ADVERTISEMENT

ಹೊಸನಗರ: ಜಾನುವಾರುಗಳ ‘ಗೋ’ ಶಾಲೆ ‘ಕಮ್‌’ ಶಾಲೆ ಆಗಲಿ..!

ಎಲ್ಲಿ ನೋಡಿದರೂ ಮದ್ಯದ ಖಾಲಿ ಬಾಟಲು; ಬೀಡಿ– ಸಿಗಟೇಟ್‌ ತುಂಡು

ರವಿ ನಾಗರಕೊಡಿಗೆ
Published 28 ನವೆಂಬರ್ 2024, 6:59 IST
Last Updated 28 ನವೆಂಬರ್ 2024, 6:59 IST
ಹೊಸನಗರ ತಾಲ್ಲೂಕು ಗೊರಗೋಡು ಗ್ರಾಮದಲ್ಲಿ ನಿರ್ಮಾಣವಾದ ಸರ್ಕಾರಿ ಗೋಶಾಲೆ
ಹೊಸನಗರ ತಾಲ್ಲೂಕು ಗೊರಗೋಡು ಗ್ರಾಮದಲ್ಲಿ ನಿರ್ಮಾಣವಾದ ಸರ್ಕಾರಿ ಗೋಶಾಲೆ   

ಹೊಸನಗರ: ಸರ್ಕಾರದ ಮಹತ್ವದ ಯೋಜನೆಯಾದ ‘ಜಿಲ್ಲೆಗೊಂದು ಗೋಶಾಲೆ’ ಯೋಜನೆ ಹೊಸನಗರ ತಾಲ್ಲೂಕಿನಲ್ಲಿ ಸಮರ್ಪಕವಾಗಿ ಜಾರಿಯಾಗಿಲ್ಲ. ಗೋಶಾಲೆ ನಿರ್ಮಾಣಗೊಂಡು ಎರಡು ವರ್ಷಗಳು ಕಳೆದರೂ ರೈತರಿಗೆ ನೆರವಾಗಿಲ್ಲ.

ತಾಲ್ಲೂಕಿನ ಮೇಲಿನಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರಗೋಡಿನಲ್ಲಿ ₹ 1 ಕೋಟಿ ಅನುದಾನದೊಂದಿಗೆ 10 ಎಕರೆ ಜಾಗದಲ್ಲಿ ನಿರ್ಮಾಣವಾದ ಸರ್ಕಾರಿ ಗೋಶಾಲೆಗೆ ಉದ್ಘಾಟನೆ ಭಾಗ್ಯ ದೊರೆತಿಲ್ಲ. ಸದ್ಯಕ್ಕೆ ಆರಂಭವಾಗುವ ಲಕ್ಷಣವೂ ಕಾಣುತ್ತಿಲ್ಲ.

ಈ ಗೋಶಾಲೆ ಈಗ ಕುಡುಕರ ಅಡ್ಡೆಯಾಗಿ ಮಾರ್ಪಾಡಾಗಿದೆ. ಶಿವಮೊಗ್ಗ ಜಿಲ್ಲಾ ಪಂಚಾಯಿತಿ, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ, ಜಿಲ್ಲಾ ಪ್ರಾಣಿ ದಯಾ ಸಂಘ ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಗೊರಗೋಡು ಗ್ರಾಮದ ಬಳಿ ಗೋಶಾಲೆ ನಿರ್ಮಾಣ ಕಾಮಗಾರಿಯ ಅಡಿಗಲ್ಲು ಕಾರ್ಯಕ್ರಮವನ್ನು ಸಚಿವರಾಗಿದ್ದ ಆರಗ ಜ್ಞಾನೇಂದ್ರ ಹಾಗೂ ಶಾಸಕ ಹರತಾಳು ಹಾಲಪ್ಪ ನೆರವೇರಿಸಿದ್ದರು.

ADVERTISEMENT

200ಕ್ಕೂ ಅಧಿಕ ಗೋವುಗಳನ್ನು ಸಾಕಬಲ್ಲ ಹಾಗೂ ಬಿಡಿ ಗೊವುಗಳು, ರೈತರು ಸಾಕಲು ಕಷ್ಟವಾಗಿರುವಂತಹ ಜಾನುವಾರುಗಳು ಹಾಗೂ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಜಾನುವಾರುಗಳನ್ನು ಪೋಷಿಸುವ ಉದ್ದೇಶದಿಂದ ಯೋಜನೆಯನ್ನು ಜಾರಿಗೆ ತರಲಾಗಿತ್ತು.

ಗೋಶಾಲೆ ನಿರ್ಮಾಣಗೊಂಡು ಸುಮಾರು ಎರಡು ವರ್ಷಗಳೇ ಕಳೆದಿದೆ. ಆದರೆ, ಯಾವ ಉದ್ದೇಶಕ್ಕಾಗಿ ಈ ಯೋಜನೆಯನ್ನು ಆರಂಭಿಸಲಾಯಿತೋ ಆ ಉದ್ದೇಶ ಈವರೆಗೂ ಈಡೇರಿಲ್ಲ. ಆದರೆ, ಈಗ ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಾಡಾಗಿದೆ. ಅಲ್ಲದೆ ಕುಡುಕರ ಅಡ್ಡೆಯಾಗಿದೆ. ಗೋಶಾಲೆಯ ಸುತ್ತಮುತ್ತಲು ನೂರಾರು ಬಿಯರ್ ಬಾಟಲ್‌ಗಳು, ಬೀಡಿ, ಸಿಗರೇಟು ತುಂಡುಗಳು, ಇಸ್ಪೀಟ್ ಎಲೆಗಳು ಕಾಣಸಿಗುತ್ತವೆ.

ಸ್ಥಳೀಯರ ಪ್ರಕಾರ ನಿತ್ಯ ರಾತ್ರಿ ಹಲವಾರು ವಾಹನಗಳು ಅಲ್ಲಿ ಬಂದು ಹೋಗುತ್ತವೆ. ನಿರ್ಜನ ಪ್ರದೇಶವಾದುದರಿಂದ, ಅಲ್ಲಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಳ್ಳುವವರಿಗೆ ಯಾವುದೇ ಭಯವಿಲ್ಲದಂತಾಗಿದೆ.

ಉತ್ತಮ ಉದ್ದೇಶಕ್ಕಾಗಿ ಆರಂಭಗೊಂಡ ಈ ಯೋಜನೆ ಮುಂದುವರಿಯಬೇಕು. ಗೋಶಾಲೆಯಲ್ಲಿ ಗೋವುಗಳ ಸಂರಕ್ಷಣೆ ಆಗಬೇಕು. ಅಲ್ಲದೆ ಅಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗೆ ಕಡಿವಾಣ ಬೀಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ನಿರ್ವಹಣೆಗೆ ಸಿಬ್ಬಂದಿ ಇಲ್ಲ

ಗೋಶಾಲೆಯ ನಿರ್ವಹಣೆಗಾಗಿ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡುವ ಕುರಿತು ಸರ್ಕಾರಕ್ಕೆ ಇಲಾಖೆ ಪ್ರಸ್ತಾವ ಕಳುಹಿಸಿದೆ. ಅದರ ನಿರ್ವಹಣೆಗೆ ಸಿಬ್ಬಂದಿ ನೇಮಕವಾಗದ ಕಾರಣ ಗೋವುಗಳನ್ನು ತಂದು ಸಾಕುವ ಕೆಲಸ ಕಾರ್ಯಗತಗೊಂಡಿಲ್ಲ. ಅಲ್ಲಿ ಸಿಬ್ಬಂದಿ ನೇಮಕವಾಗದ ಕಾರಣ ಅಕ್ರಮ ಚಟುವಟಿಕೆ ನಡೆಯುತ್ತಿವೆ. ನಿಯಂತ್ರಣದ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. - ಡಾ.ಪಣಿರಾಜ್ ಪಶು ವೈದ್ಯ ಅಧಿಕಾರಿ ಹಾಗೂ ಮೇಲ್ವಿಚಾರಕರು ಸರ್ಕಾರಿ ಗೋಶಾಲೆ ಗೊರಗೋಡು

ಗೋವುಗಳ ರಕ್ಷಣೆಗಾಗಿ ಜಾರಿಗೆ ತಂದ ಈ ಯೋಜನೆ ಕಾರ್ಯರೂಪಕ್ಕೆ ಬರಬೇಕು. ಅಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.
ಸುರೇಶ್ ಸ್ವಾಮಿರಾವ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಕುಡಿದೆಸೆದ ಬಾಟಲಿಗಳು
ಸರ್ಕಾರಿ ಗೋಶಾಲೆ ಒಳನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.