ADVERTISEMENT

ಪ್ರಶ್ನಿಸುವ ಸಾಮರ್ಥ್ಯ ಕಳೆದುಕೊಂಡ ಸಮಾಜ

‘ಲಂಕೇಶ್ ಜೊತೆಗೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪ್ರೊ. ರಾಜೇಂದ್ರ ಚೆನ್ನಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 4:50 IST
Last Updated 12 ಸೆಪ್ಟೆಂಬರ್ 2021, 4:50 IST
ಶಿವಮೊಗ್ಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೊ.ರಾಜೇಂದ್ರ ಚೆನ್ನಿ ಅವರು ಅಂಕಣಕಾರ ಬಿ.ಚಂದ್ರೇಗೌಡ ಅವರ ‘ಲಂಕೇಶ್ ಜೊತೆಗೆ’ ಕೃತಿ ಲೋಕಾರ್ಪಣೆ ಮಾಡಿದರು.
ಶಿವಮೊಗ್ಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೊ.ರಾಜೇಂದ್ರ ಚೆನ್ನಿ ಅವರು ಅಂಕಣಕಾರ ಬಿ.ಚಂದ್ರೇಗೌಡ ಅವರ ‘ಲಂಕೇಶ್ ಜೊತೆಗೆ’ ಕೃತಿ ಲೋಕಾರ್ಪಣೆ ಮಾಡಿದರು.   

ಶಿವಮೊಗ್ಗ: ವ್ಯವಸ್ಥೆಯ ಲೋಪ, ಭ್ರಷ್ಟಾಚಾರ ಪ್ರಶ್ನಿಸುವ ಸಾಮರ್ಥ್ಯವನ್ನು ಸಮಾಜ ಕಳೆದುಕೊಂಡಿದೆ. ಅನೈತಿಕತೆ ಅಂತಹ ಅವಕಾಶವನ್ನೇ ಕಸಿದುಕೊಂಡಿದೆ ಎಂದು ಸಂಸ್ಕೃತಿ ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಕಳವಳ ವ್ಯಕ್ತಪಡಿಸಿದರು.

ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಸಭಾಂಗಣದಲ್ಲಿ ಹೊಂಗಿರಣ ಸಂಸ್ಥೆ ‘ಬೆಳ್ಳಿ ಹೆಜ್ಜೆ’ ರಂಗಪಯಣದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ
ಕಾರ್ಯಕ್ರಮದಲ್ಲಿ ಅಂಕಣಕಾರ ಬಿ.ಚಂದ್ರೇಗೌಡ ಅವರ ‘ಲಂಕೇಶ್ ಜೊತೆಗೆ’ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಲಂಕೇಶ್ ಪ್ರಜಾಪ್ರಭುತ್ವದ ಆಶಯಗಳನ್ನು ಗಟ್ಟಿಗೊಳಿಸುತ್ತಿದ್ದರು. ತಮ್ಮ ಸೂಕ್ಷ್ಮ ಗ್ರಹಿಕೆ, ಅವಲೋಕನದ ಮೂಲಕ ವ್ಯವಸ್ಥೆ ಮತ್ತು ಕೆಲವು ನಾಯಕರನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದರು. ಕುಟುಂಬದ ಸದಸ್ಯರು, ಸ್ನೇಹಿತರು, ಅವರ ಆತ್ಮೀಯರಲ್ಲೂ ಸಣ್ಣತನ ಅಪ್ರಾಮಾಣಿಕತೆ ಕಂಡುಬಂದರೆ ಸಹಿಸಿಕೊಳ್ಳುತ್ತಿರಲಿಲ್ಲ. ಅಂತಹ ನೈತಿಕ ಶಕ್ತಿ ಲಂಕೇಶ್ ಎಂದು ಸ್ಮರಿಸಿದರು.

ADVERTISEMENT

ಲಂಕೇಶ್ ಅವರ ಬರವಣಿಗೆ ಒಳಗಿನ ದೃಷ್ಟಿ ಚಂದ್ರೇಗೌಡರ ಬರವಣಿಗೆಯಲ್ಲೂ ಕಾಣುತ್ತದೆ. ಆಗಿನ ಸಮಯದಲ್ಲಿ ವ್ಯವಸ್ಥೆಯ ಲೋಪ, ಭ್ರಷ್ಟಾಚಾರ ಪ್ರಶ್ನಿಸುವ ಸಾಮರ್ಥ್ಯ ಸಾಮಾನ್ಯ ಜನರಲ್ಲೂ ಕಾಣಬಹುದಿತ್ತು. ಅನ್ಯಾಯ ಕಂಡರೆ ಜನರೂ ಪ್ರಶ್ನಿಸುತ್ತಿದ್ದರು. ಬರವಣಿಗೆ, ಹೋರಾಟಗಳ ಮೂಲಕ ಅಂತಹ ಶಕ್ತಿಯನ್ನು ಹಲವರು ತುಂಬುತ್ತಿದ್ದರು. ಈಗ ಅಂತಹ ಸ್ಥಿತಿ ಇಲ್ಲ. ದಲಿತ ಮಹಿಳೆಯರ ಮೇಲೆದೌರ್ಜನ್ಯವಾದರೂ ಪ್ರತಿಭಟಿಸುವ ಮನೋಭಾವ ಕಾಣುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು.

ಪುಸ್ತಕದ ಲೇಖಕ ಬಿ.ಚಂದ್ರೇಗೌಡ ಮಾತನಾಡಿ, ‘ಲಂಕೇಶ್ ಅವರು ಮನುಷ್ಯ ನೀಚ ಎಂದು ಪರಿಗಣಿಸಿದ್ದರು.ಲಂಕೇಶ್ ನಂಜುಂಡಸ್ವಾಮಿ ಜಗಳ, ಕ್ಷಮಿಸುವ ಇಂದು ಕಾಣಲು ಸಾಧ್ಯವಿಲ್ಲ. ಲಂಕೇಶ್ ಜತೆ ಇದ್ದವರೆಲ್ಲ ಒಮ್ಮೆಯೂ ಸೇರಲಿಲ್ಲ ಎನ್ನುವ ಕೊರಗಿದೆ’ ಎಂದು ಮನದಾಳ ತೋಡಿಕೊಂಡರು.

‘ಅಂದು ಸಮಾಜವಾದಿಗಳು ಭಾಷಣದ ಮೂಲಕ ಮತ ಪಡೆಯುತ್ತಿದ್ದರು. ಈಗ ದುಡ್ಡೇ ಪ್ರಧಾನ. ಕಾರಲ್ಲಿ ನಾಯಕರು ಬಂದರೆ, ಬೈಕಲ್ಲಿ ದುಡ್ಡು ಬರುತ್ತಿದೆ. ಜನರು ನೈತಿಕತೆ ಕಳೆದುಕೊಂಡಿದ್ದಾರೆ. ಲಂಕೇಶ್ ಅಂಥವರು ಇಲ್ಲದ ಕೊರತೆ ಕಾಡುತ್ತಿದೆ’ಎಂದರು.

ಪುಸ್ತಕ ಕುರಿತು ಅಹರ್ನಿಶಿ ಪ್ರಕಾಶನದ ಮುಖ್ಯಸ್ಥೆ ಅಕ್ಷತಾ ಹುಂಚದಕಟ್ಟೆ ಮಾತನಾಡಿ, ‘ಲಂಕೇಶರ ವ್ಯಕ್ತಿತ್ವದ ಹಲವು ಮಗ್ಗಲುಗಳನ್ನು ಕೃತಿ ಘಟನಾವಳಿಗಳ ಮೂಲಕ ಆಪ್ತವಾಗಿ ತೆರೆದಿಟ್ಟಿದೆ. ಭ್ರಷ್ಟರು, ಓಲೈಕೆ ರಾಜಕಾರಣ ಮಾಡುವವರು, ಮತಾಂಧರ ಬಗೆಗೆ ಲಂಕೇಶರಿಗೆ ಇದ್ದ ಸಿಟ್ಟು ಮತ್ತು ಸ್ಪಷ್ಟತೆ, ಯಾರನ್ನಾದರೂ ಎದುರುಹಾಕಿಕೊಳ್ಳಲು ಹಿಂದೆ ಮುಂದೆ ನೋಡದ ಅವರ ಬದ್ಧತೆಯನ್ನು ಕೃತಿಯಲ್ಲಿ ಚಂದ್ರೇಗೌಡರು ನಿರೂಪಿಸಿದ್ದಾರೆ. ಲಂಕೇಶ್ ಇಲ್ಲದೆ ಇಪ್ಪತ್ತು ವರುಷಗಳಾದರೂ ಅವರು ಪ್ರತಿಪಾದಿಸಿದ ಮೌಲ್ಯಗಳು ಜೀವಂತವಾಗಿವೆ. ಚಂದ್ರೇಗೌಡರು ಲಂಕೇಶರ ಜೊತೆಗಿನ ಒಡನಾಟವನ್ನು ಧ್ಯಾನಿಸಿ, ಕೃತಿ ರೂಪಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಂಗ ನಿರ್ದೇಶಕ ಡಾ.ಸಾಸ್ವೆಹಳ್ಳಿ ಸತೀಶ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.