ADVERTISEMENT

31ರವರೆಗೆ ಸ್ವಚ್ಛತಾ ಮಾಸಾಚರಣೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 2:07 IST
Last Updated 2 ಅಕ್ಟೋಬರ್ 2021, 2:07 IST
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ ಮಾತನಾಡಿದರು
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ ಮಾತನಾಡಿದರು   

ಶಿವಮೊಗ್ಗ: ‘ಆಜಾದಿ ಕಾ ಅಮೃತ್ ಮಹೋತ್ಸವ್’ ಅಂಗವಾಗಿ ಶುಕ್ರವಾರದಿಂದ ಜಿಲ್ಲೆಯಾದ್ಯಂತ ಸ್ವಚ್ಛತಾ ಮಾಸಾಚರಣೆ ಆಯೋಜಿಸಲಾಗಿದ್ದು,31ರವರೆಗೆ ನಡೆಯಲಿದೆ. ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವ ಮುಖ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಹೊನ್ನಳ್ಳಿ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ ಕಾರ್ಯಕ್ರಮ ಅನುಷ್ಠಾನ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಸ್ವಚ್ಛತಾ ಮಾಸಾಚರಣೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ, ಬಳಸಿದ ಪ್ಲಾಸ್ಟಿಕ್ ಸಂಗ್ರಹಣೆ, ಇ–ತ್ಯಾಜ್ಯ ವಿಲೇವಾರಿ, ತ್ಯಾಜ್ಯ ವಸ್ತುಗಳ ಮರು ಬಳಕೆ ಮಾಡುವ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಸಹ ಕೈಗೊಳ್ಳಬೇಕು. ಸ್ವಚ್ಛತಾ ಅಭಿಯಾನವನ್ನು ನಗರ ಪ್ರದೇಶದಲ್ಲಿ ಮಾತ್ರವಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿಯೂ ಅನುಷ್ಠಾನ
ಗೊಳಿಸಬೇಕು ಎಂದು ತಿಳಿಸಿದರು.

ADVERTISEMENT

ತಿಂಗಳ ಕಾಲ ಪ್ರತಿ ದಿನ ಕಾರ್ಯಕ್ರಮಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಎಲ್ಲಾ ಇಲಾಖೆಗಳು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಆಸ್ಪತ್ರೆ, ಮಾರುಕಟ್ಟೆ ಸೇರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಕಡೆಗಳಲ್ಲಿ ಸ್ವಚ್ಛತಾ ಕಾರ್ಯದ ಜತೆಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ದೇವಸ್ಥಾನ, ಮಸೀದಿ, ಚರ್ಚ್ ಸೇರಿ ಧಾರ್ಮಿಕ ಕೇಂದ್ರಗಳ ಸುತ್ತ ಸ್ವಚ್ಛತಾ ಕಾರ್ಯವನ್ನು ಧಾರ್ಮಿಕ ಮುಖಂಡರು ಮತ್ತು ಸ್ಥಳೀಯರ ಸಹಕಾರದೊಂದಿಗೆ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ ವರ್ಷವಿಡೀ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರತಿಯೊಂದು ಇಲಾಖೆಗಳು ಕಾರ್ಯಕ್ರಮಗಳ ಆಯೋಜನೆ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಅಂಶಗಳನ್ನು ಸೇರಿಸಿ ಜನರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಯೋಜನಾ ನಿರ್ದೇಶಕ ಕರಿಭೀಮಣ್ಣನವರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ಡಿಡಿಪಿಐ ಎನ್‌.ಎಂ. ರಮೇಶ್, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.