ADVERTISEMENT

ನೂತನ ನಿಲ್ದಾಣದಿಂದ ಬಸ್ ಸಂಚಾರ ಶುರು

ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದ ಶಾಸಕ ಎಚ್. ಹಾಲಪ್ಪ ಹರತಾಳು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 3:52 IST
Last Updated 2 ಮಾರ್ಚ್ 2021, 3:52 IST
ಸಾಗರದ ನೂತನ ಖಾಸಗಿ ಬಸ್ ನಿಲ್ದಾಣದಲ್ಲಿ ಸೋಮವಾರ ಆರಂಭಗೊಂಡ ಬಸ್ ಸಂಚಾರಕ್ಕೆ ಶಾಸಕ ಎಚ್. ಹಾಲಪ್ಪ ಹರತಾಳು ಹಸಿರು ನಿಶಾನೆ ತೋರಿದರು.
ಸಾಗರದ ನೂತನ ಖಾಸಗಿ ಬಸ್ ನಿಲ್ದಾಣದಲ್ಲಿ ಸೋಮವಾರ ಆರಂಭಗೊಂಡ ಬಸ್ ಸಂಚಾರಕ್ಕೆ ಶಾಸಕ ಎಚ್. ಹಾಲಪ್ಪ ಹರತಾಳು ಹಸಿರು ನಿಶಾನೆ ತೋರಿದರು.   

ಸಾಗರ: ನಗರದ ನ್ಯೂ ಬಿ.ಎಚ್. ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಖಾಸಗಿ ಬಸ್ ನಿಲ್ದಾಣದಿಂದ ಬಸ್ ಸಂಚಾರ ಸೋಮವಾರ ಆರಂಭಗೊಂಡಿದೆ.

ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದ ಶಾಸಕ ಎಚ್. ಹಾಲಪ್ಪ ಹರತಾಳು, ‘ಹಳೆಯ ಖಾಸಗಿ ಬಸ್ ನಿಲ್ದಾಣವನ್ನು ಪಿಕಪ್ ಬಸ್ ನಿಲ್ದಾಣವನ್ನಾಗಿ ಉಳಿಸಿಕೊಳ್ಳಲಾಗುವುದು. ಮುಖ್ಯ
ನಿಲ್ದಾಣಕ್ಕೆ ಬರುವ ಬಸ್‌ಗಳು ಪಿಕಪ್ ನಿಲ್ದಾಣಕ್ಕೆ ಹೋಗಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಬರುತ್ತವೆ’ ಎಂದು ತಿಳಿಸಿದರು.

‘ನೂತನ ನಿಲ್ದಾಣದಲ್ಲಿ ಅಂಗಡಿ ಮಳಿಗೆಗಳನ್ನು ಶೀಘ್ರವಾಗಿ ಹರಾಜು ಮಾಡಲಾಗುವುದು. ಡಾಂಬರು ರಸ್ತೆ ನಿರ್ಮಾಣ, ಟೈಲ್ಸ್ ಅಳವಡಿಕೆ ಸೇರಿ ಕೆಲವು ಕಾಮಗಾರಿಗಳು ಬಾಕಿ ಉಳಿದಿದ್ದು, ಅವುಗಳನ್ನು ಕೂಡಲೇ ಕೈಗೊಳ್ಳಲಾಗುವುದು. ಪ್ರಯಾಣಿಕರಿಗೆ ತೊಂದರೆಯಾಗದಂತೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ನಗರಸಭೆ ಮುಂದಾಗಲಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಖಾಸಗಿ ಬಸ್ ನಿಲ್ದಾಣದೊಳಗೆ ಕೆಎಸ್‌ಆರ್‌ಟಿಸಿ ಬಸ್ ಬರಲು ಕೆಲವು ಸಮಸ್ಯೆಗಳಿವೆ. ಪ್ರಯಾಣಿಕರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಖಾಸಗಿ ನಿಲ್ದಾಣದ ಎದುರು ನಿಲ್ಲಿಸುವ ವ್ಯವಸ್ಥೆ ಮಾಡಲಾಗುತ್ತದೆ’ ಎಂದು
ಹೇಳಿದರು.

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ತುಕಾರಾಮ್, ಪೌರಾಯುಕ್ತ ಎಚ್.ಕೆ. ನಾಗಪ್ಪ, ಸದಸ್ಯರಾದ ಮೈತ್ರಿ ಪಾಟೀಲ್, ಸವಿತಾ ವಾಸು, ಕೆ.ಆರ್. ಗಣೇಶ್ ಪ್ರಸಾದ್, ಸಂತೋಷ್ ಆರ್.ಶೇಟ್, ಲಿಂಗರಾಜ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಶಿಕಲಾ, ಮೋಟಾರು ವಾಹನ ನಿರೀಕ್ಷಕ ವಾಸುದೇವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.