ADVERTISEMENT

ಶಿವಮೊಗ್ಗ: ಮಳೆ-ಗಾಳಿ ಆರ್ಭಟಕ್ಕೆ ಅರ್ಧಕ್ಕೆ ಮೊಟಕುಗೊಂಡ ಬಿಜೆಪಿ ಜನಾಕ್ರೋಶ ಯಾತ್ರೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 13:27 IST
Last Updated 12 ಏಪ್ರಿಲ್ 2025, 13:27 IST
   

ಶಿವಮೊಗ್ಗ: ಬೆಲೆ ಏರಿಕೆ, ಭ್ರಷ್ಟಾಚಾರ ವಿರೋಧಿಸಿ ಶನಿವಾರ ಸಂಜೆ ಆಯೋಜಿಸಿದ್ದ ಬಿಜೆಪಿ ಜನಾಕ್ರೋಶ ಯಾತ್ರೆ ಭಾರಿ ಮಳೆ-ಗಾಳಿಯ ಆಕ್ರೋಶಕ್ಕೆ ಸಿಲುಕಿ ಅರ್ಧಕ್ಕೆ ಮೊಟಕುಗೊಂಡಿತು.

ಮಳೆ-ಗಾಳಿಯ ಆರ್ಭಟಕ್ಕೆ ಸಿಲುಕಿ ಸಭಾ ಕಾರ್ಯಕ್ರಮದ ಸುತ್ತ ಹಾಕಿದ್ದ ಬ್ಯಾನರ್, ಫ್ಲೆಕ್ಸ್ ಗಳು ಕಿತ್ತು ಹೋದವು. ಕುರ್ಚಿಗಳು ಹಾರಿಹೋದವು. ಮುಖ್ಯ ವೇದಿಕೆಯ ಹಿಂಭಾಗದ ಬೃಹತ್ ಕಟೌಟ್ ಹಿಡಿದುಕೊಂಡು ಮುರಿದು ಬೀಳುವುದನ್ನು ಬಿಜೆಪಿ ಕಾರ್ಯಕರ್ತರು ತಡೆದರು. ಗಾಳಿಯ ಬಿರುಸು ತಡೆಯಲು ಕೊನೆಗೆ ಕಟೌಟ್ ಹರಿದು ಹಾಕಲಾಯಿತು.

ಜನಕ್ರೋಶ ಯಾತ್ರೆ ಅಮೀರ್ ಅಹಮದ್ ವೃತ್ತಕ್ಕೆ ಬರುತ್ತಿದ್ದಂತೆಯೇ ಮೋಡ ದಟ್ಟೈಸಿತು. ಹೀಗಾಗಿ ಸಂಘಟಕರು ಅವಸರದಲ್ಲಿಯೇ ಗೋಪಿ ವೃತ್ತಕ್ಕೆ ಬಂದು ಸಭಾ ಕಾರ್ಯಕ್ರಮ ಆರಂಭಿಸಿದರು.

ADVERTISEMENT

ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತು ಆರಂಭಿಸುತ್ತಿದ್ದಂತೆಯೇ ನಿಧಾನವಾಗಿ ಮಳೆ ಆರಂಭವಾಯಿತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತಾಡುತ್ತಿದ್ದಂತೆಯೇ ಮಳೆ ಆರ್ಭಟಿಸತೊಡಗಿತು. ಈ ವೇಳೆ ವೇದಿಕೆಯಲ್ಲಿದ್ದ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕರಾದ ಅಶೋಕ ನಾಯ್ಕ, ಎಸ್.ರುದ್ರೇಗೌಡ ಅವರಿಗೆ ಅಂಗರಕ್ಷಕರು ಛತ್ರಿ ಹಿಡಿದು ಮಳೆಯಿಂದ ರಕ್ಷಣೆ ನೀಡಿದರು.

ವಿಜಯೇಂದ್ರ ಅವರು ಮಾತು ಮುಂದುವರೆಸುತ್ತಿದ್ದಂತೆಯೇ ಮಳೆಯ ಆರ್ಭಟ ಹೆಚ್ಚಾಯಿತು. ಕುರ್ಚಿಗಳನ್ನು ತಲೆಗೆ ಅಡ್ಡಲಾಗಿ ಹಿಡಿದು ನಿಂತಿದ್ದ ಕಾರ್ಯಕರ್ತರು ಚೆಲ್ಲಾಪಿಲ್ಲಿಯಾಗಿ ಓಡಿದರು.

ವಿಜಯೇಂದ್ರ ಮಾತು ಮುಗಿಸುತ್ತಿದ್ದಂತೆಯೇ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಗಣ್ಯರು ತೆರಳಿದರು. ನಂತರವೂ ಮಳೆ ಬಿರುಸುಗೊಂಡಿತು. ಗಾಳಿಯ ರಭಸಕ್ಕೆ ಗೋಪಿ ವೃತ್ತದ ಎದುರಿನ ಕಟ್ಟಡದ ಮೇಲಿನ ಬೃಹತ್ ಕಟೌಟ್ ಕಿತ್ತು ಹೋಯಿತು. ನಗರದ ಹಲವೆಡೆ ಮರಗಳ ಟೊಂಗೆಗಳು ಮುರಿದುಬಿದ್ದು ಸಂಚಾರಕ್ಕೆ ಅಡಚಣೆಯಾಯಿತು.

ಜೋರು ಮಳೆ ನಂತರವೂ ಮುಂದುವರೆದಿತ್ತು. ನಗರದ ಬಹಳಷ್ಟು ಭಾಗ ವಿದ್ಯುತ್ ಕಡಿತಗೊಂಡು ಕತ್ತಲೆಯಲ್ಲಿ ಮುಳುಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.