ADVERTISEMENT

ಭಗವದ್ಗೀತೆ ಅಭಿಯಾನ ಉದ್ಘಾಟನೆ ಅ.25ಕ್ಕೆ

-

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 6:10 IST
Last Updated 12 ಸೆಪ್ಟೆಂಬರ್ 2025, 6:10 IST
ಶಿವಮೊಗ್ಗ ಶಂಕರಮಠದ ಆವರಣದಲ್ಲಿ ಆಯೋಜಿಸಿದ್ದ ಭಗವದ್ಗೀತೆ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿದರು
ಶಿವಮೊಗ್ಗ ಶಂಕರಮಠದ ಆವರಣದಲ್ಲಿ ಆಯೋಜಿಸಿದ್ದ ಭಗವದ್ಗೀತೆ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿದರು   

ಪ್ರಜಾವಾಣಿ ವಾರ್ತೆ

ಶಿವಮೊಗ್ಗ: ‘ಜಿಲ್ಲೆಯಾದ್ಯಂತ ಭಗವದ್ಗೀತಾ ಅಭಿಯಾನ ಹಮ್ಮಿಕೊಂಡಿದ್ದು, ಅ.25ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ’ ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಶಂಕರಮಠದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಅಭಿಯಾನದ ಪೂರ್ವಭಾವಿ ಸಿದ್ಧತೆಯ ಜಿಲ್ಲಾ ಹಾಲಿ, ಮಾಜಿ ಜನಪ್ರತಿನಿಧಿ ಹಾಗೂ ಸಮಾಜದ ಪ್ರಮುಖರ ಸಭೆಯಲ್ಲಿ ಮಾತನಾಡಿದರು.

ADVERTISEMENT

‘ಭಗವದ್ಗೀತಾ ಅಭಿಯಾನ, ಸೋಂದಾ ಸ್ವರ್ಣವಲ್ಲೀ ಮಠ ಹಾಗೂ ಸ್ವರ್ಣರಶ್ಮೀ ಟ್ರಸ್ಟ್ ವತಿಯಿಂದ ಅಭಿಯಾನ ನಡೆಯಲಿದೆ. ಅಭಿಯಾನಕ್ಕೆ ಭಗವದ್ಗೀತೆಯ 11ನೇ ‘ವಿಶ್ವರೂಪ ದರ್ಶನ’ ಅಧ್ಯಾಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಶಾಲಾ–ಕಾಲೇಜು ಮಕ್ಕಳು ಭಗವದ್ಗೀತೆಯ ಮೂಲ ಶ್ಲೋಕಗಳನ್ನು ಅಧ್ಯಯನ ಮಾಡುವುದು ಇದರ ಉದ್ದೇಶ. ಕಾರ್ಯಕ್ರಮದ ಉದ್ಘಾಟನಾ ಸ್ಥಳವನ್ನು ಶೀಘ್ರದಲ್ಲಿ ತಿಳಿಸಲಾಗುವುದು ಎಂದರು. 

ಅಭಿಯಾನ ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸಬೇಕು. ಇದರ ಖರ್ಚು ವೆಚ್ಚ ಭರಿಸಲು ಸಾರ್ವಜನಿಕರೂ ಕೂಡ ಸಹಕರಿಸಬೇಕು ಎಂದು ಮಾಜಿ ಶಾಸಕ ಕೆ.ಜಿ. ಕುಮಾರ ಸ್ವಾಮಿ ಮನವಿ ಮಾಡಿದರು.

ನಗರದ ಭಜನಾ ಪರಿಷತ್ ಹಾಗೂ ಯೋಗ ಶಿಕ್ಷಣ ಸಮಿತಿಯ ಮಕ್ಕಳಿಗೆ ಅಭಿಯಾನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಹುದು. ತಾಲ್ಲೂಕು ಬ್ರಾಹ್ಮಣ ಹಾಗೂ ನಗರದ ವಿವಿಧ ಸಮುದಾಯಗಳ ಸಂಘಟನೆಗಳಿಗೆ ಅಭಿಯಾನದ ಉದ್ದೇಶ ತಿಳಿಸಿ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಬೇಕು ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಪ್ರಮುಖ ನಟರಾಜ್ ಭಾಗವತ್ ಸಲಹೆ ನೀಡಿದರು.

ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಮಾಜಿ ಶಾಸಕರಾದ ಎಸ್. ರುದ್ರೇಗೌಡ, ಆರ್.ಕೆ. ಸಿದ್ರಾಮಣ್ಣ, ಕಾರ್ಯದರ್ಶಿ ಅಶೋಕ್ ಜಿ. ಭಟ್, ಪ್ರಮುಖರಾದ ಎಸ್.ಪಿ. ದಿನೇಶ್, ಮ.ಸ. ನಂಜುಂಡಸ್ವಾಮಿ, ಸಂದೇಶ ಉಪಾಧ್ಯ, ಪಿ.ಪಿ. ಹೆಗಡೆ, ಶಂಕರ ಭಟ್, ಭರತ್ ನಾಡಿಗ್ ಜ್ಯೋತಿ ಮರೂರ್, ಬಾಲಕೃಷ್ಣ ಹೆಗಡೆ, ಮಂಜುನಾಥ ಶರ್ಮಾ, ಲಕ್ಷ್ಮಿನಾರಾಯಣ ಕಾಶಿ, ಆರ್.ಡಿ. ಹೆಗಡೆ ಇದ್ದರು. 

Cut-off box - ನ.30ಕ್ಕೆ ಮಹಾ ಸಮರ್ಪಣೆ ರಾಜ್ಯ ಮಟ್ಟದ ಅಭಿಯಾನದ ಮಹಾಸಮರ್ಪಣೆ ನ.30ರಂದು ಅಲ್ಲಮಪ್ರಭು ಉದ್ಯಾನದಲ್ಲಿ (ಫ್ರೀಡಂ ಪಾರ್ಕ್) ನಡೆಯಲಿದೆ. ಕಾರ್ಯಕ್ರಮದಲ್ಲಿ 40000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕು. ತಾಲ್ಲೂಕು ವ್ಯಾಪ್ತಿಯಿಂದ ಮಕ್ಕಳನ್ನು ಕರೆತರಲು ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಖಾಸಗಿ ಬಸ್ ಮಾಲಿಕರೊಂದಿಗೆ ಸಭೆ ನಡೆಸಲಾಗಿದೆ. ಅದೇ ರೀತಿ ಕಾರ್ಯಕ್ರಮಕ್ಕೆ ಆರ್ಥಿಕ ಸೌಲಭ್ಯವೂ ಅಗತ್ಯವಿದೆ ಎಂದು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.