ADVERTISEMENT

‘ಬಿಜೆಪಿ ಗಿಮಿಕ್ಕಿನಿಂದ ಗೆಲ್ಲುವುದಿಲ್ಲ’

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 3:58 IST
Last Updated 24 ಜನವರಿ 2023, 3:58 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ತೀರ್ಥಹಳ್ಳಿ: ‘ಕ್ಷೇತ್ರದ ಅಭಿವೃದ್ಧಿಗಾಗಿ ₹ 3,167 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಬಿಜೆಪಿ ಯಾವುದೇ ಗಿಮಿಕ್ಕಿನಿಂದ ಗೆಲ್ಲುವುದಿಲ್ಲ. ಅಭಿವೃದ್ಧಿ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತೇವೆ’ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದಿನ 10 ವರ್ಷಗಳ ಅವಧಿಯಲ್ಲಿ ಗೆದ್ದವರು ನಿಷ್ಕ್ರಿಯ ಜನಪ್ರತಿನಿಧಿಯಾಗಿದ್ದರು. ಬಿಜೆಪಿ ಪ್ರಬಲ ಸಂಘಟನೆಯ ಜೊತೆಗೆ ಜನರ ನಂಬಿಕೆ ಉಳಿಸಿಕೊಂಡಿದೆ’
ಎಂದರು.

‘ಗೃಹ ಸಚಿವನಾಗಿ ಒಂದೂ ಕಾಲು ವರ್ಷ ರಾಜ್ಯದ 1.10 ಲಕ್ಷ ಪೊಲೀಸರ ನಿರ್ವಹಣೆಯನ್ನು ಪ್ರಾಮಾಣಿಕನಾಗಿ ನಿಭಾಯಿಸಿದ್ದೇನೆ. ನಿರೀಕ್ಷೆ ಮೀರಿ ಕೆಲಸ ಮಾಡಿದ್ದು ವಿರೋಧ ಪಕ್ಷದವರೇ ಮೆಚ್ಚಿದ್ದಾರೆ. ಕೆಲವರು ಮಾತ್ರ ರಾಜಕೀಯ ದ್ವೇಷದಿಂದ ಅಪಪ್ರಚಾರದಲ್ಲಿ ತೊಡಗಿದ್ದಾರೆ’ ಎಂದು ದೂರಿದರು.

ADVERTISEMENT

‘ಬಿಜೆಪಿಗೆ ಪಾರದರ್ಶಕ ಆಡಳಿತ ನೀಡಿದ ಹೆಮ್ಮೆ ಇದೆ. ಸಂಘಟನೆ ಬಲಪಡಿಸಲು ಜ. 21ರಿಂದ 29ರವರೆಗೆ ಬೂತ್ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿ ಮನೆಗೂ ತೆರಳಿ ಕೇಂದ್ರ, ರಾಜ್ಯ ಸರ್ಕಾರದ ಸಾಧನೆಯ ಮಾಹಿತಿ ನೀಡುತ್ತಿದ್ದೇವೆ. ಗ್ರಾಮಗಳಲ್ಲಿ ಗೋಡೆ ಬರಹ, ಸದಸ್ಯತ್ವ ನೋಂದಣಿ, ಮಿಸ್ಡ್‌ಕಾಲ್‌ ನೋಂದಣಿ, ಸ್ಟಿಕ್ಕರ್‌ ಅಂಟಿಸುವ ಮೂಲಕ ಮಂತ್ರಿಗಳ ಸಾಧನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಪ್ರಧಾನ ಮಂತ್ರಿಗಳ ‘ಮನ್‌ ಕೀ ಬಾತ್‌’ ಕಾರ್ಯಕ್ರಮ ಪ್ರಚಾರ ಪಡಿಸುತ್ತಿದ್ದೇವೆ’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ’


ಹೇಳಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್‌ ಹೆದ್ದೂರು, ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್‌ ಮೇಗರವಳ್ಳಿ, ಕವಿರಾಜ್‌ ಬೇಗುವಳ್ಳಿ, ಮಾಧ್ಯಮ ಪ್ರಮುಖ್‌ ಸಂದೇಶ್‌ ಜವಳಿ ಇದ್ದರು.

...........

‘ಮಾಜಿ ಸಚಿವರು ಶಿಕ್ಷಕರ ನೇಮಕಾತಿ ಹಗರಣ ಮುಚ್ಚಿದ್ದೇಕೆ?’

ಎರಡು ಬಾರಿ ಗೆದ್ದು ವಿಫಲರಾಗಿದ್ದ ಮಾಜಿ ಶಿಕ್ಷಣ ಸಚಿವರನ್ನು ಮತದಾರರು ತಿರಸ್ಕರಿಸಿದ್ದಾರೆ. ಪ್ರಾಮಾಣಿಕರೆನ್ನುವ ಮಾಜಿ ಸಚಿವರು ಶಿಕ್ಷಕರ ನೇಮಕಾತಿ ಹಗರಣ ಮುಚ್ಚಿದ್ದೇಕೆ. ಅರ್ಜಿ ಹಾಕದೇ ಶಿಕ್ಷಕರಾಗಿ ನೇಮಕಗೊಂಡ ಆರೋಪಿಗಳು ಜೈಲು ಪಾಲಾಗಿದ್ದಾರೆ. ಪಿಎಸ್‌ಐ ಹಗರಣ ಗೊತ್ತಾದ ತಿಂಗಳಲ್ಲೇ ಸಿಐಡಿ ತನಿಖೆಗೆ ಒಪ್ಪಿಸಿದ್ದೇನೆ. ಹಿರಿಯ ಐಪಿಎಸ್‌ ಅಧಿಕಾರಿಯನ್ನು ಜೈಲಿಗೆ ತಳ್ಳಿದ್ದೇನೆ. ಮಾಜಿ ಸಚಿವರ ಧೋರಣೆ ಖಂಡಿಸಿ ಬಿಜೆಪಿ ಸಿದ್ಧಾಂತ ಒಪ್ಪಿ ಕಾಂಗ್ರೆಸ್‌ ಪಕ್ಷ ತ್ಯಜಿಸಿ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ’ ಎಂದು ಮಾಜಿ ಸಚಿವ ಕಿಮ್ಮನೆ ಹೆಸರು ಹೇಳದೇ ಆರಗ ಜ್ಞಾನೇಂದ್ರ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.