ADVERTISEMENT

ಜನರಿಗೆ ಮೋದಿ ಜನಪರ ಯೋಜನೆ ತಿಳಿಸಿ

ಬಿಜೆಪಿ ಕಾರ್ಯಕರ್ತರ ಸಭೆ: ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 4:16 IST
Last Updated 9 ಜುಲೈ 2025, 4:16 IST
ಶಿವಮೊಗ್ಗ ವಿಭಾಗದ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಂಗಳವಾರ ಉದ್ಘಾಟಿಸಿದರು
ಶಿವಮೊಗ್ಗ ವಿಭಾಗದ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಂಗಳವಾರ ಉದ್ಘಾಟಿಸಿದರು   

ಶಿವಮೊಗ್ಗ: ‘ಬಿಜೆಪಿಯ ಎಲ್ಲ ಕಾರ್ಯಕರ್ತರೂ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಜನಪರ ಯೋಜನೆಗಳ ಬಗ್ಗೆ ತಿಳಿಸುವ ರಾಯಭಾರಿಗಳಾಗಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಲಹೆ ನೀಡಿದರು.

ಬಂಜಾರ ಸಮುದಾಯ ಭವನದಲ್ಲಿ ಬಿಜೆಪಿ ಶಿವಮೊಗ್ಗ ವಿಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್, ಇತರ ಪಕ್ಷಗಳು ಹಾಗೂ ಬಿಜೆಪಿ ನಡುವೆ ವ್ಯತ್ಯಾಸವಿದೆ. ಬಿಜೆಪಿ ಕಾರ್ಯಕರ್ತರಿಗೆ ಉದ್ದೇಶ ಮತ್ತು ಗುರಿ ಇದೆ. ರಾಷ್ಟ್ರೀಯತೆಯ ಬದ್ಧತೆಯೂ ಇದೆ. ಪಕ್ಷದ ಲಕ್ಷಾಂತರ ಕಾರ್ಯಕರ್ತರು ಒಂದು ನಿಶ್ಚಿತ ಧ್ಯೇಯವನ್ನಿಟ್ಟುಕೊಂಡು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಬೇರೆ ಪಕ್ಷದಲ್ಲಿ ನೋಡಲು ಸಾಧ್ಯವಿಲ್ಲ ಎಂದರು.

ADVERTISEMENT

ದೇಶದಲ್ಲಿ ಕಾಂಗ್ರೆಸ್ 60 ವರ್ಷಗಳ ಕಾಲ ಆಡಳಿತ ನಡೆಸಿದ್ದು ಕೇವಲ ಅನುಕಂಪದ ಆಧಾರದ ಮೇಲೆ. ಆದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಸಕಾರಾತ್ಮಕ ಜನಾದೇಶದ ಮೇಲೆ. ಹೀಗಾಗಿ ನರೇಂದ್ರ ಮೋದಿ ಅವರು ಕೊಟ್ಟ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸುವ ಕರ್ತವ್ಯ ಕಾರ್ಯಕರ್ತರದ್ದು. ಪಕ್ಷ ಬಲಪಡಿಸುವ ಕೆಲಸ ಒಂದೆಡೆಯಾದರೆ ಕೇಂದ್ರದ ಯೋಜನೆಗಳನ್ನು ಮನೆಮನೆಗೆ ತಲುಪಿಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರದ ಶಾಸಕರ ಹೇಳಿಕೆ ಗಮನಿಸಿದರೆ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ನಾಲ್ಕು ತಿಂಗಳಿಂದ ಪಡಿತರ ಸಾಗಣೆ ಲಾರಿ ಮಾಲೀಕರಿಗೆ ₹260 ಕೋಟಿ ಬಾಡಿಗೆ ಕೊಡದ ಕಾರಣ ಅವರು ಮುಷ್ಕರಕ್ಕೆ ಇಳಿದಿದ್ದಾರೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಸರ್ಕಾರ ಜನತೆಗೆ ಶಾಪವಾಗಿ ಪರಿಣಮಿಸಿದೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಶಾಂತಾರಾಮ ಸಿದ್ದಿ, ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ, ಮಾಜಿ ಶಾಸಕರಾದ ಡಿ.ಎನ್.ಜೀವರಾಜ್, ರೂಪಾಲಿ ನಾಯ್ಕ, ಸುನಿಲ್ ನಾಯ್ಕ್, ಶಿವಾನಂದ ನಾಯ್ಕ, ಎಸ್.ರುದ್ರೇಗೌಡ, ಡಿ.ಎಸ್.ಸುರೇಶ್, ಕೆ.ಜಿ.ಕುಮಾರಸ್ವಾಮಿ, ಎನ್.ಎಸ್.ಹೆಗಡೆ, ಸ್ವಾಮಿರಾವ್, ಸುನೀಲ್ ಹೆಗಡೆ, ಮುಖಂಡರಾದ ಟಿ.ಡಿ.ಮೇಘರಾಜ್, ಎಸ್.ದತ್ತಾತ್ರಿ ಹಾಜರಿದ್ದರು.

ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿ: ವಿಜಯೇಂದ್ರ

ಶಿವಮೊಗ್ಗ: ‘ರಾಜ್ಯದ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ. ಆದರೆ ಸರ್ಕಾರ ಎಲ್ಲವೂ ಚೆನ್ನಾಗಿದೆ ಎಂದು ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಮಹಾನಗರ ಪಾಲಿಕೆಗಳ ನೌಕರರು ಬೀದಿಗಳಿದು ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಪಡಿತರ ಸಾಗಣೆ ವಾಹನ ಮಾಲೀಕರಿಗೆ ಬಾಡಿಗೆ ಕೊಡದೇ ಅವರೂ ಮುಷ್ಕರ ಆರಂಭಿಸಿದ್ದಾರೆ. 10 ಕೆ.ಜಿ ಅಕ್ಕಿ ಕೊಡುತ್ತಿದ್ದ ಸರ್ಕಾರ ಈಗ ಅದನ್ನು ಐದು ಕೆ.ಜಿಗೆ ಇಳಿಸಿದೆ. ಅನ್ನ ಭಾಗ್ಯಕ್ಕೆ ತಾನೇ ಕನ್ನ ಹಾಕುತ್ತಿದೆ ಎಂದು ಕುಟುಕಿದರು. ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಸರ್ಕಾರದ ಬಳಿ ದುಡ್ಡಿಲ್ಲ. ಶಾಸಕರ ಪ್ರದೇಶಾಭಿವೃದ್ಧಿಗೂ ಅನುದಾನ ನೀಡಲು ಆಗುತ್ತಿಲ್ಲ. ಸಿಎಂ ಆಡಳಿತದ ಮೇಲಿನ ಸಂಪೂರ್ಣ ಹಿಡಿತ ಕಳೆದುಕೊಂಡಿದ್ದಾರೆ. ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ದೂರಿದರು.

ಗೃಹಲಕ್ಷ್ಮಿಗೆ ಹಣ ಮನೆಯಿಂದ ಕೊಡುತ್ತಿದ್ದಾರಾ? ಹಾಲಪ್ಪ ಪ್ರಶ್ನೆ

‘ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಹೆಣ್ಣುಮಕ್ಕಳಿಗೆ ₹52000 ಕೋಟಿ ಕೊಡುತ್ತಿದ್ದೇವೆ ಅನ್ನುತ್ತೀರಿ. ಅದು ಯಾರ ದುಡ್ಡು? ಕಾಂಗ್ರೆಸ್ ಕಾರ್ಯಕರ್ತರು ಮನೆಯಿಂದ ಹಣ ತಂದುಕೊಡುತ್ತಾರಾ?’ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಪ್ರಶ್ನಿಸಿದರು. ಸಭೆಯಲ್ಲಿ ಮಾತನಾಡಿದ ಅವರು ‘ಸಿಗಂದೂರು ಸೇತುವೆ ನಿರ್ಮಿಸಲು ಬಿಜೆಪಿಯವರು ಅವರ ಮನೆಯ ದುಡ್ಡು ತಂದಿದ್ದಾರಾ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದರು. ‘ಸೇತುವೆ ಕಟ್ಟಲು ಯಾರೂ ಯಾರ ಮನೆಯಿಂದಲೂ ಹಣ ತಂದಿರುವುದಿಲ್ಲ. ಎಲ್ಲವೂ ತೆರಿಗೆ ಹಣ ತಂದೇ ಸೇತುವೆ ರಸ್ತೆ ನಿರ್ಮಿಸುತ್ತಾರೆ. ನೀವು ಮಾಡಪ್ಪಾ ನೀವೂ ಮಾಡಿ’ ಎಂದು ಹಾಲಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.