ADVERTISEMENT

ಬರಹಗಾರರನ್ನು ಗಾಢವಾಗಿ ಕಾಡಿದ ಬುದ್ಧನ ಬದುಕು: ವಿಕ್ರಮ್ ವಿಸಾಜಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 4:05 IST
Last Updated 6 ಅಕ್ಟೋಬರ್ 2025, 4:05 IST
ಸಾಗರ ಸಮೀಪದ ಹೆಗ್ಗೋಡಿನಲ್ಲಿ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದ ಅಂಗವಾಗಿ ಭಾನುವಾರ ನಡೆದ ಗೋಷ್ಠಿಯಲ್ಲಿ ವಿಕ್ರಮ್ ವಿಸಾಜಿ, ನಿತ್ಯಾನಂದ ಶೆಟ್ಟಿ ಪಾಲ್ಗೊಂಡಿದ್ದರು
ಸಾಗರ ಸಮೀಪದ ಹೆಗ್ಗೋಡಿನಲ್ಲಿ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದ ಅಂಗವಾಗಿ ಭಾನುವಾರ ನಡೆದ ಗೋಷ್ಠಿಯಲ್ಲಿ ವಿಕ್ರಮ್ ವಿಸಾಜಿ, ನಿತ್ಯಾನಂದ ಶೆಟ್ಟಿ ಪಾಲ್ಗೊಂಡಿದ್ದರು   

ಸಾಗರ: ಸಿದ್ಧಾರ್ಥ ಬುದ್ಧನಾಗಿ ಪರಿವರ್ತನೆಗೊಳ್ಳುವ ಬಿಂದು ಕನ್ನಡದ ಪ್ರಮುಖ ಬರಹಗಾರರನ್ನು ಗಾಢವಾಗಿ ಕಾಡಿದೆ ಎಂದು ಕಲಬುರಗಿ ಕರ್ನಾಟಕ ಕೇಂದ್ರೀಯ ವಿವಿ ಪ್ರಾಧ್ಯಾಪಕ ವಿಕ್ರಮ್ ವಿಸಾಜಿ ಹೇಳಿದರು.

ಸಮೀಪದ ಹೆಗ್ಗೋಡಿನ ನೀನಾಸಂ ಸಭಾಂಗಣದಲ್ಲಿ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದ ಅಂಗವಾಗಿ ಭಾನುವಾರ ನಡೆದ ‘ಕಾವ್ಯ ಪಠ್ಯಗಳು’ ಗೋಷ್ಠಿಯಲ್ಲಿ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ‘ಬುದ್ಧ ಚರಣ’ ಕಾವ್ಯದ ಕುರಿತು ಅವರು ಮಾತನಾಡಿದರು.

ಬುದ್ಧ ಚರಣ ಕಾವ್ಯದ ನುಡಿಗಟ್ಟು ಅಭಿಜಾತ ಶೈಲಿಯನ್ನು ನೆನಪಿಸುತ್ತದೆ. ಹಳೆಗನ್ನಡದ ದಕ್ಷ, ಸಮರ್ಥ ಹೆಣಿಗೆಯನ್ನು ಈ ಕಾವ್ಯದಲ್ಲಿ ಕಾಣಬಹುದು. ಬುದ್ಧನ ಪಯಣ, ಪರಿವರ್ತನೆ, ಬೌದ್ಧ ತತ್ವ ಈ ಮೂರೂ ಸಂಗತಿಗಳನ್ನು ವರ್ಣಾತ್ಮಕವಾಗಿ ವಿವರಿಸಿರುವುದು ಈ ಕಾವ್ಯದ ವಿಶೇಷತೆಯಾಗಿದೆ ಎಂದು ಬಣ್ಣಿಸಿದರು.

ADVERTISEMENT

ಸಂಬಂಧಗಳ ಜಟಿಲತೆ, ಭಾವನಾತ್ಮಕ ತೊಳಲಾಟಗಳನ್ನು ಎಚ್.ಎಸ್.ವಿ. ಈ ಕಾವ್ಯದಲ್ಲಿ ಪರಿಣಾಮಕಾರಿಯಾಗಿ ದಾಖಲಿಸಿದ್ದಾರೆ. ಇಲ್ಲಿನ ರೂಪಕ, ಪ್ರತಿಮೆಗಳು ವಿಭಿನ್ನ ಅರ್ಥಗಳಲ್ಲಿ ಧ್ವನಿಸುತ್ತದೆ. ಜ್ಞಾನೋದಯ, ಮೋಕ್ಷದ ವಿಷಯದಲ್ಲಿ ಹೆಣ್ಣಿಗೆ ಇರುವ ಸ್ಥಾನಗಳೇನು ಎನ್ನುವ ಪ್ರಶ್ನೆಗೆ ಕವಿ ಮುಖಾಮುಖಿಯಾಗುವ ಮೂಲಕ ಹೊಸ ಸಂವಾದಕ್ಕೆ ಕಾವ್ಯ ತೆರೆದುಕೊಳ್ಳುತ್ತದೆ ಎಂದು ವಿಶ್ಲೇಷಿಸಿದರು.

ರೂಪಾತ್ಮಕತೆ, ಚಿತ್ರಕಾವ್ಯ, ಮೌಲ್ಯ ವಿವೇಚನೆ, ತತ್ವ ವಿವೇಚನೆ, ಸಾಂಕೇತಿಕತೆ ಇವುಗಳೆಲ್ಲವನ್ನೂ ಎಚ್.ಎಸ್.ವಿ. ಬುದ್ಧ ಚರಣದಲ್ಲಿ ದೀರ್ಘವಾದ ಸಂಗೀತದ ಆಲಾಪದಂತೆ ಕಟ್ಟಿಕೊಟ್ಟಿದ್ದಾರೆ. ಉತ್ಕಟ ಭಾವನೆಗಳನ್ನು ಪ್ರಕಟಿಸಿ ನಂತರ ಹಗುರಗೊಳ್ಳುವ ಪ್ರಕ್ರಿಯೆ ಈ ಕಾವ್ಯ ರಚನೆಯಲ್ಲಿ ಕಾಣುತ್ತದೆ ಎಂದು ಅವರು ತಿಳಿಸಿದರು.

ಡಿ.ವಿ.ಗುಂಡಪ್ಪ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಕುವೆಂಪು ಅವರು ಶ್ರೀರಾಮನಿಗೆ ತಮ್ಮ ಕವಿತೆಗಳಲ್ಲಿ ಕೇಳಿದ ಪ್ರಶ್ನೆಗಳ ಕುರಿತು ಮಾತನಾಡಿದ ತುಮಕೂರು ವಿವಿ ಪ್ರಾಧ್ಯಾಪಕ ನಿತ್ಯಾನಂದ ಶೆಟ್ಟಿ, ಈ ಸಂಬಂಧದ ಪಠ್ಯಗಳು ಅನುವಾದ, ರೂಪಾಂತರದ ಚೌಕಟ್ಟುಗಳನ್ನು ಮೀರಿದ ಸಾಹಿತ್ಯಾನುಸಂಧಾನವಾಗಿದೆ ಎಂದು ವಿವರಿಸಿದರು.

ಒಂದು ಸಂಬಂಧವನ್ನು ಮರಳಿ ಕಟ್ಟುವ ವಿವೇಕ ಇಲ್ಲದಿದ್ದರೆ ಸಂಬಂಧವನ್ನು ಮುರಿಯಬಾರದು ಎಂಬ ವಿವೇಕದ ಪ್ರಶ್ನೆಯನ್ನು ಮಂಕುತಿಮ್ಮನ ಕಗ್ಗದಲ್ಲಿ ರಾಮನ ಎದುರು ಡಿವಿಜಿ ಮುಂದಿಟ್ಟಿದ್ದಾರೆ. ಔದಾರ್ಯ ತೋರುವಲ್ಲಿ ವೀರತನ ಇದೆಯೇ ಹೊರತು ಕೇವಲ ಕೊಲ್ಲುವುದರಲ್ಲಿ ಇಲ್ಲ ಎಂಬ ತತ್ವವನ್ನು ಕುವೆಂಪು ತಮ್ಮ ಕಾವ್ಯದಲ್ಲಿ ರಾಮನೆದುರು ಪ್ರತಿಪಾದಿಸಿದ ಬಗೆಯನ್ನು ಅವರು ತಿಳಿಸಿದರು.

ಕನ್ನಡದ ಕವಿಗಳು ತಮ್ಮ ಕಾವ್ಯದಲ್ಲಿ ಎತ್ತಿರುವ ಪ್ರಶ್ನೆಗಳು, ಪರಂಪರೆಯ ಸತ್ವವನ್ನು ಹೊರಸೂಸುತ್ತಲೇ ಕಠಿಣ ಪ್ರಶ್ನೆಗಳನ್ನು ಕಲೆಯ ಧೀಮಂತಿಕೆಯನ್ನು ಉಳಿಸಿಕೊಳ್ಳುತ್ತಲೇ ಮಾಡಿರುವ ಮರುಸೃಷ್ಟಿಗಳಾಗಿವೆ ಎಂದು ಅವರು ವಿಶ್ಲೇಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.