ಸೊರಬ: ‘ಗಣತಿ ವೇಳೆ ‘ದೀವರು’ ಸಮುದಾಯದ ಬದಲು ‘ಈಡಿಗರು’ ಎಂದು ಬರೆಸಲಾಗುತ್ತಿದೆ. ಇದರಿಂದ ದೀವರು ಸಮುದಾಯದ ಜನಸಂಖ್ಯೆ ಅಂಕಿ– ಅಂಶಗಳಲ್ಲಿ ಕಡಿಮೆಯಾಗುತ್ತಿದೆ. ಆದ್ದರಿಂದ ಈ ಬಾರಿಯ ಜಾತಿ ಗಣತಿ ವೇಳೆ ‘ದೀವರು’ ಎಂದೇ ನಮೂದಿಸಿ’ ಎಂದು ಸಾಮಾಜಿಕ ಚಿಂತಕ ರಾಜಪ್ಪ ಮಾಸ್ತರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರಗತಿಪರ ಸಂಘಟನೆ ಒಕ್ಕೂಟ ಹಾಗೂ ತಾಲ್ಲೂಕು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯಿಂದ ಮಂಗಳವಾರ ನಡೆದ ಜಾತಿ ಗಣತಿಯಲ್ಲಿ ‘ನಾವು ದೀವರು’ ಎಂದು ನಮೂದಿಸಿ ಅಭಿಯಾನದ ಕರಪತ್ರ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ರಾಜ್ಯದ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ದೀವರ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಮುದಾಯದಲ್ಲಿ ಹಳೇ ಪೈಕ ದೀವರು, ಕಾನು ದೀವರು ಮತ್ತು ತೆಂಗಿನ ದೀವರು ಸೇರಿ ಅನೇಕ ಹೆಸರುಗಳಿವೆ. ಆದರೆ, ಗಣತಿ ವೇಳೆ ಸಮುದಾಯದಲ್ಲಿನ ತಿಳಿವಳಿಕೆ ಕೊರತೆಯಿಂದ ‘ದೀವರು’ ಬದಲು ‘ಈಡಿಗರು’ ಎಂದು ನಮೂದಿಸಲಾಗುತ್ತಿದೆ. ಇದರಿಂದ ದೀವರು ಎಂಬ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಸಾವಿರಾರು ವರ್ಷಗಳ ದೀವರ ಚರಿತ್ರೆ ಅಳಿದು ಹೋಗುವ ಆತಂಕ ಶುರುವಾಗಿದೆ. 2015ರ ಜಾತಿ ಗಣತಿಯಲ್ಲಿ ದೀವರು ಜನಾಂಗದ ಬಹಳಷ್ಟು ಮಂದಿ ಈಡಿಗರು ಎಂದು ಬರೆಯಿಸಿದ್ದು, ಇದೇ ಮುಂದುವರಿದರೆ ಸರ್ಕಾರಿ ದಾಖಲೆಗಳಲ್ಲಿ ದೀವರು ಎಂಬ ಅಸ್ಮಿತೆ ಕಳೆದು ಹೋಗಲಿದೆ’ ಎಂದರು.
‘ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಹಾಗೂ ಶಿರಸಿ– ಸಿದ್ದಾಪುರ ಭಾಗದಲ್ಲಿನ ದೀವರು ಜನಾಂಗದ ಮೂಲ ಗುರುತನ್ನು ಕಳೆದುಕೊಂಡಿದ್ದಾರೆ. ಇದರಿಂದ 4 ಲಕ್ಷಕ್ಕೂ ಹೆಚ್ಚು ದಾಖಲಾಗಬೇಕಿದ್ದ ದೀವರ ಸಂಖ್ಯೆ 60,000ಕ್ಕೆ ಇಳಿದಿದೆ. ದೀವರ ಸಮುದಾಯ ಬಲಿಷ್ಠವಾಗಿದ್ದು, ರಾಜಕೀಯವಾಗಿ ನಾಯಕತ್ವದ ಹೋರಾಟಕ್ಕೆ ಮುಂದಾಗಬೇಕಿದೆ. ಸಾಂಸ್ಕೃತಿಕವಾಗಿ ತನ್ನದೇ ಛಾಪು ಮೂಡಿಸಿದ ಜನಾಂಗದ ಹಸೆ ಚಿತ್ತಾರ, ಬೂಮಣ್ಣಿ ಬುಟ್ಟಿ, ವಿಶೇಷ ಚೌತಿ, ಅಂಟಿಗೆ ಪಂಟಿಗೆ ಹಾಗೂ ಸೋಬಾನೆ ಹಾಡುಗಳು ಸಮುದಾಯವನ್ನು ಇನ್ನಷ್ಟು ಶ್ರೀಮಂತವಾಗಿಸಿವೆ’ ಎಂದು ಹೇಳಿದರು.
‘ಈಗಾಗಲೇ ಕೆಲವು ಶಾಲಾ ದಾಖಲಾತಿಯಲ್ಲಿ ಈಡಿಗರು ಎಂದು ನಮೂದಾಗಿದೆ. ಮುಂದಿನ ದಿನಗಳಲ್ಲಿ ದೀವರು ಎಂದು ನಮೂದಿಸಿದರೆ ಯಾವುದೇ ತೊಂದರೆಯಿಲ್ಲ. ಮೀಸಲಾತಿ ಪಟ್ಟಿಯಲ್ಲಿ 2ಎ ಕೆಟಗರಿ ಇರುವುದರಿಂದ ಸರ್ಕಾರಿ ಸೌಲಭ್ಯಗಳಿಗೆ ಯಾವುದೇ ತೊಡಕಾಗುವುದಿಲ್ಲ’ ಎಂದು ಹಿರಿಯ ವಕೀಲ ಪುಟ್ಟಸ್ವಾಮಿ ಹೇಳಿದರು.
ಶ್ರೀಧರ್ ಈಡೂರು, ನಾಗೇಶ್ ನಡಹಳ್ಳಿ, ಬಿಎನ್ಎನ್‌ಎಸ್‌ನ ನಾಗೇಶ್, ಸಮಾಜ ಸೇವಕ ಜ್ಞಾನೇಶ್, ರಾಜಣ್ಣ ಕೆರೆಕೊಪ್ಪ, ಪರಶುರಾಮ್ ಸಣ್ಣಬೈಲ್, ಉಪನ್ಯಾಸಕ ನೀಲೇಶ್ ಎಸ್.ಎಂ, ವೀರೇಶ್ ಗೆಂಡ್ಲ, ಸೋಮಣ್ಣ ಗೆಂಡ್ಲ ಹೊಸೂರು, ತ್ಯಾಗರಾಜ್, ರಾಮಪ್ಪ ಸಂಪಗೋಡು, ಪ್ರಶಾಂತ್ ನಾಯ್ಕ, ಜಯಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.