
ಹೊಸನಗರ: ‘ಇಲ್ಲಿನ ಶಾಸಕರ ಅಣತಿಯಂತೆ ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ಕೊಡುವ ಕೆಲಸವನ್ನು ಪೊಲೀಸ್ ಇಲಾಖೆ ಮತ್ತು ಇತರೆ ಅಧಿಕಾರಿಗಳು ಮಾಡುತ್ತಿದ್ದಾರೆ. ಅಧಿಕಾರಿಗಳ ಈ ದಬ್ಬಾಳಿಕೆಯನ್ನು ಸಹಿಸುವುದಿಲ್ಲ’ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.
ತಾಲ್ಲೂಕು ಬಿಜೆಪಿ ಮಂಡಲ ವತಿಯಿಂದ ಪಟ್ಟಣದ ಪೊಲೀಸ್ ಠಾಣೆ ಎದುರು ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಲಾಗಿದೆ. ನ್ಯಾಯಯುತವಾಗಿ ದುಡಿಮೆ ಮಾಡಿಕೊಂಡಿರುವ ಕಾರ್ಯಕರ್ತರಿಗೆ ತೊಂದರೆ ನೀಡಲಾಗುತ್ತಿದೆ. ಅಧಿಕಾರಿಗಳು ವಿರೋಧ ಪಕ್ಷವನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ದಬ್ಬಾಳಿಕೆಗೆ ಪಕ್ಷ, ಕಾರ್ಯಕರ್ತರು ಎಂದಿಗೂ ಹೆದರುವುದಿಲ್ಲ ಎಂದರು.
ಕಾರ್ಯಕರ್ತರ ಮೇಲೆ ಹೂಡಲಾದ ಪ್ರಕರಣಗಳ ಕುರಿತು ಸಮಗ್ರ ತನಿಖೆ ಜೊತೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಪೂರ್ವ ನಿಯೋಜಿತ: ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ, ‘ಕೆಲ ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತರ ಮೇಲೆ ದಾಖಲಾದ ಪ್ರಕರಣ ಪೂರ್ವ ನಿಯೋಜಿತ. ಇದರಲ್ಲಿ ಇಲ್ಲಿನ ಕಾಂಗ್ರೆಸ್ ಶಾಸಕರು ಹಾಗೂ ಅವರ ಆಪ್ತರ ಹಸ್ತಕ್ಷೇಪವಿದೆ. ಅವರ ಅಣತಿಯಂತೆ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿದೆ. ಈ ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆಯಾದರೆ ಸತ್ಯಾಸತ್ಯತೆ ಹೊರಬರಲಿದೆ’ ಎಂದರು.
ಹೊಸನಗರದಲ್ಲಿ ವಿದ್ಯುತ್ ಸಮಸ್ಯೆ, ಬಗರ್ ಹುಕುಂ ರೈತರ ಸಮಸ್ಯೆ ಸರಿಪಡಿಸುವ ಕೆಲಸ ಮಾಡುವ ಬದಲು ಇಲ್ಲಿನ ಶಾಸಕರು ದ್ವೇಷ ರಾಜಕಾರಣವನ್ನು ಮಾಡುತ್ತಿದ್ದಾರೆ. ಇಂತಹ ದುರಾಡಳಿತವನ್ನು ಹಿಂದೆ ಕಂಡಿಲ್ಲ. ಇದು ದುಷ್ಟತನದ ಪರಮಾವಧಿ ಆಗಿದೆ ಎಂದರು.
ಶಾಸಕರಾದ ಆರಗ ಜ್ಞಾನೇಂದ್ರ, ಚನ್ನಬಸಪ್ಪ, ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್, ತಾಲ್ಲೂಕು ಘಟಕದ ಅಧ್ಯಕ್ಷ ಎನ್. ಸತೀಶ್, ಮುಖಂಡರಾದ ಟಿ.ಡಿ. ಮೇಘರಾಜ್, ಎಂ.ಎನ್. ಸುಧಾಕರ್, ಪದ್ಮಿನಿ ರಾವ್, ಹಾಲಗದ್ದೆ ಉಮೇಶ್, ಕೆ.ವಿ. ಕೃಷ್ಣಮೂರ್ತಿ, ಗಣಪತಿ ಮಾಮ್, ಉಮೇಶ್ ಕಂಚುಗಾರ್, ಎನ್.ಆರ್. ದೇವಾನಂದ್, ಆರ್.ಟಿ. ಗೋಪಾಲ್, ಸುರೇಶ್ ಸ್ವಾಮಿರಾವ್, ವೀರೇಶ್ ಆಲವಳ್ಳಿ, ಸುರೇಂದ್ರ ಕೊಟ್ಯಾನ್, ಮೋಹನ್ ಮಂಡಾನಿ, ನಿತಿನ್ ನಗರ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.