ADVERTISEMENT

ಈ ವರ್ಷ 25 ಲಕ್ಷ ಮನೆಗಳಿಗೆ ಶುದ್ಧ ನೀರು

ಪ್ರಧಾನಿ ನರೇಂದ್ರ ಮೋದಿ ಕನಸು, ನನಸು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 5:27 IST
Last Updated 28 ನವೆಂಬರ್ 2022, 5:27 IST
ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಿದ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯಲ್ಲಿ ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಬೃಹತ್ ಹಾರ ಹಾಕಿ ಸನ್ಮಾನಿಸಲಾಯಿತು
ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಿದ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯಲ್ಲಿ ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಬೃಹತ್ ಹಾರ ಹಾಕಿ ಸನ್ಮಾನಿಸಲಾಯಿತು   

ಶಿವಮೊಗ್ಗ: ‘ಮನೆ ಮನೆಗೆ ಶುದ್ಧ ಕುಡಿಯುವ ನೀರು ಕೊಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಕನಸು. ‌ಜಲಜೀವನ ಮಿಷನ್ ಯೋಜನೆ ಮೂಲಕ ‌ಒಂದೂವರೆ ವರ್ಷದಲ್ಲಿ ರಾಜ್ಯದ 30 ಲಕ್ಷ ಮನೆಗಳಿಗೆ ಕುಡಿಯುವ ನೀರು ಕೊಟ್ಟಿದ್ದು, ಇದು ಡಬಲ್ ಎಂಜಿನ್ ಸರ್ಕಾರದ ಸಾಧನೆ. ಈ ವರ್ಷವೂ 25 ಲಕ್ಷ ಮನೆಗಳಿಗೆ ನೀರು ಕೊಡಲಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ತೀರ್ಥಹಳ್ಳಿಯಲ್ಲಿ ಭಾನುವಾರ ₹ 618 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

‘ಈ ಭೂಮಿ ಮತ್ತು ಭೂಮಿ ತಾಯಿಯ ಮಕ್ಕಳನ್ನು ಉಳಿಸಿಕೊಂಡು ಹೋಗುವ ಕೆಲಸವನ್ನೂ ಸರ್ಕಾರ ಮಾಡಲಿದೆ. ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿಸುವ ಶಾಸಕ ಜ್ಞಾನೇಂದ್ರ ಅವರ ಕನಸು ನನಸಾಗಲಿದೆ’ ಎಂದು ಹೇಳಿದರು.

ADVERTISEMENT

ಮತ್ತೊಮ್ಮೆ ಜ್ಞಾನೇಂದ್ರ ಅವರನ್ನು ಆಯ್ಕೆ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲು ನೆರವಾಗುವಂತೆ ಮನವಿ ಮಾಡಿದ ಅವರು, ‘ರಾಜ್ಯದ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತಲಾ
₹ 10 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುವುದು. ಹಳ್ಳಿಯಲ್ಲಿನ ಕುಶಲಕರ್ಮಿಗಳು, ಸ್ತ್ರೀಶಕ್ತಿ ಸಂಘಗಳಿಗೆ ತಲಾ ₹50 ಸಾವಿರ ಕೊಡುವುದು ಹಾಗೂ 5 ಲಕ್ಷ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

‘ಆರಗ ಜ್ಞಾನೇಂದ್ರ ಈ ಬಾರಿ 40ರಿಂದ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಇದೇ ರೀತಿಯ ಅಭಿವೃದ್ಧಿ ಕಾರ್ಯಗಳು ರಾಜ್ಯದ ಎಲ್ಲ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜಾರಿಗೊಂಡರೆ ಬಿಜೆಪಿ ಸರ್ಕಾರ ಶೇ 100ರಷ್ಟು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ’ ಎಂದುಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

‘ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅದನ್ನು ಪ್ರಾಮಾಣಿಕವಾಗಿ ಮಾಡಲಾಗುವುದು’ ಎಂದರು.

ಸಮಾರಂಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ
ಕೆ.ಸಿ.ನಾರಾಯಣಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ,
ಶಾಸಕ ಎಚ್‌. ಹಾಲಪ್ಪ ಹರತಾಳು, ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ
ಬಿ.ವೈ. ವಿಜಯೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.