ADVERTISEMENT

ಯಾವ ಶಾಸಕರೂ ಬಿಜೆಪಿ ತೊರೆಯುವುದಿಲ್ಲ: ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 13:46 IST
Last Updated 9 ಡಿಸೆಂಬರ್ 2018, 13:46 IST
ಬಿ.ವೈ. ರಾಘವೇಂದ್ರ
ಬಿ.ವೈ. ರಾಘವೇಂದ್ರ   

ಶಿವಮೊಗ್ಗ:ಬಿಜೆಪಿ ಶಾಸಕರ ಮಧ್ಯೆ ಯಾವುದೇ ಗೊಂದಲ ಇಲ್ಲ. ಯಾರೊಬ್ಬರೂ ಪಕ್ಷ ತೊರೆಯುವುದಿಲ್ಲ. ಗೋಪಾಲಕೃಷ್ಣ ಬೇಳೂರು ಅವರಂಥ ದೊಡ್ಡವರ ಬಗ್ಗೆ ಪ್ರತಿಕ್ರಿಯಿಸುವುದೂ ಇಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ತಿರುಗೇಟು ನೀಡಿದರು.

ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಬಿಜೆಪಿಗೆ ಆಪರೇಷನ್ ಕಮಲ ನಡೆಸುವ ಅನಿವಾರ್ಯತೆ ಇಲ್ಲ. ಕಾಂಗ್ರೆಸ್, ಜೆಡಿಎಸ್ ಶಾಸಕರು ಪರಸ್ಪರ ಕಾಲೆಳೆದುಕೊಂಡು ಸರ್ಕಾರ ಪತನಗೊಳಿಸುತ್ತಾರೆ. ಮುಖ್ಯಮಂತ್ರಿಗೆ ಉಪ ಮುಖ್ಯಮಂತ್ರಿ ಮೇಲೆ ನಂಬಿಕೆ ಇಲ್ಲ. ಉಪ-ಮುಖ್ಯಮಂತ್ರಿ ಸಚಿವರನ್ನು ನಂಬುತ್ತಿಲ್ಲ. ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ. ಮೈತ್ರಿ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಟೀಕೆ ಆರಂಭಿಸಿದ್ದಾರೆ ಎಂದರು.

ADVERTISEMENT

ಮಾಜಿ ಶಾಸಕ ಮಧು ಬಂಗಾರಪ್ಪ ಮತದಾರರ ಸೆಳೆಯಲು ಏನೇ ಕಸರತ್ತು ನಡೆಸಿದರೂ ಅದು ನಡೆಯುವುದಿಲ್ಲ. ತಿಂಗಳಿಗೆ ಒಂದು ಬಾರಿ ಟೆಂಟ್‌ ಹಾಕಿಕೊಂಡು ಪತ್ರಿಕಾಗೋಷ್ಠಿ ನಡೆಸಿದರೆ ಜನರು ನಂಬುತ್ತಾರೆಯೇ? ಬರುವ ಚುನಾವಣೆಯಲ್ಲೂ ಬಿಜೆಪಿ ಗೆಲ್ಲುತ್ತದೆ. ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ನಾಯಕರೇ ಅವರ ಆಯ್ಕೆ ಎಂದು ಕುಟುಕಿದರು.

ಬೆಳಗಾವಿ ಅಧಿವೇಶನದ ಸಮಯದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಹೇಳಿರುವಕಾಂಗ್ರೆಸ್ ಕಾರ್ಯಕರ್ತರುನಿರ್ಧಾರ ಬದಲಿಸಬೇಕು. ಕೊಟ್ಟ ಮಾತಿನಂತೆ ನಡೆದುಕೊಳ್ಳದ ತಮ್ಮ ನಾಯಕರ ಮನೆಗಳಿಗೇ ಮುತ್ತಿಗೆ ಹಾಕಬೇಕು ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.