ADVERTISEMENT

ಕಾಣೆಯಾದ ಯುವಕನ ಶವ ಪತ್ತೆ: ಕೊಲೆ ಎಂದ ಕಾಲೋನಿ ಗೆಳೆಯರು

ಕೊಲೆ ಪ್ರಕರಣ ದಾಖಲಿಸಲು ಸ್ಥಳೀಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 3:13 IST
Last Updated 4 ಅಕ್ಟೋಬರ್ 2022, 3:13 IST
ಜಮೀರ್
ಜಮೀರ್   

ಭದ್ರಾವತಿ: ಈಚೆಗೆ ಕಾಣೆಯಾಗಿದ್ದ ಇಲ್ಲಿನಅನ್ವರ್ ಕಾಲೊನಿ ನಿವಾಸಿ ಮೆಕ್ಯಾನಿಕ್ ಜಮೀರ್ (19) ಶವ ಸೋಮವಾರ ಬೆಳಿಗ್ಗೆ ತರೀಕೆರೆ ರಸ್ತೆ ಅಂಡರ್ ಪಾಸ್ ಬಳಿಯ ಭದ್ರಾನದಿ ತಟದಲ್ಲಿ ಪತ್ತೆಯಾಗಿದೆ.

ಆಕ್ರೋಶಗೊಂದ ಕಾಲೊನಿಯ ನೂರಾರು ಯುವಕರು, ‘ಇದು ಕೊಲೆ. ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಜಮೀರ್ ಕಾಣೆಯಾದ ಸಂಬಂಧ ಶನಿವಾರ ಹೊಸಮನೆ ಠಾಣೆಯಲ್ಲಿ ದೂರು ದಾಖಲಾಗಿತ್ತು.ಸೋಮವಾರ ಬೆಳಿಗ್ಗೆ ಶವ ಸಿಕ್ಕಿದ್ದು, ಆತನ ದ್ವಿಚಕ್ರ ವಾಹನ ಕೋಡಿಹಳ್ಳಿ ರಸ್ತೆಯ ಮೀನಾ ನರ್ಸಿಂಗ್ ಹೋಂ ಹಿಂಭಾಗದ ರಸ್ತೆಯಲ್ಲಿ ಸಿಕ್ಕಿದೆ ಎನ್ನಲಾಗಿದೆ.

ADVERTISEMENT

ಯುವಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜಮಾಯಿಸಿದ ನೂರಾರು ಯುವಕರು ಶವವನ್ನು ಆಂಬುಲೆನ್ಸ್‌ನಲ್ಲಿ ಇಟ್ಟುಕೊಂಡು ರಂಗಪ್ಪವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಮಧ್ಯೆ ಪ್ರವೇಶಿಸಿದ ಪೊಲೀಸರು, ಮುಖಂಡರು ಪರಿಸ್ಥಿತಿ ತಿಳಿಗೊಳಿಸಿ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಶವವನ್ನು ಸಾಗಿಸಿದರು.

ಘಟನೆ ವಿವರ: ಮೆಕ್ಯಾನಿಕ್‌ ಆಗಿದ್ದ ಜಮೀರ್ ಶುಕ್ರವಾರ ರಾತ್ರಿ ಟಿವಿ ಸರಿಪಡಿಸಲು ದೇವರನರಸೀಪುರ ಗ್ರಾಮದ ಮನೆಯೊಂದಕ್ಕೆ ಹೋಗಿದ್ದ. ೊಂದು ದಿನ ಆದರೂ ಬಾರದ ಕಾರಣ ಅವರ ತಾಯಿ ಹಾಗೂ ಅಂಗಡಿ ಮಾಲೀಕರು ಭಾನುವಾರ ಹೊಸಮನೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಜಮೀರ್ ದೇವರನರಸೀಪುರ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳಿದ್ದ ದೃಶ್ಯ ಗ್ರಾಮದ ರಂಗನಾಥಸ್ವಾಮಿ ದೇವಾಲಯದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜಮೀರ್‌ ಕುಟುಂಬಸ್ಥರು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಕೊಲೆ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

‘ಶವದ ತನಿಖಾ ವರದಿ ನಂತರ ಸಿಗುವ ಆಧಾರದ ಮೇಲೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಬದ್ಧ’ ಎಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಮೂರ್ತೂಝಾಖಾನ್ ಹೇಳಿದರು.

ತನಿಖೆ ಚುರುಕು

ಜಮೀರ್ ಸಾವಿನ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದಾರೆ.ಜಮೀರ್ ದ್ವಿಚಕ್ರ ವಾಹನ ಕೋಡಿಹಳ್ಳಿ ರಸ್ತೆಯಲ್ಲಿ ಸಾಗಿರುವ ದೃಶ್ಯವನ್ನು ಕಲೆ ಹಾಕಿದ್ದಾರೆ.

ಬೈಕ್ ಬಿದ್ದ ಜಾಗದಿಂದ ರಾಜಕಾಲುವೆ ಹೋಗಿದೆ. ಅಲ್ಲಿ ಶವ ಸಿಕ್ಕಿರುವ ಕಾರಣ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.