ADVERTISEMENT

ಮೈತ್ರಿ ಶಕ್ತಿಗೆ ಸ್ವಾಭಿಮಾನ ಬಿಟ್ಟುಕೊಡದ ಮತದಾರ: ಬಿ.ವೈ.ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 12:55 IST
Last Updated 27 ಏಪ್ರಿಲ್ 2019, 12:55 IST
ಬಿ.ವೈ.ರಾಘವೇಂದ್ರ
ಬಿ.ವೈ.ರಾಘವೇಂದ್ರ   

ಶಿವಮೊಗ್ಗ: ಮೈತ್ರಿ ಪಕ್ಷಗಳು ಈ ಚುನಾವಣೆಯಲ್ಲಿ ಹಣ, ಅಧಿಕಾರ ದುರ್ಬಳಕೆ ಮಾಡಿಕೊಂಡು, ಸಂಪೂರ್ಣ ಶಕ್ತಿ ವಿನಿಯೋಗಿಸಿದರೂ ಜನರು ಸ್ವಾಭಿಮಾನ ಬಿಟ್ಟುಕೊಡದೇ ಪಕ್ಷ ಬೆಂಬಲಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.

ಮತದಾನ ಮುಕ್ತಾಯದ 48 ಗಂಟೆ ಮೊದಲು ಹೊರಗಿನ ಮುಖಂಡರು ಕ್ಷೇತ್ರ ತೊರೆಯಬೇಕು. ಆದರೆ, ಮೈತ್ರಿ ಪಕ್ಷಗಳ ಹಲವು ಮುಖಂಡರು ಇಲ್ಲೇ ಠಿಕಾಣಿ ಹೂಡಿದ್ದರು. ಹಣ ಹಂಚಿದರು. ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡರ ಪುತ್ರ ಹಣ ಹಂಚುವಾಗ ಸಿಕ್ಕಿಬಿದಿದ್ದಾರೆ. ಕಾರಿನ ಟೈರ್‌ನಲ್ಲಿ ಹಣ ಸಾಗಿಸುವಾಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅವರ ಯಾವ ಆಮಿಷಕ್ಕೂ ಬಲಿಯಾಗದೆ ಜನರು ಬಿಜೆಪಿ ಪರ ನಿಂತರು. ಮೋದಿಗಾಗಿ ಆಂದೋಲನದ ರೀತಿ ಮತಗಟ್ಟೆಗೆ ಬಂದುಮತ ಚಲಾಯಿಸಿದರು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಶ್ಲಾಘಿಸಿದರು.

ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ ದುರ್ಬಳಕೆ ಮಾಡಿಕೊಂಡಿಲ್ಲ. ದಾಳಿ ಮಾಡಿದಾಗ ಮೈತ್ರಿ ಮುಖಂಡರು ಸಿಕ್ಕಿ ಬಿದ್ದಿರುವುದು ಸತ್ಯ. ಸಾಗರ, ಶಿಕಾರಿಪುರ ಸೇರಿದಂತೆ ಕೆಲವು ಕಡೆ ಬಿಜೆಪಿ ಮುಖಂಡರ ಮನೆಗಳ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದರು.

ಪಕ್ಷದ ಶಿಸ್ತುಬದ್ಧ ಕಾರ್ಯನಿರ್ವಹಣೆ, ಕೇಂದ್ರ ಸರ್ಕಾರದ ಕೊಡುಗೆ, ಮೋದಿ ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು ಎಂಬ ಜನರ ಆಶಯ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಎಸ್.ಎಂ.ಕೃಷ್ಣ, ನಟ ಜಗ್ಗೇಶ್, ನಟಿ ತಾರಾ ಸೇರಿದಂತೆ ಹಲವು ನಾಯಕರು ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದರು. ಪಕ್ಷದ ಮಹಿಳಾ ಕಾರ್ಯಕರ್ತೆಯರು ಸತತ ಪರಿಶ್ರಮ ಮೊದಲಾದ ಕಾರಣಗಳಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅತ್ಯಧಿಕ ಮತಗಳು ದೊರೆತಿವೆ. ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ದೊರೆಯಲಿದೆ.ರಾಜ್ಯದಲ್ಲಿ 22 ಸ್ಥಾನ ಖಚಿತ ಎಂದು ವಿಶ್ಲೇಷಿಸಿದರು.

ADVERTISEMENT

ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಏಳು ಶಾಸಕರು ಇದ್ದಾರೆ. ಬೂತ್‌ಮಟ್ಟದಿಂದ ಸಂಘಟನೆ ಮಾಡಲಾಗಿತ್ತು. 8 ಮೋರ್ಚಾಗಳು ಒಗ್ಗಟ್ಟಿನಿಂದ ಕೆಲಸ ಮಾಡಿದವು. ಉಪ ಚುನಾವಣೆಯಲ್ಲಿ ಕಡಿಮೆ ಮತಗಳು ಬಂದ ಬೂತ್‌ ವ್ಯಾಪ್ತಿಯಲ್ಲಿ ಹೆಚ್ಚಿನ ಪರಿಶ್ರಮ ಹಾಕಿದೆವು. ಈ ಎಲ್ಲ ಅಂಶಗಳೂ ಫಲ ನೀಡಿವೆ.ಈ ಬಾರಿ ದಾಖಲೆಯ ಮತದಾನವಾಗಿದೆ. ಇದಕ್ಕೆ ಕಾರಣ, ಜಿಲ್ಲಾಡಳಿತ. ಪಕ್ಷದ ಪರವಾಗಿ ಜಿಲ್ಲಾಧಿಕಾರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಎಲ್ಲೆಡೆ ಶಾಂತಿಯುತ ಮತದಾನವಾಗಿದೆ. ಮತದಾನ ಪ್ರಮಾಣ ಹೆಚ್ಚಳ ಬಿಜೆಪಿಗೆ ಅನುಕೂಲವಾಗಲಿದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರುದ್ರೇಗೌಡ ಮಾತನಾಡಿ, ತಾವು ಅಧ್ಯಕ್ಷರಾದ ಮೇಲೆ ವಿಧಾನ ಸಭೆ, ವಿಧಾನ ಪರಿಷತ್, ನಗರ ಪಾಲಿಕೆ, ಲೋಕಸಭಾ ಉಪ ಚುನಾವಣೆ, ಈ ಚುನಾವಣೆ ಸಮರ್ಥವಾಗಿ ಎದುರಿಸಿದ್ದೇನೆ. ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಗೆಲುವು ಸಾಧಿಸಿದೆ. ಈ ಬಾರಿಯೂ ಬಿ.ವೈ.ರಾಘವೇಂದ್ರ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ, ಮುಖಂಡರಾದ ಎಸ್.ದತ್ತಾತ್ರಿ, ಡಿ.ಎಸ್.ಅರುಣ್, ಬಿಳಕಿ ಕೃಷ್ಣಮೂರ್ತಿ, ಗಾಜನೂರು ಗಣೇಶ್, ಅನಿತಾ ರವಿಶಂಕರ್, ಎಚ್‌.ಸಿ.ಬಸವರಾಜಪ್ಪ, ಹಿರಣ್ಣಯ್ಯ, ರತ್ನಾಕರ್ ಶೆಣೈ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.