ADVERTISEMENT

ಬಸವಣ್ಣನನ್ನು ಒಂದು ಜಾತಿಗೆ ಸೀಮಿತಗೊಳಿಸಬೇಡಿ-ಬಿ.ವೈ.ವಿಜಯೇಂದ್

ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಮೆರವಣಿಗೆಗೆ ಬಿಜೆಪಿ ರಾಜ್ಯ ಘಟಕ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಮೇ 2022, 4:34 IST
Last Updated 6 ಮೇ 2022, 4:34 IST
ಶಿಕಾರಿಪುರದ ಅಕ್ಕಮಹಾದೇವಿ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದರು (ಎಡಚಿತ್ರ). ಜಯಂತ್ಯುತ್ಸವ ಪ್ರಯುಕ್ತ ನಡೆದ ಬಸವೇಶ್ವರರ ಭಾವಚಿತ್ರ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಲಾ ತಂಡಗಳು.
ಶಿಕಾರಿಪುರದ ಅಕ್ಕಮಹಾದೇವಿ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದರು (ಎಡಚಿತ್ರ). ಜಯಂತ್ಯುತ್ಸವ ಪ್ರಯುಕ್ತ ನಡೆದ ಬಸವೇಶ್ವರರ ಭಾವಚಿತ್ರ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಲಾ ತಂಡಗಳು.   

ಶಿಕಾರಿಪುರ: ಜಗಜ್ಯೋತಿ ಬಸವೇಶ್ವರರನ್ನು ಒಂದು ಜಾತಿಗೆ ಸೀಮಿತಗೊಳಿಸಬೇಡಿ. ಎಲ್ಲ ಜಾತಿಯವರು ಗೌರವಿಸುವಂತಹ ಸಂದೇಶವನ್ನು ಬಸವಣ್ಣ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಲಹೆ ನೀಡಿದರು.

ಬಸವೇಶ್ವರರ ಜಯಂತಿ ಅಂಗವಾಗಿ ಪಟ್ಟಣದ ಅಕ್ಕಮಹಾದೇವಿ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಗುರುವಾರ ಆಯೋಜಿಸಿದ್ದ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜಗತ್ತಿನ ಮೊದಲ ಪಾರ್ಲಿಮೆಂಟ್ ಎಂದು ಕರೆಸಿಕೊಳ್ಳುತ್ತಿದ್ದ ಅನುಭವ ಮಂಟಪದ ಮೂಲಕ ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಅಣ್ಣ ಬಸವಣ್ಣ ನ್ಯಾಯ ನೀಡುತ್ತಿದ್ದರು. ಜಾತಿ ಪದ್ಧತಿ ವಿರುದ್ಧ ಸಮಸಮಾಜ ನಿರ್ಮಾಣ ಮಾಡಲು ಮುಂದಾಗಿದ್ದರು. ಅನ್ನದಾಸೋಹ, ಜ್ಞಾನ ದಾಸೋಹ ಹಾಗೂ ಕಾಯಕ ತತ್ವವನ್ನು ಪ್ರತಿಪಾದಿಸಿದ್ದರು. ತುಮಕೂರು ಸಿದ್ಧಗಂಗಾ ಶ್ರೀ ಅವರು ಮಠದಲ್ಲಿ ಜ್ಞಾನ ದಾಸೋಹ ಹಾಗೂ ಅನ್ನದಾಸೋಹ ನಡೆಸಲು ಬಸವಣ್ಣ ಪ್ರೇರಣೆಯಾಗಿದ್ದರು ಎಂದರು.

ADVERTISEMENT

‘ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದೆ. ಬಸವಣ್ಣ ನಮ್ಮ ದೇಶಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಸಮಾಜ ಸುಧಾರಕ ಎನಿಸಿಕೊಂಡಿದ್ದಾರೆ. ಬಸವಣ್ಣ ತತ್ವ ಪ್ರತಿಪಾದನೆಯಿಂದ ವಿಶ್ವದಲ್ಲಿ ಬದಲಾವಣೆಯಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಸವಣ್ಣ ಪ್ರೇರಣೆಯಿಂದ ಎಲ್ಲ ಜಾತಿ ವರ್ಗದ ಜನರ ಪರ ಆಡಳಿತ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ತಾವು ಸಂಚರಿಸುವ ವಿದೇಶಗಳಲ್ಲಿ ಬಸವಣ್ಣ ತತ್ವದ ಸಂದೇಶ ಸಾರುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಚನ್ನಗಿರಿ ಪಾಂಡೋಮಟ್ಟಿ ವಿರಕ್ತ ಮಠದ ಪೀಠಾಧ್ಯಕ್ಷ ಗುರುಬಸವ ಸ್ವಾಮೀಜಿ, ‘ಪ್ರತಿಯೊಬ್ಬರೂ ಇತಿಹಾಸವನ್ನು ನಿರ್ಮಾಣ ಮಾಡಬೇಕೇ ಹೊರತು ನಿರ್ನಾಮ ಮಾಡಬಾರದು. ಬಸವಣ್ಣ ಜಾತಿ, ಧರ್ಮ ಭೇದವಿಲ್ಲದೇ ಪ್ರೀತಿಯಿಂದ ಬದುಕುವುದನ್ನು ಹೇಳಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸಲು ಬಸವಣ್ಣನ ವಚನಗಳು ಪ್ರೇರಣೆಯಾಗಿವೆ. ಬಸವಣ್ಣನವರ ವಚನಗಳು ಧರ್ಮಕ್ಕೆ ಸಂವಿಧಾನವಾಗಿವೆ. ಬಸವಣ್ಣ ತತ್ವ ವಿಚಾರಗಳನ್ನು ಜೀವನದಲ್ಲಿ ನಾವು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ವಿ. ಈರೇಶ್ ಅಧ್ಯಕ್ಷತೆ ವಹಿಸಿದ್ದರು.

ತೊಗರ್ಸಿ ಮಳೇಹಿರೇಮಠದ ಪೀಠಾಧ್ಯಕ್ಷ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಕಡೇನಂದಿಹಳ್ಳಿ ಹೊಳಿನ ಹಂಪೇಶ್ವರ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಶಿಕಾರಿಪುರ ವಿರಕ್ತಮಠದ ಪೀಠಾಧ್ಯಕ್ಷ ಚನ್ನಬಸವ ಸ್ವಾಮೀಜಿ, ಬಸವಾಶ್ರಮ ಮಾತೆ ಶರಣಾಂಬಿಕೆ, ಹರಿಹರ ಕ್ಷೇತ್ರದ ಮಾಜಿ ಶಾಸಕ ಬಿ.ಪಿ. ಹರೀಶ್, ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ ಉಪಸ್ಥಿತರಿದ್ದರು.

* ಬಸವಣ್ಣನವರ ತತ್ವ ಸಿದ್ಧಾಂತ ಅರ್ಥ ಮಾಡಿಕೊಂಡಿದ್ದಿದ್ದರೆ ದೇಶದ ಜನರಲ್ಲಿ ಕೋಮು ಭಾವನೆ ಮೂಡುತ್ತಿರಲಿಲ್ಲ. ದಯೆಯಿಂದ ಧರ್ಮ ಸ್ಥಾಪಿಸಬಹುದೇ ಹೊರತು ಹಿಂಸೆಯಿಂದ ಧರ್ಮ ಸ್ಥಾಪಿಸಲು ಸಾಧ್ಯವಿಲ್ಲ.

-ಗುರುಬಸವ ಸ್ವಾಮೀಜಿ, ಪೀಠಾಧ್ಯಕ್ಷ, ವಿರಕ್ತಮಠ, ಪಾಂಡೋಮಟ್ಟಿ, ಚನ್ನಗಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.