ADVERTISEMENT

ಸುಂದರೇಶ್ ನೆನಪಿಗೆ 21ರಂದು ರಕ್ತದಾನ ಶಿಬಿರ

ರೈತ ಸಂಘದ ಎಚ್‌.ಆರ್. ಬಸವರಾಜಪ್ಪ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 5:03 IST
Last Updated 18 ಡಿಸೆಂಬರ್ 2021, 5:03 IST
ಎಚ್.ಆರ್.ಬಸವರಾಜಪ್ಪ
ಎಚ್.ಆರ್.ಬಸವರಾಜಪ್ಪ   

ಶಿವಮೊಗ್ಗ: ರೈತ ಸಂಘದ ಸಂಸ್ಥಾಪಕ ಎನ್.ಡಿ. ಸುಂದರೇಶ್ ಅವರ ನೆನಪಿನ ಸಭೆ ಅಂಗವಾಗಿ ಶಿವಮೊಗ್ಗದ ರೋಟರಿ ರಕ್ತನಿಧಿಯಲ್ಲಿ ರೈತ ಸಂಘದಿಂದ ಡಿ.21ರಂದು ಬೆಳಿಗ್ಗೆ 10ಕ್ಕೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಗೌರವಾಧ್ಯಕ್ಷ ಎಚ್‌.ಆರ್. ಬಸವರಾಜಪ್ಪ ಹೇಳಿದರು.

‘ಎನ್.ಡಿ. ಸುಂದರೇಶ್ ರೈತರ ಕಣ್ಮಣಿಯಾಗಿದ್ದಾರೆ. ರೈತರ ಪರವಾಗಿ ರಾಜ್ಯದಾದ್ಯಂತ ಸಂಘಟನೆ ಮಾಡಿ ಹೋರಾಟ ಮಾಡಿದವರು. ಅವರ 29ನೇ ವರ್ಷದ ನೆನಪಿನ ಸಭೆಯನ್ನು ರೈತ ಸಂಘ ಅತ್ಯಂತ ಕಾಳಜಿಯಿಂದ ಮಾಡುತ್ತದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಒಬ್ಬ ವ್ಯಕ್ತಿ ರಕ್ತ ಕೊಡುವುದರಿಂದ 4 ಜನರ ಪ್ರಾಣ ಉಳಿಸಬಹುದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನದಲ್ಲಿ ಭಾಗವಹಿಸಬೇಕು. ರಕ್ತದಾನ ಮಾಡುವವರು 9449968599, 8971868408ಗೆ ಸಂಪರ್ಕಿಸಬಹುದು’ ಎಂದು ತಿಳಿಸಿದರು.

ADVERTISEMENT

‘ರಾಜ್ಯ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ಡಿ.20ರಂದು ಬೆಳಗಾವಿಯಲ್ಲಿ ರೈತ ಸಂಘದಿಂದ ಬಾರುಕೋಲು ಚಳವಳಿ ಹಮ್ಮಿಕೊಂಡಿದ್ದು, ಜಿಲ್ಲೆಯಿಂದ 200 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು’ ಎಚ್‌.ಆರ್. ಬಸವರಾಜಪ್ಪ ಆಗ್ರಹಿಸಿದರು.

‘ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೃಷಿ ಸಚಿವರು 10 ದಿನಗಳ ಕಾಲಾವಕಾಶ ಕೇಳಿದ್ದರು. ಅಧಿವೇಶನದಲ್ಲಿ ಚರ್ಚೆ ನಡೆಸುವುದಾಗಿಯೂ ತಿಳಿಸಿದ್ದರು. ಆದರೆ, 10 ದಿನ ಮುಗಿದು ಅಧಿವೇಶನ ನಡೆಯುತ್ತಿದ್ದರೂ ಯಾವೊಬ್ಬ ರಾಜಕಾರಣಿಯೂ ರೈತರ ಸಮಸ್ಯೆ, ಜನರ ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಆರೋಪಿಸಿದರು.

‘ಬೆಳಗಾವಿ ಅಧಿವೇಶನ ಆರಂಭದಿಂದಲೂ ಆಡಳಿತ ಪಕ್ಷದವರು ಜನರ ದಾರಿ ತಪ್ಪಿಸಲು ಜ್ವಲಂತ ಸಮಸ್ಯೆಗಳನ್ನು ಮರೆಮಾಚಿ, ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಇದಕ್ಕೆ ತಾಳ ಎಂಬಂತೆ ವಿರೋಧ ಪಕ್ಷಗಳು ನಡೆದುಕೊಳ್ಳುತ್ತಿವೆ. ಕೃಷಿ ಕಾಯ್ದೆಯಿಂದ ರೈತರು ಇಷ್ಟೆಲ್ಲ ಸಮಸ್ಯೆ ಎದುರಿಸಿದರೂ ರಾಜಕಾರಣಿಗೆ ಅದರ ಬಗ್ಗೆ ಅರಿವಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಠ ಅನುಭವಿಸಿದರು. ಅದರ ನೋವು ಜನ ಪ್ರತಿನಿಧಿಗಳಿಗೆ ಗೊತ್ತಾಗುತ್ತಿಲ್ಲ’ ಎಂದು ಖಾರವಾಗಿ ಟೀಕಿಸಿದರು.

ಶಿರಸ್ತೆದಾರ ಅಮಾನತ್ತಿಗೆ ಆಗ್ರಹ: ‘ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಶಿವಮೊಗ್ಗ ತಾಲ್ಲೂಕು ಕಚೇರಿಯ ಶಿರಸ್ತೇದಾರ ಅವರನ್ನು ಅಮಾನತು ಮಾಡಬೇಕು’ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು ಒತ್ತಾಯಿಸಿದರು.

ತಾಲ್ಲೂಕು ಕಚೇರಿಯಲ್ಲಿ ಕೆಲವು ಅಧಿಕಾರಿಗಳು ಅತ್ಯಂತ ಗರ್ವದಿಂದ ನಡೆದುಕೊಳ್ಳುತ್ತಿದ್ದಾರೆ. ಕಚೇರಿಗೆ ಹೋಗುವ ರೈತರು ಮತ್ತು ಸಾರ್ವಜನಿಕರಿಗೆ ಕನಿಷ್ಠ ಗೌರವವನ್ನು ಕೊಡುತ್ತಿಲ್ಲ. ಅವರೇ ಸಣ್ಣಪುಟ್ಟ ತಪ್ಪುಗಳನ್ನು ಮಾಡಿ ಅದನ್ನು ಸರಿಪಡಿಸಲು ತಿಂಗಳಗಟ್ಟಲೆ ಅಲೆದಾಡಿಸುತ್ತಿದ್ದಾರೆ. ತಕ್ಷಣ ಇವರನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಡಿ. ನಾಗರಾಜ್, ಕೆ. ರಾಘವೇಂದ್ರ, ರುದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.