ADVERTISEMENT

ಐಟಿ ರಿಟರ್ನ್ಸ್; 6,200 ಬಿಪಿಎಲ್ ಕಾರ್ಡ್ ರದ್ದು!

ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಪಡೆದು ಆಹಾರ ಇಲಾಖೆಯ ಕ್ರಮ

ವೆಂಕಟೇಶ ಜಿ.ಎಚ್.
Published 31 ಅಕ್ಟೋಬರ್ 2025, 5:15 IST
Last Updated 31 ಅಕ್ಟೋಬರ್ 2025, 5:15 IST
ಪಡಿತರ ಚೀಟಿ (ಸಾಂದರ್ಭಿಕ ಚಿತ್ರ)
ಪಡಿತರ ಚೀಟಿ (ಸಾಂದರ್ಭಿಕ ಚಿತ್ರ)   

ಶಿವಮೊಗ್ಗ: ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ರಿಟರ್ನ್ಸ್ (ಐಟಿ ರಿಟರ್ನ್ಸ್) ಪ್ರತಿಯ ಮಾಹಿತಿ ಆಧರಿಸಿ ಇಲ್ಲಿನ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ 6,200 ಮಂದಿ ಅನರ್ಹ ಬಿಪಿಎಲ್ ಪಡಿತರ ಚೀಟಿ ಹೊಂದಿದವರನ್ನು ಪತ್ತೆ ಮಾಡಿದೆ. ಅವರ ಬಿಪಿಎಲ್ ಕಾರ್ಡ್ ರದ್ದು‍ಪಡಿಸಿ ಎಪಿಎಲ್‌ಗೆ ಬದಲಾಯಿಸಿದೆ.

ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರ ಪತ್ತೆ ಅಭಿಯಾನವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತೀವ್ರಗೊಳಿಸಿದ್ದು, ₹25 ಲಕ್ಷಕ್ಕಿಂತ ಹೆಚ್ಚು ಮೊತ್ತದ ಜಿಎಸ್‌ಟಿ ಪಾವತಿಸಿರುವ 50ಕ್ಕೂ ಹೆಚ್ಚು ವಹಿವಾಟುದಾರರನ್ನು ಗುರುತಿಸಿ ಅವರ ಬಿಪಿಎಲ್‌ ಕಾರ್ಡ್ ರದ್ದು ಮಾಡಿ, ಎಪಿಎಲ್ ವಿತರಿಸಲಾಗಿದೆ.

‘ಬ್ಯಾಂಕ್ ಖಾತೆಗೆ ಜೋಡಣೆಯಾದ ಆಧಾರ್ ಸಂಖ್ಯೆ ಹಾಗೂ ಐಟಿ ರಿಟರ್ನ್ಸ್‌ನ ರಸೀದಿ ಆಧರಿಸಿದ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಯಿಂದ ಪಡೆದು ಈ ಅನರ್ಹ ಬಿಪಿಎಲ್ ಪಡಿತರದಾರರನ್ನು ಗುರುತಿಸಿದ್ದೇವೆ. ಈ ಪ್ರಕ್ರಿಯೆ ಮುಂದುವರೆಯಲಿದೆ’ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಅವಿನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ಜಿಲ್ಲೆಯಲ್ಲಿ ಒಟ್ಟು 3.80 ಲಕ್ಷ ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳು ಇವೆ. ಕೇಂದ್ರದ ಮಾನದಂಡ ಆಧರಿಸಿ, ಸ್ವಂತ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಪ್ರಕ್ರಿಯೆ ಸದ್ಯಕ್ಕೆ ಕೈಗೆತ್ತಿಕೊಂಡಿಲ್ಲ. ಅನರ್ಹರ ಪತ್ತೆ ಅಭಿಯಾನ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು. 

ನವೆಂಬರ್‌ ಅಂತ್ಯಕ್ಕೆ ಹೊಸ ಕಾರ್ಡ್: ಶಿವಮೊಗ್ಗ ಜಿಲ್ಲೆಯಲ್ಲಿ ಹೊಸದಾಗಿ 3,400 ಮಂದಿ ಬಿಪಿಎಲ್ ಕಾರ್ಡ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅವುಗಳನ್ನು ಪರಿಶೀಲನೆ ಮಾಡಿ ಅರ್ಹರನ್ನು ಗುರುತಿಸಿ ಇಟ್ಟುಕೊಳ್ಳಲಿದ್ದೇವೆ. ನವೆಂಬರ್ ಅಂತ್ಯಕ್ಕೆ ಹೊಸ ಕಾರ್ಡ್ ವಿತರಣೆಗೆ ಸರ್ಕಾರದಿಂದ ಅನುಮತಿ ದೊರೆಯಲಿದೆ. ನಂತರ ಕಾರ್ಡ್ ವಿತರಣೆ ಮಾಡಲಿದ್ದೇವೆ ಎಂದು ಅವಿನ್ ತಿಳಿಸಿದರು.

ನ್ಯಾಯ ಬೆಲೆ ಅಂಗಡಿ (ಸಂಗ್ರಹ ಚಿತ್ರ)
ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸೆಪ್ಟೆಂಬರ್ ಅಂತ್ಯದವರೆಗಿನ ಕಮಿಷನ್ ಮೊತ್ತ ₹4.5 ಕೋಟಿ ಬಿಡುಗಡೆ ಆಗಿದೆ. ಬಿಲ್ ಮಾಡುತ್ತಿದ್ದೇವೆ. ವಾರದೊಳಗೆ ಎಲ್ಲರಿಗೂ ಪಾವತಿಯಾಗಲಿದೆ
ಆವಿನ್ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ

ಮೇ ತಿಂಗಳಿಂದ ಕಮಿಷನ್ ಕೊಟ್ಟಿಲ್ಲ..

ಪಡಿತರ ಸಾಮಗ್ರಿ ವಿತರಿಸುವ ರಾಜ್ಯದ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಳೆದ ಮೇ ತಿಂಗಳಿಂದ ಸರ್ಕಾರ ಕಮಿಷನ್ ಕೊಟ್ಟಿಲ್ಲ. ಜಿಲ್ಲೆಯಲ್ಲಿ ಒಟ್ಟು 597 ನ್ಯಾಯಬೆಲೆ ಅಂಗಡಿಗಳಿದ್ದು ಸರ್ಕಾರ ಕೊಡುವ ಕಮಿಷನ್ ಹಣವನ್ನೇ ಬದುಕಿಗೆ ಆಶ್ರಯಿಸಿದವರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಸರ್ಕಾರ ಪ್ರತಿ ಕ್ವಿಂಟಲ್‌ ಪಡಿತರಕ್ಕೆ ₹150 ಕಮಿಷನ್ ಕೊಡುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ತಿಂಗಳಿಗೆ ಒಟ್ಟು 1.20 ಲಕ್ಷ ಕ್ವಿಂಟಲ್ ಪಡಿತರ ಸಾಮಗ್ರಿ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಆಗುತ್ತಿದೆ.  ‘ಬೆಂಗಳೂರಿನಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಆಹಾರ ಇಲಾಖೆಯ ಕೇಂದ್ರ ಕಚೇರಿಯ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಬಿಲ್ ಮಾಡುವುದು ವಿಳಂಬವಾಗಿದೆ’ ಎಂದು ಇಲಾಖೆಯ ಮೂಲಗಳು ಹೇಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.