ADVERTISEMENT

ತಂದೆ–ತಾಯಿಗೇ ಮನೆ ಬಾಡಿಗೆ ಪಾವತಿಸುವ ಮಕ್ಕಳು: ಸಮೀಕ್ಷೆ ವೇಳೆ ಬಹಿರಂಗ

ಬಿಪಿಎಲ್ ಕಾರ್ಡ್‌ ಹೊಂದಿರುವವರ ಕುಟುಂಬ ಪ್ರತ್ಯೇಕವೆಂದು ನೋಂದಾಯಿಸಲು ಬೇಡಿಕೆ

ನಾಗರಾಜ ಹುಲಿಮನೆ
Published 9 ಅಕ್ಟೋಬರ್ 2025, 4:16 IST
Last Updated 9 ಅಕ್ಟೋಬರ್ 2025, 4:16 IST
<div class="paragraphs"><p>ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ </p></div>

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ

   

ಪ್ರಾತಿನಿಧಿಕ ಚಿತ್ರ

ಶಿವಮೊಗ್ಗ: ‘ನಮಗೆ ಸ್ವಂತ ಸೂರಿಲ್ಲ. ತಂದೆ–ತಾಯಿಯ ಆಶ್ರಯದಲ್ಲಿದ್ದೇವೆ. ಈಗ ವಾಸಿಸುತ್ತಿರುವ ಮನೆಯ ಯಜಮಾನರು ಅಂದರೆ, ತಂದೆ– ತಾಯಿಗೆ ಪ್ರತಿ ತಿಂಗಳು ₹2,000 ಬಾಡಿಗೆ ಕಟ್ಟುತ್ತಿದ್ದೇವೆ. ನಮ್ಮದು ಪ್ರತ್ಯೇಕ ಕುಟುಂಬ ಎಂಬುದಾಗಿ ಸಮೀಕ್ಷೆಯಲ್ಲಿ ನಮೂದಿಸಿ. ಒಂದು ವೇಳೆ ಇದು ಸಾಧ್ಯವಿಲ್ಲದಿದ್ದರೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದಿಲ್ಲ...’

ADVERTISEMENT

ಹೀಗೆಂದು ಗ್ರಾಮೀಣ ಭಾಗದ ನಿವಾಸಿಗಳು ಹೇಳುತ್ತಿದ್ದು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರುವ ಸಮೀಕ್ಷಕರು ಸವಾಲು ಎದುರಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಆರ್ಥಿಕವಾಗಿ ಸದೃಢವಾಗಿರುವ ಅನೇಕ ಅವಿಭಕ್ತ ಕುಟುಂಬಗಳ ಸದಸ್ಯರು ಒಂದೇ ಸೂರಿನಡಿ ವಾಸವಿದ್ದರೂ ಪ್ರತ್ಯೇಕವಾಗಿ ಬಿಪಿಎಲ್ ಕಾರ್ಡ್‌ಗಳನ್ನು ಪಡೆದಿದ್ದಾರೆ. ಸ್ವಂತ ಮನೆಯಲ್ಲಿದ್ದರೂ, ಆಶ್ರಯ ಪಡೆಯಲು ‘ಮನೆಯ ಯಜಮಾನರಿಗೆ (ತಂದೆ–ತಾಯಿ) ಬಾಡಿಗೆ ನೀಡುತ್ತಿದ್ದೇವೆ’ ಎಂಬುದಾಗಿ ಸಮೀಕ್ಷೆ ವೇಳೆ ಮಾಹಿತಿ ನೀಡುತ್ತಿದ್ದಾರೆ. ಸಮೀಕ್ಷಕರಿಗೆ ತಮ್ಮದು ವಿಭಕ್ತ ಕುಟುಂಬ ಎಂದು ನಮೂದಿಸುವಂತೆ ದುಂಬಾಲು ಬೀಳುತ್ತಿದ್ದಾರೆ.

ಕುಟುಂಬದ ಯಜಮಾನನ ಹೆಸರಲ್ಲಿ ಸ್ಥಿರಾಸ್ತಿ ಹಾಗೂ ವಾರ್ಷಿಕ ₹1.20 ಲಕ್ಷಕ್ಕಿಂತ ಹೆಚ್ಚು ಆದಾಯ ಇದ್ದರೆ ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹ. ಈ ಕಾರಣಕ್ಕೆ  ಕೆಲವರು ಆಸ್ತಿ ಹೊಂದಿರುವ ಸ್ವಂತ ತಂದೆ–ತಾಯಿಯನ್ನೇ ದಾಖಲೆಗಳಿಂದ ಹೊರಗಿಟ್ಟು, ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಒಂದೇ ಮನೆಯ ಸದಸ್ಯರಾಗಿದ್ದರೂ, ಎರಡಕ್ಕಿಂತ ಹೆಚ್ಚು ಕುಟುಂಬಗಳಾಗಿ ಸರ್ಕಾರಕ್ಕೆ ಮಾಹಿತಿ ಒದಗಿಸಿದ್ದಾರೆ.

‘ಮೆಸ್ಕಾಂ ಸಿಬ್ಬಂದಿ ಪ್ರತಿ ಮನೆಗೆ ತೆರಳಿ ಎಸ್ಎಚ್‌ಐಡಿ ಮ್ಯಾಪಿಂಗ್ ಮಾಡಿ ಹೋಗಿದ್ದಾರೆ. ಮನೆಯ ವಿದ್ಯುತ್ ಮೀಟರ್‌ನ ಖಾತೆ ಸಂಖ್ಯೆ (ಆರ್‌.ಆರ್‌.ಸಂಖ್ಯೆ) ಒಂದಕ್ಕಿಂತ ಹೆಚ್ಚಿದ್ದರೆ ಕುಟುಂಬಗಳನ್ನು ವಿಂಗಡಿಸಲು ಅವಕಾಶವಿದೆ. ಆದರೆ, ಆರ್‌.ಆರ್‌.ಸಂಖ್ಯೆ ಒಂದೇ ಆಗಿದ್ದು, ಪ್ರತ್ಯೇಕ ಬಿಪಿಎಲ್ ಕಾರ್ಡ್ ಹೊಂದಿರುವ ಮಕ್ಕಳು ‘ಮನೆಯಲ್ಲಿ ವಾಸಿಸಲು ಬಾಡಿಗೆ ನೀಡುತ್ತಿದ್ದೇವೆ. ಆದ್ದರಿಂದ, ಸಮೀಕ್ಷೆಯಲ್ಲಿ ಪ್ರತ್ಯೇಕಗೊಳಿಸುವಂತೆ ಕೇಳಿಕೊಳ್ಳುತ್ತಾರೆ’ ಎಂದು ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬಿಪಿಎಲ್ ಕಾರ್ಡ್‌ ಪಡೆದಿರುವ ಉದ್ದೇಶದಿಂದ ಕೆಲವರು ಒಂದೇ ಕುಟುಂಬದಲ್ಲಿದ್ದರೂ ಗಂಡನೇ ಬೇರೆ, ಹೆಂಡತಿಯೇ ಬೇರೆ ಎಂಬುದಾಗಿ ದಾಖಲೆ ಸೃಷ್ಟಿಸಿದ್ದಾರೆ. ಗಂಡನ ಹೆಸರಿನಲ್ಲಿ ಮಾತ್ರ ಆಸ್ತಿ ಇದೆ. ಕೆಲವರಂತೂ ಸಮರ್ಪಕವಾದ ಮಾಹಿತಿ ನೀಡುತ್ತಿಲ್ಲ. ಸ್ವಂತ ವಾಹನಗಳಿದ್ದರೂ ಸಮೀಕ್ಷೆಯಲ್ಲಿ ನಮೂದಿಸುತ್ತಿಲ್ಲ. ಸಮೀಕ್ಷೆ ವೇಳೆಯೇ ಎಸ್ಎಚ್‌ಐಡಿ ರಚಿಸುವ ಅವಕಾಶವಿದೆ. ವಿಧಿ ಇಲ್ಲದೇ ಪ್ರತ್ಯೇಕ ಕುಟುಂಬ ಎಂದು ನಮೂದಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.