ಶಿವಮೊಗ್ಗ: ಇಲ್ಲಿನ ಸಾರಸ್ವತ ಲೋಕಕ್ಕೂ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರಿಗೂ ಅವಿನಾಭಾವ ನಂಟು ಇತ್ತು. ಕರ್ನಾಟಕ ಸಂಘದ ಸಾಹಿತ್ಯಿಕ ಹಾಗೂ ಸಂಗೀತ ಕಾರ್ಯಕ್ರಮಗಳಿಗೆ ಬರುತ್ತಿದ್ದ ಭೈರಪ್ಪ, ಗಾಂಧಿ ನಗರದ ನಾಲ್ಕನೇ ಕ್ರಾಸ್‌ನಲ್ಲಿ ವಾಸವಿದ್ದ ಬಾಲ್ಯದ ಗೆಳೆಯ ಎಸ್.ಡಿ.ಕೃಷ್ಣಮೂರ್ತಿ ಅವರ ಮನೆಗೆ ತಪ್ಪದೇ ಭೇಟಿ ನೀಡುತ್ತಿದ್ದರು.
ಕೃಷ್ಣಮೂರ್ತಿ ಕೂಡ ಸಂತೇಶಿವರದವರು. ಬೈರಪ್ಪ ಹಾಗೂ ಅವರು ಅಕ್ಕಪಕ್ಕದ ಮನೆಯವರು. ಶಿವಮೊಗ್ಗದ ನ್ಯಾಷನಲ್ ಬಾಯ್ಸ್ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿದ್ದ ಕೃಷ್ಣಮೂರ್ತಿ ಸಿಲ್ವರ್ ಜ್ಯೂಬಿಲಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಿವೃತ್ತರಾಗಿದ್ದರು. ಕೃಷ್ಣಮೂರ್ತಿ ಅವರ ಕಿರಿಯ ಸಹೋದರ ಎಸ್.ಡಿ.ನಾಗರಾಜರಾವ್, ಸಂತೇಶಿವರದಲ್ಲಿ ಭೈರಪ್ಪ ಪ್ರತಿಷ್ಠಾನ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದ್ದರು.
‘1996ರಲ್ಲಿ ತಂದೆ ಕೃಷ್ಣಮೂರ್ತಿ ನಿಧನರಾಗಿದ್ದು, ಅಲ್ಲಿಯವರೆಗೂ ಶಿವಮೊಗ್ಗಕ್ಕೆ ಬಂದಾಗಲೆಲ್ಲ ಭೈರಪ್ಪ ಮನೆಗೆ ಬರುತ್ತಿದ್ದರು. ಅಪ್ಪ ತೀರಿಕೊಂಡ ಮೇಲೂ ಮನೆಗೆ ಬಂದು ಮಾತಾಡಿಸಿಕೊಂಡು ಹೋಗಿದ್ದರು. ಅಪ್ಪನೊಂದಿಗೆ ಒಡನಾಟವನ್ನು ತಮ್ಮ ಆತ್ಮಕಥೆ ‘ಭಿತ್ತಿ’ ಹಾಗೂ ದಶಕಗಳ ಸ್ನೇಹ ಪುಸ್ತಕದಲ್ಲಿ ಭೈರಪ್ಪ ಬರೆದುಕೊಂಡಿದ್ದಾರೆ’ ಎಂದು ಶಿವಮೊಗ್ಗ ರೋಟರಿ ಬ್ಲಡ್‌ಬ್ಯಾಂಕ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಕೆ.ಸತೀಶ್ ನೆನಪಿಸಿಕೊಳ್ಳುತ್ತಾರೆ.
2003ರ ಜೂನ್ 6ರಂದು ಎಸ್.ಎಲ್.ಭೈರಪ್ಪ ಅವರ ಕೃತಿ ‘ಮಂದ್ರ’ದ ಬಗ್ಗೆ ಮಂಥನ ಹಾಗೂ ಸಂವಾದ ಕಾರ್ಯಕ್ರಮವನ್ನು ಲೇಖಕಿ ವಿಜಯಶ್ರೀ ನೇತೃತ್ವದಲ್ಲಿ ಶಿವಮೊಗ್ಗದ ಪ್ರತಿಭಾ ರಂಗದಿಂದ ಆಯೋಜಿಸಲಾಗಿತ್ತು. ಅದರಲ್ಲಿ ಭೈರಪ್ಪ ಕೂಡ ಪಾಲ್ಗೊಂಡಿದ್ದರು.
‘ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಹರಗೋಪಾಲ ಭಟ್ಟರು ಹಾಗೂ ಉದ್ಯಮಿ ಇಬ್ರಾಹಿಂ ಸಾಹೇಬರ ನೇತೃತ್ವದಲ್ಲಿ ಏರ್ಪಡುತ್ತಿದ್ದ ರಾಷ್ಟ್ರಮಟ್ಟದ ಸಂಗೀತಸಭಾದಲ್ಲಿ ಪಾಲ್ಗೊಳ್ಳಲು ಭೈರಪ್ಪ ಪ್ರತೀ ವರ್ಷ ಬರುತ್ತಿದ್ದರು. ಡಿವಿಎಸ್ ಕಾಲೇಜಿನ ಪ್ರಾಚಾರ್ಯ ಪಾಂಡುರಂಗ ಉಡುಪ ಅವರ ಮನೆಯಲ್ಲಿ ಉಳಿಯುತ್ತಿದ್ದರು. ಎಂಟು ದಿನಗಳ ಕಾಲವೂ ತಪ್ಪದೇ ಸಂಜೆಯ ಸಂಗೀತ ಸಭಾದಲ್ಲಿ ಪಾಲ್ಗೊಳ್ಳುತ್ತಿದ್ದರು’ ಎಂದು ಹಿರಿಯ ಸಾಹಿತಿ ಸತ್ಯನಾರಾಯಣರಾವ್ ಅಣತಿ ಸ್ಮರಿಸುತ್ತಾರೆ.
ಭೈರಪ್ಪ ಅವರಿಗೆ ‘ಸರಸ್ವತಿ ಸಮ್ಮಾನ’ದ ಗೌರವ ದೊರೆತಾಗಲೂ ಶಿವಮೊಗ್ಗಕ್ಕೆ ಕರೆದು ಕರ್ನಾಟಕ ಸಂಘದ ಆಗಿನ ಅಧ್ಯಕ್ಷ ತೀ.ನಂ.ಶಂಕರನಾರಾಯಣ ನೇತೃತ್ವದಲ್ಲಿ ಅಭಿನಂದನೆ ಸಲ್ಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.