ADVERTISEMENT

ಕಾಡುತ್ಪನ್ನ ಸಂಗ್ರಹದಾಸೆ ಮಂಗನ ಕಾಯಿಲೆಗೆ ಆಹ್ವಾನ

ಘಟ್ಟಸೀಮೆಯಲ್ಲಿ ಉಲ್ಬಣಿಸುತ್ತಿರುವ ರೋಗ ಭೀತಿ

ಶಿವಾನಂದ ಕರ್ಕಿ
Published 8 ಏಪ್ರಿಲ್ 2019, 19:30 IST
Last Updated 8 ಏಪ್ರಿಲ್ 2019, 19:30 IST
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಾಡಿನಿಂದ ದರಗು(ಒಣಗಿದ ಎಲೆ) ಸಂಗ್ರಹಿಸಿ ತರುತ್ತಿರುವುದನ್ನು ಸದ್ಯದ ಮಟ್ಟಿಗೆ ನಿಲ್ಲಿಸುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರಲ್ಲಿ ಮನವಿ ಮಾಡುತ್ತಿರುವುದು  
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಾಡಿನಿಂದ ದರಗು(ಒಣಗಿದ ಎಲೆ) ಸಂಗ್ರಹಿಸಿ ತರುತ್ತಿರುವುದನ್ನು ಸದ್ಯದ ಮಟ್ಟಿಗೆ ನಿಲ್ಲಿಸುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರಲ್ಲಿ ಮನವಿ ಮಾಡುತ್ತಿರುವುದು     

ತೀರ್ಥಹಳ್ಳಿ: ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಉಲ್ಬಣಿಸಲು ಕಾಡುತ್ಪನ್ನ ಸಂಗ್ರಹಿಸಲು ಕಾಡಿಗೆ ತೆರಳುವುದು ಹಾಗೂ ಕಾಡಿನಿಂದ ಊರಿಗೆ ದರಗು (ಒಣಗಿದ ಎಲೆ) ತರುತ್ತಿರುವುದೇ ಪ್ರಮುಖ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.

ಕಾಡುತ್ಪನ್ನಗಳಾದ ಸೀಗೇಕಾಯಿ, ಅಂಟುವಾಳ, ದರಗು ಸಂಗ್ರಹಿಸಲು ಗುಂಪು ಗುಂಪಾಗಿ ಕಾಡಿಗೆ ತೆರಳುವ ಮಂದಿಯಲ್ಲಿ ಮಂಗನ ಕಾಯಿಲೆಯ ವೈರಾಣುಗಳು ಪತ್ತೆಯಾಗುತ್ತಿವೆ. ಸೀಗೇಕಾಯಿಗೆ ಬೇಡಿಕೆ ಹೆಚ್ಚಿರುವ ಕಾರಣ ಕಾಡಿನಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿರುವುದರಿಂದ ರೋಗ ಹರಡುವ ಉಣಗು (ಉಣ್ಣೆ) ಮನುಷ್ಯರ ದೇಹದ ಪ್ರವೇಶ ಪಡೆಯುತ್ತಿವೆ.

ಮಂಡಗದ್ದೆ ಹೋಬಳಿಯ ಕುಣಜೆಬೆಟ್ಟ, ಉಬ್ಬೂರು ಘಟ್ಟ, ಹೆಗ್ಗಾರುಘಟ್ಟ, ಹಾಲುಮಹಿಷಿ ಕಾಡಿನಲ್ಲಿ ಸೀಗೇಕಾಯಿ, ಅಂಟುವಾಳ, ದರಗು ಸಂಗ್ರಹಿಸುತ್ತಿದ್ದು, ಈ ಭಾಗದ ಜನರಲ್ಲಿ ಮಂಗನ ಕಾಯಿಲೆ ವೈರಾಣು ಕಾಣಿಸಿಕೊಂಡಿದೆ.

ADVERTISEMENT

ಕುಡುವಳ್ಳಿಯಲ್ಲಿನ ಮಹಿಳೆ ಹಾಗೂ ತೋಟದಕೊಪ್ಪದಲ್ಲಿನ ಪುರುಷರೊಬ್ಬರಲ್ಲಿ ಮಂಗನ ಕಾಯಿಲೆ ವೈರಾಣು ಇರುವುದು ದೃಢಪಟ್ಟಿದೆ. ಈಗಾಗಲೇ ತೋಟದಕೊಪ್ಪ ಗ್ರಾಮದ ಲಚ್ಚಪೂಜಾರಿ, ಶ್ರೀನಿವಾಸನಾಯ್ಕ್ ಅವರು ಮೃತಪಟ್ಟಿದ್ದಾರೆ. ಹೆಗ್ಗಾರು ಘಟ್ಟ ಸೆರಗಿನ ಗಂಟೆಜನಗಲ್ಲು ರಾಜು ಪೂಜಾರಿ ರೋಗಕ್ಕೆ ಬಲಿಯಾಗಿದ್ದಾರೆ. ತೋಟದಕೊಪ್ಪ ಗ್ರಾಮದಲ್ಲಿನ ಒಬ್ಬರಿಗೆ ರೋಗ ಕಾಣಿಸಿಕೊಂಡಿದೆ. ಮಂಗನ ಕಾಯಿಲೆ ದೃಢಪಟ್ಟಿದ್ದರೂ ರೋಗಿ ಆಸ್ಪತ್ರೆಗೆ ಬರಲು ಸಿದ್ಧರಿಲ್ಲ. 108 ವಾಹನ ತೆಗೆದುಕೊಂಡು ಗ್ರಾಮಕ್ಕೆ ಹೋದರೂ ಆಸ್ಪತ್ರೆಗೆ ಹೋಗುವ ಮನಸ್ಸು ಮಾಡುತ್ತಿಲ್ಲ. ಇಂತಹ ರೋಗಿಗಳ ಮನವೊಲಿಸುವುದು ಸವಾಲಾಗಿದೆ ಎಂದು ವೈದ್ಯಕೀಯ ಸಿಬ್ಬಂದಿ ಹೇಳುತ್ತಾರೆ.

ಬೇಸಿಗೆ ಕಾಲದಲ್ಲಿ ಕೊಟ್ಟಿಗೆ ಗೊಬ್ಬರ (ಹಟ್ಟಿಗೊಬ್ಬರ) ತಯಾರಿಸಲು ಮಲೆನಾಡಿನ ರೈತರು ಕಾಡಿನಿಂದ ದರಗು ತರುವ ಸಂಪ್ರದಾಯವನ್ನು ಅನಾದಿಕಾಲದಿಂದಲೂ ಅನುಸರಿಸುತ್ತಿದ್ದಾರೆ. ದರಗನ್ನು ಮನೆ ಸಮೀಪ ಸಂಗ್ರಹಿಸಿಟ್ಟುಕೊಂಡು ಪ್ರತಿ ನಿತ್ಯ ಕೊಟ್ಟಿಗೆಗೆ ಹರಡುತ್ತಾರೆ. ಕೊಟ್ಟಿಗೆಯಲ್ಲಿ ಕಟ್ಟಿದ ಜಾನುವಾರಿನ ಸಗಣಿ, ಗಂಜಲದೊಂದಿಗೆ ದರಗು ಪುಡಿಯಾಗಿ ಒಳ್ಳೆಯ ಗೊಬ್ಬರ ಸಿದ್ಧವಾಗುತ್ತದೆ. ಸುಲಭವಾಗಿ ಸಿಗುವ ದರಗನ್ನು ತಂದು ಜಮೀನಿಗೆ ಗೊಬ್ಬರ ಸಿದ್ದಪಡಿಸಿಕೊಳ್ಳುತ್ತಿರುವುದರಿಂದ ಮಂಗನ ಕಾಯಿಲೆಯ ಪ್ರಸರಣವನ್ನು ರೈತ ಸಮುದಾಯ ಮಾಡುತ್ತಿದೆ ಎಂಬ ಆರೋಪ ಆರೋಗ್ಯ ಇಲಾಖೆಯದ್ದು.

ಕಾಡಿನಲ್ಲಿ ದರಗಿಗೆ ಅಂಟಿದ ಮಂಗನ ಕಾಯಿಲೆ ಹರಡುವ ಒಣಗು ಸುಲಭವಾಗಿ ಮನುಷ್ಯರ ದೇಹವನ್ನು ಕಚ್ಚುವುದರಿಂದ ರೋಗ ಹರಡುತ್ತಿದೆ. ಉಣಗನ್ನು ಮನೆ ಬಳಿ ಸುಳಿಯದಂತೆ ಜಾಗೃತಿ ವಹಿಸಬೇಕು ಎಂಬ ಆರೋಗ್ಯ ಇಲಾಖೆಯ ಪ್ರಕಟಣೆಯನ್ನು ಗಂಭೀರವಾಗಿ ಪರಿಗಣಿಸದ ಕಾರಣ ರೋಗ ಭೀತಿ ಹೆಚ್ಚಾಗಿದೆ. ಕಾಡಿನಿಂದ ದರಗನ್ನು ಗ್ರಾಮಗಳಿಗೆ ತರದಂತೆ ಆರೋಗ್ಯ ಇಲಾಖೆ ಭಿತ್ತಿ ಪತ್ರ ಹಂಚಿ, ಧ್ವನಿವರ್ಧಕದ ಮೂಲಕ ಪ್ರಕಟಣೆ ನೀಡಿದರೂ ಕೆಲ ಗ್ರಾಮಗಳ ಜನರಲ್ಲಿ ಜಾಗೃತಿ ಮೂಡಿಲ್ಲ. ಗೊಬ್ಬರ ತಯಾರು ಮಾಡುವ ಆಸೆಗೆ ಬಿದ್ದ ಗ್ರಾಮಗಳಲ್ಲಿ ಈಗ ಮಂಗನ ಕಾಯಿಲೆ ತೀವ್ರಗೊಳ್ಳುತ್ತಿದೆ ಎಂಬ ಅಂಶವನ್ನು ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ.

ಕಾಡಿಗೆ ತೆರಳುವವರು ಡಿಎಂಪಿ ತೈಲ ಹಚ್ಚಿಕೊಳ್ಳುವಂತೆ ಸೂಚಿಸಿರುವ ಸಲಹೆಯನ್ನು ಪಾಲಿಸುತ್ತಿಲ್ಲ. ಕಾಡಿಗೆ ಹೋಗದಂತೆ ಎಚ್ಚರ ವಹಿಸಬೇಕು ಎಂಬ ಅಂಶವನ್ನು ಪರಿಗಣಿಸುತ್ತಿಲ್ಲ. ರೋಗ ಬಂದರೆ ಅದನ್ನು ವೈದ್ಯರು ವಾಸಿಪಡಿಸುತ್ತಾರೆ ಎಂಬ ಧೋರಣೆ ಕೆಲವರಲ್ಲಿದೆ. ಮಂಗನ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂಬ ಆರೋಗ್ಯ ಇಲಾಖೆಯ ಮನವಿಯನ್ನು ಹಗುರವಾಗಿ ಪರಿಗಣಿಸುವ ಮನೋಭಾವನೆಯಿಂದ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುವಂತಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ವೈದ್ಯರು ಹೇಳುತ್ತಾರೆ.

*10 ವರ್ಷಗಳಲ್ಲಿ ಮಂಗನ ಕಾಯಿಲೆಗೆ ತಾಲ್ಲೂಕಿನಲ್ಲಿ 12 ಮಂದಿ ಜೀವ ತೆತ್ತಿದ್ದಾರೆ. ಆರೋಗ್ಯ ಇಲಾಖೆ ಸೂಚಿಸುವ ನಿಯಮಗಳನ್ನು ಗ್ರಾಮಸ್ಥರು ಸರಿಯಾಗಿ ಪಾಲಿಸುತ್ತಿಲ್ಲ. ಗ್ರಾಮಸ್ಥರು ಒಂದೆರಡು ವಾರ ಕಾಡಿಗೆ ಹೋಗಬಾರದು.

- ಡಾ.ಎಸ್.ಕೆ. ಕಿರಣ್, ಉಪ ನಿರ್ದೇಶಕರು, ಪರಿಮಾಣು ಕ್ರಿಮಿ ಪರಿಶೋಧನಾ ಪ್ರಯೋಗಾಲಯ

*ಗದ್ದೆ, ತೋಟಕ್ಕೆ ಗೊಬ್ಬರ ಮಾಡಲು ದರಗು ತರುತ್ತೇವೆ. ಜಮೀನಿಗೆ ಕೊಟ್ಟಿಗೆ ಗೊಬ್ಬರ ಹಾಕದೇ ಇದ್ದರೆ ಬೆಳೆ ಬೆಳೆಯಲು ಸಾಧ್ಯವಿಲ್ಲ. ರಾಸಾಯನಿಕ ಗೊಬ್ಬರ ದುಬಾರಿಯಾಗಿದೆ. ಕಾಡಿಗೆ ಹೋಗಬೇಡಿ ಎಂದರೆ ಜಮೀನು ಮಾಡೋದು ಯಾರು?

- ಶಿವಪ್ಪ ತೋಟದಕೊಪ್ಪ, ರೈತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.