಅಧಿಕಾರಿಗಳು ದೂರು ನೀಡಲು ಅಡ್ಡಿಪಡಿಸಿದರೆ ಸಾರ್ವಜನಿಕರು ಸುಮ್ಮನಿರುವುದಿಲ್ಲ. ಪೊಲೀಸ್ ಇಲಾಖೆಯವರು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ. ಬುಧವಾರದಿಂದ ಎಲ್ಲೆಡೆ ಹೋರಾಟ ಪ್ರಾರಂಭಿಸುವುದಾಗಿ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್, ಜ್ಞಾನೇಶ್ವರ್, ವಿನಯ್ ಬಿದರೆ, ಮೋಹನ್ ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.