ಶಿವಮೊಗ್ಗ: ಜಾತಿ ಗಣತಿಯ ವೇಳೆ ಹಿಂದೂ ಧರ್ಮದೊಳಗಿನ ಜಾತಿಗಳನ್ನು ಒಡೆಯುವ ಕೆಲಸ ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆರೋಪಿಸಿದರು.
ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ‘ಈಗ ನಡೆಯುತ್ತಿರುವ ಜಾತಿಗಣತಿಯಲ್ಲಿ ಜಾತಿಗಳ ಕಾಲಂನಲ್ಲಿ ಆದಿ ದ್ರಾವಿಡ, ಕ್ರಿಶ್ಚಿಯನ್, ಅಕ್ಕಸಾಲಿಗ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಮಾದಿಗ ಕ್ರಿಶ್ಚಿಯನ್ ಎಂಬುದಾಗಿ 49 ಕಾಲಂಗಳ ಹುಟ್ಟುಹಾಕಿ ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್ ಪದ ಸೇರಿಸಿ ಮತಾಂತರ ಮಾಡಲು ಹೊರಟಿದ್ದಾರೆ. ಅದನ್ನು ಹಿಂದೂ ಸಮಾಜ ಸಹಿಸುವುದಿಲ್ಲ’ ಎಂದು ಕಿಡಿಕಾರಿದರು.
ರಾಷ್ಟ್ರದ್ರೋಹಿಗಳ ರಕ್ಷಣೆ ಸಲ್ಲ: ಸಾಗರದಲ್ಲಿ ಗಣಪತಿಗೆ ಉಗಿಯುವ ಮಕ್ಕಳ ಮಾನಸಿಕತೆ ನೋಡಿದ್ದಾಯಿತು. ಮದ್ದೂರಿನಲ್ಲಿ ಮಸೀದಿಯೊಳಗಿನಿಂದ ಕಲ್ಲು ಹೊಡೆಯುವ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳುವ ಬದಲು, ಅದನ್ನು ಪ್ರತಿಭಟಿಸಿದ ಮಹಿಳೆಯರ ಮೇಲೂ ಲಾಠಿ ಚಾರ್ಜ್ ಮಾಡಲಾಯಿತು. ಭದ್ರಾವತಿಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಿದೆ. ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯಿಂದಾಗಿ ಇದೆಲ್ಲ ನಡೆಯುತ್ತಿದೆ. ದೇಶದ್ರೋಹಿಗಳ ಮೇಲೆ ಕ್ರಮ ಕೈಗೊಳ್ಳುವ ತಾಕತ್ತು ಕಾಂಗ್ರೆಸ್ ಸರ್ಕಾರಕ್ಕಿಲ್ಲ. ರಾಷ್ಟ್ರದ್ರೋಹಿಗಳನ್ನು ರಕ್ಷಣೆ ಮಾಡುವ ಮನಸ್ಥಿತಿಯನ್ನು ಕಾಂಗ್ರೆಸ್ ಬಿಡಬೇಕು ಎಂದು ಆಗ್ರಹಿಸಿದರು.
ಗೃಹಸಚಿವ ಜಿ. ಪರಮೇಶ್ವರ ತಮ್ಮ ಸ್ಥಾನ ಕಳೆದುಕೊಳ್ಳುವ ಭೀತಿಯಿಂದ ಒಂದು ವರ್ಗದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಮದ್ದೂರು, ಭದ್ರಾವತಿ ವಿಚಾರದಲ್ಲಿ ಎಚ್ಚರಿಕೆಯಿಂದ ಕ್ರಮ ಕೈಗೊಳ್ಳದಿದ್ದರೆ ಹಿಂದೂ ಸಮಾಜ ಅವರಿಗೆ ತಕ್ಕಪಾಠ ಕಲಿಸುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ. ಜಗದೀಶ್, ನಗರ ಘಟಕದ ಅಧ್ಯಕ್ಷ ಮೋಹನ ರೆಡ್ಡಿ, ದೀನದಯಾಳ್, ಶ್ರೀನಾಗ್, ಜ್ಞಾನೇಶ್ವರ್ ಉಪಸ್ಥಿತರಿದ್ದರು.
’ಸಂಗಮೇಶ್ವರ್ ಈಗಲೇ ಮುಸ್ಲಿಂ ಧರ್ಮಕ್ಕೆ ಸೇರಲಿ’
ಶಿವಮೊಗ್ಗ : ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದ್ದಾರೆ. ಅವರು ಮುಂದಿನ ಜನ್ಮ ಬೇಡ ಈಗಲೇ ಮುಸ್ಲಿಂ ಧರ್ಮಕ್ಕೆ ಸೇರಲಿ. ಮುಂಜಿ ಮಾಡಿಸಿಕೊಳ್ಳಲಿ ಎಂದು ರಾಷ್ಟ್ರಭಕ್ತರ ಬಳಗದ ಮುಖಂಡ ಕೆ.ಈ. ಕಾಂತೇಶ್ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಭದ್ರಾವತಿಯಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಮುಸ್ಲಿಮರ ಓಲೈಕೆ ನೀತಿಯಿಂದ ಹಿಂದೂಗಳು ತಮ್ಮ ಹಬ್ಬಗಳ ಆಚರಣೆ ಮಾಡುವುದೇ ಕಷ್ಟವಾಗಿದೆ. ಅದಕ್ಕೆ ಮದ್ದೂರಿನಲ್ಲಿ ನಡೆದ ಘಟನೆಯೇ ಸಾಕ್ಷಿ ಎಂದರು.
ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಘಟನೆ ಖಂಡಿಸಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಸೆಪ್ಟೆಂಬರ್ 10ರ ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು. ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಈ. ವಿಶ್ವಾಸ್ ಮಹಾಲಿಂಗಯ್ಯ ಶಾಸ್ತ್ರಿ ಮೋಹನ್‌ರಾವ್ ಜಾಧವ್ ವೆಂಕಟೇಶ್ ಮುರುಗೇಶ್ ಚಿದಾನಂದ ಕುಬೇರಪ್ಪ ರುದ್ರೇಶ್ ಶಿವಾಜಿ ಅ.ಮ. ಪ್ರಕಾಶ್ ರಾಜು ರುದ್ರಯ್ಯ ನಾಗರಾಜ್ ಸಾಕ್ರಾನಾಯ್ಕ ಇದ್ದರು.
‘ಕಾಂಗ್ರೆಸ್ ಆಡಳಿತದಲ್ಲಿ ದೇಶ ವಿರೋಧಿ ಚಟುವಟಿಕೆ’
ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶವಿರೋಧಿ ಚಟುವಟಿಕೆ ಅರಾಜಕತೆ ಹಾಗೂ ಕಾನೂನು ಬಾಹಿರ ಚಟುವಟಿಕೆ ಹೆಚ್ಚಳವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದ್ದಾರೆ. ಮತ ಬ್ಯಾಂಕ್ ಕಾರಣಕ್ಕೆ ಒಂದು ಸಮುದಾಯವನ್ನು ರಾಜ್ಯ ಸರ್ಕಾರ ಅತಿಯಾಗಿ ಓಲೈಸುತ್ತಿದ್ದು ಅದರ ಹಿಂದೂ ವಿರೋಧಿ ನಿಲುವುಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ. ಸರ್ಕಾರ ನಮ್ಮ ಪರವಾಗಿದೆ ಎಂಬ ಧೈರ್ಯ ದುಷ್ಕರ್ಮಿಗಳ ಅಟ್ಟಹಾಸ ಹೆಚ್ಚಳಕ್ಕೆ ಹಾಗೂ ಮೇಲಿಂದ ಮೇಲೆ ಇಂತಹ ಘಟನೆಗಳು ಪುನರಾವರ್ತನೆ ಆಗಲು ಕಾರಣವಾಗಿದೆ ಎಂದು ಹೇಳಿದ್ದಾರೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯಬಾರದು. ಪರಿಸ್ಥಿತಿ ಕೈ ಮೀರುವ ಮುನ್ನ ಭದ್ರಾವತಿಯಲ್ಲಿ ದೇಶವಿರೋಧಿ ಚಟುವಟಿಕೆಗಳಿಗೆ ಕಾರಣರಾದವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಸರ್ಕಾರಕ್ಕೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.