ADVERTISEMENT

ಯುವಕರಿಗೆ ಉದ್ಯೋಗಕ್ಕಾಗಿ ವಿಮಾನ ನಿಲ್ದಾಣ ನಿರ್ಮಾಣ: ರಾಘವೇಂದ್ರ

ಫಲಾನುಭವಿಗಳಿಗೆ ವಿವಿಧ ಇಲಾಖೆ ಸೌಲತ್ತು ವಿತರಣೆ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 31 ಮೇ 2022, 4:05 IST
Last Updated 31 ಮೇ 2022, 4:05 IST
ಶಿಕಾರಿಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಸಂಸದ ಬಿ.ವೈ. ರಾಘವೇಂದ್ರ ತ್ರಿಚಕ್ರ ವಾಹನ ವಿತರಿಸಿದರು. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಇದ್ದರು.
ಶಿಕಾರಿಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಸಂಸದ ಬಿ.ವೈ. ರಾಘವೇಂದ್ರ ತ್ರಿಚಕ್ರ ವಾಹನ ವಿತರಿಸಿದರು. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಇದ್ದರು.   

ಶಿಕಾರಿಪುರ: ‘ಶಿವಮೊಗ್ಗ ನಗರದಲ್ಲಿ ಶ್ರೀಮಂತರು ಪ್ರಯಾಣಿಸಲು ವಿಮಾನ ನಿಲ್ದಾಣ ನಿರ್ಮಿಸುತ್ತಿಲ್ಲ. ಜಿಲ್ಲೆಯ ಯುವ ಪೀಳಿಗೆಗೆ ಉದ್ಯೋಗ ಅವಕಾಶ ದೊರೆಯಲಿ ಎಂಬ ಉದ್ದೇಶದಿಂದ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದೇವೆ’ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ದೇವರಾಜ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಆಯೋಜಿಸಿದ್ದ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಿರುವುದರಿಂದ ಬಂಡವಾಳಶಾಹಿಗಳು ಕೈಗಾರಿಕೆ ಸ್ಥಾಪಿಸಲು ಮುಂದಾಗಲಿದ್ದಾರೆ.
ಕೈಗಾರಿಕೆ ಸ್ಥಾಪನೆಯಿಂದ ಜಿಲ್ಲೆಯ ಯುವಕರಿಗೆ ಉದ್ಯೋಗವಕಾಶ ದೊರೆಯಲಿದೆ. ಒಂದೂವರೆ ಸಾವಿರ ಕೋಟಿ ವೆಚ್ಚದಲ್ಲಿ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ ನಿರ್ಮಾಣವಾಗಲಿದ್ದು, ಶೀಘ್ರದಲ್ಲಿ ಕೇಂದ್ರ ರೈಲ್ವೆ ಸಚಿವರು ಶಂಕುಸ್ಥಾಪನೆ ನೆರವೇರಿಸುವರು. ಜಿಲ್ಲೆಯಿಂದ 8 ರಾಜ್ಯಗಳಿಗೆ ರೈಲು ಸಂಪರ್ಕ ದೊರೆಯಲಿದ್ದು, ರೈತರು ಬೆಳೆದ ಬೆಳೆ ಇತರೆ ರಾಜ್ಯಕ್ಕೆ ಸಾಗಿಸಲು ಅನುಕೂಲವಾಗಲಿದೆ. ರೈತರು ಹಾಗೂ ಕೂಲಿಕಾರ್ಮಿಕರು ಆರ್ಥಿಕವಾಗಿ
ಅಭಿವೃದ್ಧಿಯಾಗಲಿದ್ದಾರೆ ಎಂದರು.

ADVERTISEMENT

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ‘ಸರ್ಕಾರದ ಯೋಜನೆ ಪಡೆಯಲು ನೂರಾರು ಜನ ಅರ್ಜಿ ಹಾಕುತ್ತಾರೆ. ಆದರೆ, ಅಯ್ಕೆ ಸಮಿತಿ ಕೆಲವೇ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ. ಆಯ್ಕೆಯಾಗದವರು ಅಸಮಾಧಾನ ಹೊಂದಬಾರದು’ ಎಂದು ಹೇಳಿದರು.

ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೊಳಗಿ ರೇವಣಪ್ಪ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿರ್ದೇಶಕರಾದ ಭದ್ರಾಪುರ ಹಾಲಪ್ಪ, ಭೋವಿ ಅಭಿವೃದ್ಧಿ ನಿಗಮ ನಿರ್ದೇಶಕ ತೊಗರ್ಸಿ ಸಣ್ಣ ಹನುಮಂತಪ್ಪ, ಅಲೆಮಾರಿ ಅಭಿವೃದ್ಧಿ ನಿಗಮ ನಿರ್ದೇಶಕ ಕೆಂಗಟ್ಟಿ ಲಕ್ಷ್ಮಣ್, ತಾಲ್ಲೂಕು ಪಂಚಾಯಿತಿ ಇಒ ಪರಮೇಶ್, ವಿವಿಧ ಇಲಾಖೆ ಅಧಿಕಾರಿಗಳಾದ ಉಮೇಶ್, ಶಿಲ್ಪಾ ದೊಡ್ಮನಿ, ಸುಪ್ರೀತಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.