ADVERTISEMENT

ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತನ್ನಿ: ಸಚಿವ ಕೆ.ಎಸ್‌.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 5:24 IST
Last Updated 6 ಡಿಸೆಂಬರ್ 2021, 5:24 IST
ಶಿವಮೊಗ್ಗ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾದ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಉದ್ಘಾಟಿಸಿದರು.
ಶಿವಮೊಗ್ಗ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾದ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಉದ್ಘಾಟಿಸಿದರು.   

ಶಿವಮೊಗ್ಗ: ಮುಂಬರುವ ಚುನಾವಣೆಯಲ್ಲಿ ಹಿಂದುಳಿದ ವರ್ಗದ ಜನರು ಬಿಜೆಪಿಯನ್ನು ಬೆಂಬಲಿಸಬೇಕು. ಪೂರ್ಣ ಬಹುಮತದೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಮನವಿ ಮಾಡಿದರು.

ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ ಒಂದು ಬಾರಿಯೂ ಪೂರ್ಣ ಬಹುಮತದಿಂದ ಮುಖ್ಯಮಂತ್ರಿ ಆಗಲು ಸಾಧ್ಯವಾಗಿಲ್ಲ. ಹಾಗಾಗಿ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಿಂದುಳಿದ ವರ್ಗದ ಜನರು ಬಿಜೆಪಿಗೆ ಹೆಚ್ಚಿನ ಬೆಂಬಲ ನೀಡುವ ಮೂಲಕ ಪೂರ್ಣ ಬಹುಮತ ತರಬೇಕು’ ಎಂದು ಕರೆ ನೀಡಿದರು.

ADVERTISEMENT

‘ಎಲ್ಲಾ ಜಾತಿಗಳು ಸೇರಿ ಆಯಾ ಜಾತಿಗಳ ಅಭಿವೃದ್ಧಿಯಾದಾಗ ಮಾತ್ರ ಹಿಂದುತ್ವದ ಅಭಿವೃದ್ಧಿಯಾಗುತ್ತದೆ. ಹಿಂದುಳಿದ ವರ್ಗದವರಿಗೆ ಅವಕಾಶಗಳು ಕಡಿಮೆ ಎಂದು ಹೇಳುತ್ತಾರೆ. ಆದರೆ, ಅವಕಾಶಗಳನ್ನು ಪಡೆಯುವುದಕ್ಕಾಗಿ ಸಂಘಟನೆ ಬೆಳೆಯಬೇಕು. ಸಂಘಟನೆಯ ಮೂಲಕ ಅವಕಾಶಗಳನ್ನು ಸದುಪಯೋಗ ಮಾಡಿ ಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಅಶೋಕ್ ಮೂರ್ತಿ ಮಾತನಾಡಿ, ‘ಕಾಂಗ್ರೆಸ್ ಹಿಂದುಳಿದ ವರ್ಗದವರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿತು. ಯಾವುದೇ ಪ್ರಾತಿನಿಧ್ಯ ನೀಡದೇ ಜೀತದಂತೆ ಮಾಡಿದೆ’ ಎಂದರು.

‘ಹಿಂದುಳಿದ ವರ್ಗಗಳು ಕುಲಕಸುಬಿನ ಆಧಾರದ ಮೇಲೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ಜಾಗತೀಕರಣದ ಹೆಸರಿನಲ್ಲಿ ಕುಲಕಸುಬಿಗೂ ಕೊಡಲಿ ಪೆಟ್ಟು ನೀಡಿದೆ. ಇದರಿಂದ ಹಿಂದುಳಿದ ವರ್ಗದ ಕುಲಕಸುಬುಗಳು ನಶಿಸಿಹೋಗುತ್ತಿವೆ. ಪರ್ಯಾಯ ಬದುಕು ಕಟ್ಟಿಕೊಳ್ಳಲು ಸಹ ಕಾಂಗ್ರೆಸ್ ಅವಕಾಶ ನೀಡಲಿಲ್ಲ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮೇಘರಾಜ್ ಮಾತನಾಡಿ, ‘ಬಿಜೆಪಿ ಶೆಟ್ರು ಹಾಗೂ ಭಟ್ರು ಪಕ್ಷ ಎಂದುವಿರೋಧ ಪಕ್ಷದವರು ಹೇಳುತ್ತಾರೆ. ಬಿಜೆಪಿ ಶೆಟ್ರು, ಭಟ್ರು ಪಕ್ಷ ಅಲ್ಲ. ಬದಲಾಗಿ ಬಿಜೆಪಿ ಸರ್ವ ಸ್ಪರ್ಶಿ ಹಾಗೂ ಸರ್ವ ವ್ಯಾಪಿ ಪಕ್ಷ’ ಎಂದು ತಿಳಿಸಿದರು.

‘ವಿರೋಧ ಪಕ್ಷದವರಿಗೆ ಸ್ಥಾನಪಲ್ಲಟದ ಭಯವಾಗಿದೆ. ಹಾಗಾಗಿ ಅವರಿಗೆ ಅಹಿಂದ ನೆನಪಾಗುತ್ತದೆ. ಅಹಿಂದವನ್ನು ಅವರು ಏಣಿಯಾಗಿ ಬಳಕೆ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ. ಸಿದ್ಧರಾಮಣ್ಣ ಮಾತನಾಡಿ, ‘ಹಿಂದುಳಿದ ವರ್ಗ ಎಂದರೆ ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಎಂದು ಅನೇಕ ವರ್ಷಗಳಿಂದ ಕಾಂಗ್ರೆಸ್‌ನವರು ಭಾವಿಸಿದ್ದರು. ಆದರೆ, ಹಿಂದುಳಿದ ವರ್ಗದವರಿಗೆ ಆಗಬೇಕಿದ್ದ ಕೆಲಸ ಕಾರ್ಯಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರ ಮಾಡಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಇ. ಕಾಂತೇಶ್, ಮೇಯರ್ ಸುನಿತಾ ಅಣ್ಣಪ್ಪ, ಸಾಗರ ನಗರಸಭಾ ಅಧ್ಯಕ್ಷ ಮಧುರ ಶಿವನಂದಾ, ಪ್ರಮುಖರಾದ ಮಾಲತೇಶ್, ಜ್ಞಾನೇಶ್ವರ್, ಶಿವರಾಜ್, ಶ್ರೀನಾಥ್, ನಾರಾಯಣ್ ಆಚಾರ್ಯ, ಕನಕರಾಜ್ ಇದ್ದರು.

ಅವೆಲ್ಲಾ ನನ್ನ ಬಾಯಲ್ಲಿ ಬರುವಂತಹವು: ಈಶ್ವರಪ್ಪ

ಶಿವಮೊಗ್ಗ: ಆರಗ ಜ್ಞಾನೇಂದ್ರ ಅವರು ಪೊಲೀಸರಿಗೆ ಬೈದಿದ್ದು ಸರಿಯಾಗಿದೆ. ಅವರ ಕರ್ತವ್ಯವನ್ನು ನೆನಪು ಮಾಡಿ ಕೊಟ್ಟಿದ್ದಾರೆ. ಅವೆಲ್ಲಾ ನನ್ನ ಬಾಯಿಯಲ್ಲಿ ಬರುವಂತದ್ದು. ಆದರೆ, ಜ್ಞಾನೇಂದ್ರ ಬಾಯಲ್ಲಿ ಯಾಕೆ ಬಂತು ಅಂತಾ ಗೊತ್ತಾಗುತ್ತಿಲ್ಲ’ ಎಂದು ಕೆ.ಎಸ್‌.ಈಶ್ವರಪ್ಪ ಹೇಳಿದರು.

‘ನನ್ನನ್ನು ಹಾಗೂ ಆರಗ ಜ್ಞಾನೇಂದ್ರ ಅವರನ್ನು ಮುತ್ತು–ರತ್ನ ಎಂದು ಹೋಲಿಕೆ ಮಾಡಿರುವುದಕ್ಕೆ ಸಂತಸವಾಗಿದೆ. ‌ಗೋಸಾಗಣೆಯನ್ನು ತಡೆಯಲು ಹೋದವರ ಮೇಲೆ ವಾಹನ ಹತ್ತಿಸಿದ್ದಾರೆ. ಆಸ್ಪತ್ರೆಯಲ್ಲಿ ಅವರನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಒಂದೇ ಒಂದು ಮನೆ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಮನೆ ಕೂಡುವುದು ವಸತಿ ಇಲಾಖೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಮನೆ ಕಟ್ಟಿ ಹಂಚಲು ಬರುವುದಿಲ್ಲ. ನನ್ನನ್ನು ಟೀಕೆ ಮಾಡಿದರೆ ಮಾತ್ರ ಅವರಿಗೆ ತಿಂದ ಅನ್ನ ಕರಗುತ್ತದೆ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

‘ನಾನು ಇಲ್ಲವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ನಾನು ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ಮುಖ್ಯಮಂತ್ರಿಯಾಗಲು ಮುರುಗೇಶ ನಿರಾಣಿಗೆ ಅವರಿಗೆ ಅವಕಾಶವಿದೆ ಎಂದು ಹೇಳಿದ್ದೇನೆಯೇ ಹೊರತು ಅವರು ಈಗಲೇ ಮುಖ್ಯಮಂತ್ರಿಯಾಗುತ್ತಾರೆ’ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.