ಹೊಸನಗರ: ತಾಲ್ಲೂಕಿನಲ್ಲಿ ಭಾನುವಾರ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಐತಿಹಾಸಿಕ ಸ್ಥಳವಾದ ಬಿದನೂರು ಕೋಟೆಯ ಒಳಭಾಗದಲ್ಲಿರುವ ಕೊಳದ ದಂಡೆ ಸಂಪೂರ್ಣ ಕುಸಿದಿದೆ.
ಬಿದನೂರು ಕೋಟೆಯ ಮಹಾದ್ವಾರದಿಂದ ಒಳಗೆ ಹೋಗಿ ರಾಜದರ್ಬಾರ್ ಅಂಗಳಕ್ಕೆ ಹೋಗುವ ಮಾರ್ಗದ ಬಲಭಾಗದಲ್ಲಿ ಎರಡು ಕೊಳಗಳಿದ್ದು, ಒಂದು ಕೊಳದ ದಂಡೆ ಸಂಪೂರ್ಣ ಕುಸಿದಿದೆ.
ಈ ಕೊಳ ಬಹಳ ವರ್ಷಗಳ ಹಿಂದೆ ಕುಸಿದಿತ್ತು. ಕೆಂಪುಕಲ್ಲುಗಳಿಂದ ಅದೇ ಮಾದರಿಯಲ್ಲಿ ಪುನಃ ನಿರ್ಮಿಸಲಾಗಿತ್ತು. ಈಗ ಅದೇ ಕೊಳದ ದಂಡೆ ಸಂಪೂರ್ಣ ಕುಸಿದು ಬಿದ್ದಿದೆ.
‘ಕೊಳದ ಅಕ್ಕಪಕ್ಕ, ಕೊಳದ ದಂಡೆಯ ಮೇಲೆ ಗಿಡಗಂಟಿಗಳು ಬೆಳೆದಿದ್ದು ಅದನ್ನು ಸೂಕ್ತ ನಿರ್ವಹಣೆ ಮಾಡುತ್ತಿಲ್ಲ. ಗಿಡಗಂಟಿ ಬೆಳೆದಿರುವುದು ಕುಸಿತಕ್ಕೆ ಕಾರಣವಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ನಿತಿನ್ ನಗರ ಆರೋಪಿಸಿದ್ದಾರೆ.
‘ಕೊಳಗಳು ಮಾತ್ರವಲ್ಲದೇ ಕೋಟೆಯ ಬೃಹತ್ ಗೋಡೆಗಳ ಮೇಲೂ ಗಿಡಗಳು ಬೆಳೆದು ಪೊದೆಗಳಾಗುತ್ತಿರುವ ಕಾರಣ, ಅಲ್ಲಲ್ಲಿ ಗೋಡೆ ಕುಸಿತವೂ ಕಂಡು ಬಂದಿದೆ. ಸಂಬಂಧಪಟ್ಟ ಕೇಂದ್ರ ಪುರಾತತ್ವ ಇಲಾಖೆ ಸೂಕ್ತ ನಿರ್ವಹಣೆ ಮಾಡುವ ಮೂಲಕ ಐತಿಹಾಸಿಕ ಬಿದನೂರು ಕೋಟೆಯನ್ನು ಸಂರಕ್ಷಣೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.
ಅಲ್ಲದೇ ಇದೀಗ ಕುಸಿದಿರುವ ಕೊಳದ ದಂಡೆ ಮತ್ತು ಗೋಡೆಯನ್ನು ಸೂಕ್ತ ತಂತ್ರಜ್ಞಾನ ಬಳಸಿ ಇತಿಹಾಸದ ಮಾದರಿಯಲ್ಲೇ ಪುನಃ ನಿರ್ಮಾಣ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.