ADVERTISEMENT

ಧರ್ಮಗಳ ನಡುವೆ ವಿಷಬೀಜ ಬಿತ್ತಿದ ಬಿಜೆಪಿ: ಮಧು ಬಂಗಾರಪ್ಪ

ಮಧು ಬಂಗಾರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 4:34 IST
Last Updated 8 ಆಗಸ್ಟ್ 2022, 4:34 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಸೊರಬ: ದೇಶದ ಜನರನ್ನು ಒಡೆದು ಆಳಿದ ಬ್ರಿಟಿಷರಂತೆ ಬಿಜೆಪಿ ನಾಯಕರು ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತಿ, ಅಶಾಂತಿ ಉಂಟುಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ದೂರಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರಗಳು ಜಾತಿ, ಮತ, ಧರ್ಮಗಳನ್ನು ಒಡೆಯುವ ಕೆಲಸ ಮಾಡಬಾರದು. ವಿಷಕಾರಿ ಭಕ್ತರಿಂದ ಬಿಜೆಪಿಯೇ ಸರ್ವನಾಶವಾಗಲಿದೆ. ದೇಶದ ಅಭಿವೃದ್ಧಿ, ಜನಸಾಮಾನ್ಯರ ಬದುಕಿಗೆ ಯೋಜನೆಗಳನ್ನು ರೂಪಿಸುವ ಬದಲಿಗೆ ನಿರಂತರ ಬೆಲೆ ಏರಿಕೆ, ಸಂವಿಧಾನ ತಿದ್ದುಪಡಿ, ಅಶಾಂತಿಗೆ ಮುಂದಾಗಿ ಜನರ ನೆಮ್ಮದಿಗೆ ಕೊಳ್ಳಿ ಇಟ್ಟಿದೆ. ಈ ಬಗ್ಗೆ ಜನರು ಎಚ್ಚೆತ್ತಿದ್ದಾರೆ’ ಎಂದರು.

ದೇಶ ಸ್ವಾತಂತ್ರ್ಯ ಪಡೆದು 75 ವರ್ಷಗಳು ತುಂಬುತ್ತಿದ್ದು, ಕಾಂಗ್ರೆಸ್ ಪಕ್ಷಾತೀತವಾಗಿ ಆಚರಿಸಲು ಮುಂದಾಗಿದೆ. ಎಲ್ಲಾ ಪಕ್ಷ, ಜನಸಾಮಾನ್ಯರು ಪಾಲ್ಗೊಳ್ಳಬೇಕು. ಜಿಲ್ಲೆಯಲ್ಲಿ ಬಾವುಟ ಹಿಡಿದು 75 ಕಿ.ಮೀ ಪಾದಯಾತ್ರೆ ಹಮ್ಮಿಕೊಂಡಿದ್ದು, ಸೊರಬದಲ್ಲಿ ಆಗಸ್ಟ್ 9ರಂದು ಬೆಳಿಗ್ಗೆ 8.30ಕ್ಕೆ ಬಿಳವಾಣಿಯಿಂದ ಸೊರಬಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ADVERTISEMENT

‘ಸಂವಿಧಾನ ಬದಲಿಸುತ್ತೇವೆ, ಕೆಂಪುಕೋಟೆ ಮೇಲಿನ ಬಾವುಟ ಬದಲಿಸಿ ಧರ್ಮದ ಬಾವುಟ ಹಾರಿಸುತ್ತೇವೆ ಎನ್ನುವ ಕೇಂದ್ರ ಸರ್ಕಾರ ಅಮೃತ ಮಹೋತ್ಸವವನ್ನು ವಿಶೇಷವಾಗಿ ಆಚರಿಸಲು ಹೊರಟಿರುವ ಹಿಂದೆ ರಾಜಕೀಯ ದುರುದ್ದೇಶವಿದೆ. ಬಿಜೆಪಿ ಸರ್ಕಾರ ಖಾಸಗೀಕರಣದ ಮೂಲಕದೇಶದ ಆಸ್ತಿ ಹರಾಜು ಮಾಡಿ ಆಡಳಿತ
ನಡೆಸುತ್ತಿದೆ’ ಎಂದು ಆರೋಪಿಸಿದರು.

ಅತಿವೃಷ್ಟಿಯಿಂದ ಕಂಗೆಟ್ಟ ರೈತರ ನೆರವಿಗೆ ಮುಂದಾಗಿಲ್ಲ. ಬಡವರಿಗೆ ಮನೆ ಕಟ್ಟಿಕೊಳ್ಳುವ ಭಾಗ್ಯ ಇಲ್ಲದಂತಾಗಿದೆ. ಬಗರ್‌ಹುಕುಂ ಜಮೀನಿಗೆ ಹಕ್ಕುಪತ್ರ ನೀಡುವ ಬದಲಿಗೆ, ಹಕ್ಕುಪತ್ರ ಪಡೆದ ರೈತರನ್ನು ಭೂಗಳ್ಳರೆಂಬ ಹಣೆಪಟ್ಟಿ ಕಟ್ಟಿ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಲಾಗಿದೆ ಎಂದು ದೂರಿದರು.

ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಸಿ. ಪಾಟೀಲ್, ಎಚ್.ಗಣಪತಿ, ಜೆ.ಪ್ರಕಾಶ್, ಮಂಜುನಾಥ್, ಕಲ್ಲಪ್ಪ ಚಿತ್ರಟ್ಟೆಹಳ್ಳಿ, ಎಂ.ಡಿ.ಶೇಖರ್, ಶಿವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.