
ಸಾಗರ: ಮುಖ್ಯಮಂತ್ರಿಯನ್ನು ಬದಲಿಸಬೇಕೇ ಬೇಡವೇ ಎಂಬ ವಿಷಯವನ್ನು ಅಂತಿಮವಾಗಿ ತೀರ್ಮಾನಿಸುವುದು ಪಕ್ಷದ ಹೈಕಮಾಂಡ್. ಈ ವಿಷಯದ ಬಗ್ಗೆ ಬೇರೆ ಯಾರೂ ಮಾತನಾಡುವುದು ಸರಿಯಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸ್ಪಷ್ಟಪಡಿಸಿದರು.
ಇಲ್ಲಿನ ಜೋಸೆಫ್ ನಗರ ಬಡಾವಣೆಯಲ್ಲಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿ, ಅವರಿಗೆ ಗೌರವ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಸಿದ್ದರಾಮಯ್ಯ ಅವರ ಆಶಯಗಳನ್ನು ಮುಂದುವರೆಸುವ ಸಾಮರ್ಥ್ಯವಿರುವುದು ಸತೀಶ್ ಜಾರಕಿಹೊಳಿ ಅವರಿಗೆ ಎಂದು ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಹೇಳಿದ್ದಾರೆ. ಈ ಮಾತಿಗೆ ಸಿದ್ದರಾಮಯ್ಯ ಅವರ ಮುಂದಿನ ರಾಜಕೀಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ ಎಂಬುದಾಗಿ ಅರ್ಥ ಕಲ್ಪಿಸುವುದು ಸರಿಯಲ್ಲ’ ಎಂದು ಲಾಡ್ ಸ್ಪಷ್ಟಪಡಿಸಿದರು.
ಆರ್‌ಎಸ್ಎಸ್ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ತಳೆದಿರುವ ನಿಲುವು ರಾಜಕೀಯ ಸಿದ್ಧಾಂತ ಕುರಿತ ಯೋಚನಾ ಪ್ರಕ್ರಿಯೆಗೆ ಚಾಲನೆ ನೀಡಿದಂತಾಗಿದೆ. ಮೂರು ಸಾವಿರ ವರ್ಷಗಳಿಂದ ಶೋಷಣೆ, ದಮನಕ್ಕೆ ಒಳಗಾದವರ ಇತಿಹಾಸ ಒಂದೆಡೆಯಿದ್ದರೆ ನೂರು ವರ್ಷಗಳಿಂದ ಸುಳ್ಳುಗಳನ್ನೆ ಸತ್ಯ ಮಾಡಲು ಹೊರಟಿರುವವರ ಇತಿಹಾಸ ಮತ್ತೊಂದೆಡೆ ಇದೆ. ಈ ಬಗ್ಗೆ ಸ್ಪಷ್ಟತೆ ಮೂಡಲು ಇದು ಸಕಾಲ ಎಂದು ಅವರು ಪ್ರತಿಕ್ರಿಯಿಸಿದರು.
ಸಿದ್ಧಾಂತದ ವಿಷಯದಲ್ಲಿ ಕೇವಲ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸ್ಪಷ್ಟತೆ ನಿರೀಕ್ಷಿಸಲಾಗದು. ಇದರ ಜೊತೆಗೆ ಸಾರ್ವಜನಿಕರಲ್ಲೂ ಇಂತಹ ಸ್ಪಷ್ಟತೆ ಮೂಡಬೇಕಿದೆ ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಪ್ರಮುಖರಾದ ಎಚ್.ಸಿ.ಯೋಗೀಶ್, ರಂಗನಾಥ್, ಸೋಮಶೇಖರ್ ಲ್ಯಾವಿಗೆರೆ, ತಾರಾಮೂರ್ತಿ, ಕರುಣಾಕರ್, ಡಿ.ದಿನೇಶ್, ಗಿರೀಶ್ ಕೋವಿ, ವಿಲ್ಸನ್ ಗೊನ್ಸಾಲ್ವಿಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.