ಶಿವಮೊಗ್ಗ: ‘ಇಂದಿನ ದುರಿತ ಕಾಲದಲ್ಲಿ, ಆತಂಕ, ಹತಾಶೆಯ ಈ ಕಾಲಘಟ್ಟದಲ್ಲಿ ಏನಾದರೂ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ರೂಪದಲ್ಲಿ ಕವಿ ಸತ್ಯನಾರಾಯಣರಾವ್ ಅಣತಿ ಕಾವ್ಯ ತೋರುತ್ತದೆ’ ಎಂದು ಪ್ರಾಧ್ಯಾಪಕಿ ಪ್ರೊ. ಭಾರತಿದೇವಿ ಅಭಿಪ್ರಾಯಪಟ್ಟರು.
ಇಲ್ಲಿನ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭಾನುವಾರ ನಡೆದ ಕವಿ, ನಾಟಕಕಾರ ಸತ್ಯನಾರಾಯಣರಾವ್ ಅಣತಿ ಅವರ ಸಮಗ್ರ ಕಾವ್ಯ ‘ಮೌನ ಮಿಗಿಲು’ ಹಾಗೂ ಹೊಸ ನಾಟಕ ‘ನೀಲಾಂಜನೆ ಮಣಿಮೇಖಲೈ’ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಬರವಣಿಗೆ ಮೂಲಕ ಅಭಿವ್ಯಕ್ತಿ ಮಾಡುವ ಜೊತೆಗೆ ನಿರುಪಾಯರಾಗುವ ಈ ಹೊತ್ತಿನಲ್ಲಿ ಅಣತಿ ಅವರ ಕಾವ್ಯ ದಾರಿ ತೋರಿಸಿಕೊಡುತ್ತದೆ. ಪ್ರೊ.ರಾಜೇಂದ್ರ ಚೆನ್ನಿ ಅವರ ಮಾತಿನಂತೆ ಎಲ್ಲ ಕೆಡುಕುಗಳಾಚೆ ಪ್ರೀತಿಯ ಆಪ್ತ ಜಗತ್ತಿನ ಹುಡುಕಾಟಕ್ಕೆ ಸತ್ವವನ್ನು ಈ ಕಾವ್ಯ ತೋರುತ್ತದೆ. ಬದುಕಿಗೆ ಕಾರಣ ಕಂಡುಕೊಳ್ಳಲು ನೆರವಾಗುತ್ತದೆ ಎಂದು ಹೇಳಿದರು.
ಸ್ವಾತಂತ್ರ್ಯೋತ್ತರ ಭಾರತದ ವಿದ್ಯಮಾನಗಳನ್ನು ಅವರ ಬರಹದಲ್ಲಿ ಹಿಡಿದಿಟ್ಟಿದ್ದಾರೆ. ಜಾಗತಿಕವಾದ ಸಂಗತಿಗಳನ್ನು ಸ್ಥಳೀಯವಾದ ವಿಚಾರಗಳೊಟ್ಟಿಗೆ ಜೋಡಿಸುವುದು ಅವರ ಬರವಣಿಗೆಯ ವಿಶೇಷ. ಕನ್ನಡ ಸಾಹಿತ್ಯದ ವಿವಿಧ ಕಾಲಘಟ್ಟದ ಶ್ರೇಷ್ಠ ಬರವಣಿಗೆಯಲ್ಲಿ ಸಮಕಾಲೀನರೊಂದಿಗೆ ಅಣತಿ ಅವರಿಗೂ ಆ ಶ್ರೇಯ ದಕ್ಕುತ್ತದೆ ಎಂದರು.
ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು ಕೃತಿಗಳನ್ನು ಲೋಕಾರ್ಪಣೆ ಮಾಡಿದರು.
ಧಾರವಾಡದ ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ, ಕಾರ್ಕಳ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ್, ಪ್ರಕಾಶಕ ಬಿ.ಎಸ್. ವಿದ್ಯಾರಣ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.