ADVERTISEMENT

ದತ್ತಾಂಶ ಸಂಗ್ರಹದಲ್ಲಿ 60 ಪ್ರಶ್ನೆ; ಪೂರ್ವ ಸಿದ್ಧತೆ ಅಗತ್ಯ

ಜಾತಿ ಗಣತಿ: ಒಕ್ಕಲಿಗರ ಜಾಗೃತಿ ಸಭೆಯಲ್ಲಿ ಆದಿಚುಂಚನಗಿರಿ ಪ್ರಸನ್ನನಾಥ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 5:26 IST
Last Updated 18 ಸೆಪ್ಟೆಂಬರ್ 2025, 5:26 IST
ಶಿವಮೊಗ್ಗ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜಾತಿ ಜನಗಣತಿಯ ಒಕ್ಕಲಿಗ ಜಾಗೃತಿ ಸಭೆಯನ್ನು ಪ್ರಸನ್ನನಾಥ ಸ್ವಾಮೀಜಿ ಉದ್ಘಾಟಿಸಿದರು
ಶಿವಮೊಗ್ಗ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜಾತಿ ಜನಗಣತಿಯ ಒಕ್ಕಲಿಗ ಜಾಗೃತಿ ಸಭೆಯನ್ನು ಪ್ರಸನ್ನನಾಥ ಸ್ವಾಮೀಜಿ ಉದ್ಘಾಟಿಸಿದರು   

ಶಿವಮೊಗ್ಗ: ‘ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲು ಉದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ದತ್ತಾಂಶ ಸಂಗ್ರಹದಲ್ಲಿ ಅಂದಾಜು 60 ಪ್ರಶ್ನೆಗಳನ್ನು ಒಳಗೊಂಡಿದ್ದು, ಒಕ್ಕಲಿಗ ಸಮುದಾಯ ಇದಕ್ಕೆ ಪೂರ್ವ ತಯಾರಿ ಮಾಡಿಕೊಂಡಿರಬೇಕು’ ಎಂದು ಆದಿಚುಂಚನಗಿರಿ ಪೀಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.

ಒಕ್ಕಲಿಗ ಸಂಘ ಜಿಲ್ಲಾ ಘಟಕದಿಂದ ಇಲ್ಲಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಜಾತಿ ಜನಗಣತಿ ಕುರಿತ ಒಕ್ಕಲಿಗ ಸಮಾಜದವರಿಗೆ ಮಾಹಿತಿ ಹಾಗೂ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಗಣತಿದಾರರು ಕೇಳುವ ಪ್ರಶ್ನೆಗಳ ಪಟ್ಟಿಯ ಅರ್ಜಿ ಪಡೆದು, ಅವರು ಬರುವ ಮೊದಲೇ ಭರ್ತಿ ಮಾಡಿ ಇಡಬೇಕು. ಇದರಿಂದ, ಅಧಿಕಾರಿಗಳಿಗೂ ಅನುಕೂಲವಾಗಲಿದೆ. ಅವರು ಮನೆಯ ಬಾಗಿಲಿಗೆ ಬಂದ ಬಳಿಕ ಪೂರಕ ದಾಖಲೆ ಹುಡುಕುವುದಲ್ಲ. ಅವರು ಕೇಳುವ ಪ್ರಶ್ನೆಗಳು ಕಷ್ಟ ಅನಿಸಬಹುದು. ಆದ್ದರಿಂದ, ಮೊದಲೇ ದಾಖಲೆಗಳು ಸಿದ್ಧವಿರಬೇಕು ಎಂದರು. 

ADVERTISEMENT

ಒಕ್ಕಲಿಗರಲ್ಲಿ ವಿದ್ಯಾವಂತರೇ ಹೆಚ್ಚಿದ್ದಾರೆ. ಅವರು ಗ್ರಾಮಾಂತರ ಭಾಗದ ರೈತರು, ಕೂಲಿ ಕಾರ್ಮಿಕರಿಗೆ ಜಾಗೃತಿ ಮೂಡಿಸಬೇಕು. ಈಗಾಗಲೇ ಸಂಘ–ಸಂಸ್ಥೆಗಳು, ಮಠದಿಂದಲೂ ಸಭೆ ನಡೆಸಲಾಗಿದೆ. ಇನ್ನೂ ಹೆಚ್ಚಿನ ಅರಿವು ಕಾರ್ಯಕ್ರಮಗಳು ಆಗಬೇಕು. ಸಮೀಕ್ಷೆಯು ಪಡಿತರ ಚೀಟಿ ಮತ್ತು ಆಧಾರ್ ಸಂಖ್ಯೆಯ ಆಧಾರದಲ್ಲಿ ನಡೆಯಲಿದೆ ಎಂದರು. 

‘ಒಕ್ಕಲಿಗರು ಶೇ 4ರಷ್ಟು ಮೀಸಲಾತಿಯಲ್ಲಿಯೇ ಹೋರಾಡುವ ಪರಿಸ್ಥಿತಿಗೆ ಇದೆ. ಈ ಸಮಿಕ್ಷೆಯಿಂದ ಭವಿಷ್ಯದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇರಿದಂತೆ ರಾಜಕೀಯವಾಗಿಯೂ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಆದ್ದರಿಂದ, ಎಚ್ಚರಿಕೆಯಿಂದ ದಾಖಲೆ ಒದಗಿಸಬೇಕು’ ಎಂದು ಒಕ್ಕಲಿಗ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಬಿ.ಎ. ರಮೇಶ್ ಹೆಗ್ಡೆ ಹೇಳಿದರು.

ಆದಿಚುಂಚನಗಿರಿ ಶಾಖಾ ಮಠದ ನಾದಮಯ ನಂದನಾಥ ಸ್ವಾಮೀಜಿ, ಸಂಘದ ನಿರ್ದೇಶಕ ಸಿರಿಭೈಲ್ ಧರ್ಮೇಶ್, ರಾಜ್ಯ ಮಹಿಳಾ ಆಯೋಗ ಮಾಜಿ ಅಧ್ಯಕ್ಷೆ ಮಂಜುಳಾ, ಶಾಂತಾ ಸುರೇಂದ್ರ, ತಾಯಿಮನೆ ಸುದರ್ಶನ, ಎಚ್.ಕೆ.ರಘುರಾಜ್, ಪ್ರತಿಮಾ ಡಾಕಪ್ಪಗೌಡ, ಭಾರತಿ ರಾಮಕೃಷ್ಣ, ಗೋ ರಮೇಶ್ ಗೌಡ, ಚೇತನ್ ಗೌಡ ಇದ್ದರು.

‘ಒಕ್ಕಲಿಗ’ ಎಂದೇ ನಮೂದಿಸಿ

ಒಕ್ಕಲಿಗರನ್ನು ಒಡೆಯುವ ಪಿತೂರಿ ನಡೆಯುತ್ತಿದೆ. ಮಕ್ಕಳ ಭವಿಷ್ಯದ ದೃಷ್ಠಿಯಿಂದ ಒಗ್ಗಟ್ಟು ಪ್ರದರ್ಶಿಸಬೇಕು. ಸಮೀಕ್ಷೆಯ ಸಂದರ್ಭದಲ್ಲಿ ಜಾಣ್ಮೆಯಿಂದ ಉತ್ತರ ಕೊಡಬೇಕು. ಸೂಕ್ಷ್ಮವಾಗಿ ವ್ಯವಹರಿಸಬೇಕು. ಯಾರೂ ಕೂಡ ಹುಂಬುತನ ಪ್ರದರ್ಶಿಸಕೂಡದು. ಜಾತಿಯ ಕಾಲಂನಲ್ಲಿ ‘ಒಕ್ಕಲಿಗ’ (ಕೋಡ್ 1541) ಅಂತಲೇ ನಮೂದಿಸಬೇಕು’ ಎಂದು ಆದಿಚುಂಚನಗಿರಿ ಪೀಠದ ಪ್ರಸನ್ನನಾಥ ಸ್ವಾಮೀಜಿ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.