ಗೋಪಾಲಕೃಷ್ಣ ಬೇಳೂರು
ಸಾಗರ: ಬಹು ನಿರೀಕ್ಷಿತ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಉದ್ಘಾಟನೆಗೆ ಜುಲೈ 14ರಂದು ದಿನಾಂಕ ನಿಗದಿ ಮಾಡಿರುವುದು ಹರ್ಷದಾಯಕ ಸಂಗತಿಯಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಐದು ದಶಕಗಳ ಕಾಲದ ಶರಾವತಿ ಹಿನ್ನೀರಿನ ಸಂತ್ರಸ್ತರ ಕನಸು ನನಸಾಗುವ ಕಾಲ ಈಗ ಸನ್ನಿಹಿತವಾಗಿದೆ. ಸೇತುವೆ ನಿರ್ಮಾಣದ ಬೇಡಿಕೆಗೆ ಆಗ್ರಹಿಸಿ ದೀರ್ಘಕಾಲ ನಡೆದ ಹೋರಾಟಕ್ಕೆ ಸಂದಿರುವ ಜಯ ಇದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನೂತನ ಸೇತುವೆ ಸಂಚಾರಕ್ಕೆ ಮುಕ್ತವಾದ ನಂತರ ಹಿನ್ನೀರಿನಲ್ಲಿ ಈಗ ಸಂಚರಿಸುತ್ತಿರುವ ಲಾಂಚ್ ನ್ನು ಪ್ರವಾಸೋದ್ಯಮ ಇಲಾಖೆ ಸುಪರ್ದಿಗೆ ನೀಡಲಾಗುವುದು. ಸೇತುವೆ ಉದ್ಘಾಟನೆ ನಂತರವೂ ಲಾಂಚ್ ಸಂಚಾರ ಮುಂದುವರೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈಚೆಗೆ ಸೇತುವೆ ಕಾಮಗಾರಿ ವೀಕ್ಷಿಸಲು ಸ್ಥಳಕ್ಕೆ ಆಗಮಿಸಿದ್ದ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇತುವೆ ಉದ್ಘಾಟನೆ ಸದ್ಯಕ್ಕಿಲ್ಲ ಎಂದು ಹೇಳಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ನಾನು ಶುಕ್ರವಾರ ಸೇತುವೆ ಬಳಿ ಹೋಗಿ ಬಂದ ತಕ್ಷಣ ಸಂಸದರು ಉದ್ಘಾಟನೆ ದಿನಾಂಕ ಘೋಷಿಸಿದ್ದಾರೆ. ಏನೇ ಆದರೂ ಸೇತುವೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗುತ್ತಿರುವುದು ಸಂತೋಷದ ವಿಷಯ. ಸೇತುವೆ ಹೋರಾಟಕ್ಕೆ ಶ್ರಮಿಸಿದ ಎಲ್ಲರಿಗೂ ಉದ್ಘಾಟನೆ ಸಂದರ್ಭದಲ್ಲಿ ಮನ್ನಣೆ ದೊರಕಬೇಕಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.