ADVERTISEMENT

ಶಿವಮೊಗ್ಗ: ಉಂಟೂರಿನ ಅಡಿಕೆ ತೋಟಕ್ಕೆ ಬರಲಿರುವ ಸಿಎಂ ಬಸವರಾಜ ಬೊಮ್ಮಾಯಿ

ಅಡಿಕೆ ತೋಟಕ್ಕೆ ಎಲೆ ಚುಕ್ಕಿ ರೋಗ ಬಾಧೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 8:24 IST
Last Updated 27 ನವೆಂಬರ್ 2022, 8:24 IST
   

ಶಿವಮೊಗ್ಗ: ಎಲೆ ಚುಕ್ಕಿ ರೋಗ ಬಾಧೆಗೆ ತುತ್ತಾಗಿರುವ ತೀರ್ಥಹಳ್ಳಿ ತಾಲ್ಲೂಕು ಮುಳಬಾಗಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೈಮರ ಸಮೀಪದ ಉಂಟೂರಿನ ಯು.ಎ.ಹರೀಶ್ ಅವರ ಅಡಿಕೆ ತೋಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಮಧ್ಯಾಹ್ನ ಭೇಟಿ ಕೊಡಲಿದ್ದಾರೆ.

ರೈತ ಹರೀಶ್ ಅವರ ಮನೆಯ ಪಕ್ಕದಲ್ಲಿ ಆರೋಗ್ಯಕರ ಅಡಿಕೆ ಗಿಡದ ಎಲೆಗಳು, ಹಿಂಗಾರ, ಗೊನೆ, ಅಡಿಕೆ ಕಾಯಿ ಹಾಗೂ ಎಲೆಚುಕ್ಕಿ ಬಾಧಿತ ಅಡಿಕೆ ಗಿಡದ ಎಲೆ, ಒಣಗಿದ ಹಿಂಗಾರ, ಗೊನೆ, ಅಡಿಕೆ ಕಾಯಿ ಮತ್ತು ಈಗ ಬಳಕೆ ಮಾಡುತ್ತಿರುವ ಔಷಧಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಮಲೆನಾಡಿನಲ್ಲಿ 45 ಸಾವಿರ ಹೆಕ್ಟೇರ್ ನಷ್ಟು ಅಡಿಕೆ ತೋಟಗಳು ಎಲೆಚುಕ್ಕಿ ರೋಗ ಬಾಧಿತವಾಗಿವೆ ಎಂದು ಅಂದಾಜಿಸಲಾಗಿದೆ.

ADVERTISEMENT

ಇಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ಹಾಗೂ ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ನಾಗೇಂದ್ರ ಪ್ರಸಾದ್ ಉಂಟೂರು ಗ್ರಾಮಕ್ಕೆ ಬಂದಿದ್ದು, ಬಸವರಾಜ ಬೊಮ್ಮಾಯಿ ಅವರಿಗೆ ರೋಗದ ಗಂಭೀರತೆ ಬಗ್ಗೆ ವಿವರಿಸಲಿದ್ದಾರೆ.

ಪೂರಾ ಹಿಂಗಾರವೇ ಸುಟ್ಟು ಹೋಗಿದೆ. ಇರುವ ಎರಡೂವರೆ ಎಕರೆ ತೋಟದಲ್ಲಿ ಈ ಹಿಂದೆ 15 ಕ್ವಿಂಟಲ್ ಅಡಿಕೆ ಬೆಳೆಯುತ್ತಿದ್ದೆವು. ಈಗ ಎಲೆ ಚುಕ್ಕಿ ರೋಗ ಬಾಧೆಯಿಂದ ಆರು ಕ್ವಿಂಟಲ್ ಅಡಿಕೆ ಸಿಕ್ಕಿದೆ. ಅಡಿಕೆಯ ತೂಕ ಕೂಡ ಕಡಿಮೆ ಆಗಿದೆ. ಹೀಗಾದರೆ ತೋಟ ನಂಬಿಕೊಂಡು ಬದುಕುವುದು ಹೇಗೆ ಎಂದು ರೈತ ಹರೀಶ್ ಅವರ ಪತ್ನಿ ಸುಪ್ರಿತಾ 'ಪ್ರಜಾವಾಣಿ' ಎದುರು ಅಳಲು ತೋಡಿಕೊಂಡರು.

ನಿರ್ದಿಷ್ಟ ಔಷಧಿ ಕೊಡಲಿ: ಅಡಿಕೆ ಬೆಳೆಗಾರರ ಆಗ್ರಹ
ಶಿವಮೊಗ್ಗ:
ಕಲ್ಲಂಗಡಿ ಹಣ್ಣು ಹಾಗೂ ತರಕಾರಿ ಬೆಳೆಗೆ ಹೊಡೆಯುವ ಸಾಫ್ (saaf) ಔಷಧಿಯನ್ನು ಎಲೆಚುಕ್ಕಿ ರೋಗಕ್ಕೆ ಹೊಡೆಯಲು ತೋಟಗಾರಿಕೆ ಇಲಾಖೆಯವರು ಶಿಫಾರಸು ಮಾಡಿದ್ದಾರೆ. ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ತೋಟ ಉಳಿಸಿಕೊಳ್ಳಲು ಆಗುತ್ತಿಲ್ಲ ಎಂದು ತೀರ್ಥಹಳ್ಳಿ ತಾಲ್ಲೂಕಿನ ಉಂಟೂರು ಗ್ರಾಮದ ಅಡಿಕೆ ಬೆಳೆಗಾರರು ಅಳಲು ತೋಡಿಕೊಂಡರು.

'ನಮಗೆ ಔಷಧಿ ಮಾತ್ರ ಬೇಕಿದೆ. ಪರಿಹಾರ ಬೇಕಿಲ್ಲ. ಅದರಲ್ಲೂ ಎಲೆ ಚುಕ್ಕಿ ರೋಗಕ್ಕೆ ನಿರ್ದಿಷ್ಟ ಔಷಧಿ ಕೊಡಲಿ' ಎಂದು ಬೆಳೆಗಾರ ರಕ್ಷಿತ್ ಮೇಗರವಳ್ಳಿ ಆಗ್ರಹಿಸಿದರು.

'ಎಲೆ ಚುಕ್ಕಿ ರೋಗಕ್ಕೆ ಔಷಧ ಹೊಡೆಯಲು ಪ್ರತಿ ಎಕರೆಗೆ ಒಮ್ಮೆಗೆ ₹25 ಸಾವಿರ ಖರ್ಚು ಬರುತ್ತಿದೆ. ಔಷಧಿ ಹೊಡೆಯುವವರಿಗೆ ಪ್ರತಿ ಡ್ರಮ್ ಗೆ ₹1200 ಕೊಡಬೇಕಿದೆ. ನಾಲ್ಕು ಬಾರಿ ಔಷಧಿ ಹೊಡೆಯಲು ಹೇಳಿದ್ದಾರೆ. ನಿರ್ದಿಷ್ಟ ಔಷಧಿ ಶಿಫಾರಸು ಮಾಡಿದಲ್ಲಿ ನಮಗೆ ಖರ್ಚು ಕಡಿಮೆ ಆಗಲಿದೆ' ಎಂದು ರಕ್ಷಿತ್ ಹೇಳಿದರು.

'ನೀವು ಶಿಫಾರಸು ಮಾಡಿರುವ ಎಲ್ಲ ಔಷಧಿಗಳನ್ನು ತೋಟದಲ್ಲಿ ನಾವು ಪ್ರಯೋಗ ಮಾಡಿದ್ದೇವೆ. ಯಾವುದೇ ಉಪಯೋಗ ಆಗಿಲ್ಲ. ಬರೀ ನಮ್ಮ ಹಣ ಖರ್ಚು ಆಗಿದೆ' ಎಂದು ಸ್ಥಳದಲ್ಲಿದ್ದ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ಅವರನ್ನು ಬೆಳೆಗಾರರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.