ADVERTISEMENT

ಸಾವಯವ ಕೃಷಿಯಲ್ಲಿ ವಾಣಿಜ್ಯ ಬೆಳೆಗಳು; ಕೃಷಿಯಲ್ಲಿ ಖುಷಿ ಕಂಡ ರಘುನಾಥ್

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 4:09 IST
Last Updated 20 ಅಕ್ಟೋಬರ್ 2021, 4:09 IST
ಖುಷ್ಕಿ ಜಮೀನಿನಲ್ಲಿನ ವೈವಿಧ್ಯಮಯ ಬೆಳೆಗಳೊಂದಿಗೆ ತ್ಯಾಗರ್ತಿ ಸಮೀಪದ ಮನೆಘಟ್ಟದ ರಘುನಾಥ್, ವಿಜಯಾ ನಳಿನಿ ಶರ್ಮಾ ದಂಪತಿ
ಖುಷ್ಕಿ ಜಮೀನಿನಲ್ಲಿನ ವೈವಿಧ್ಯಮಯ ಬೆಳೆಗಳೊಂದಿಗೆ ತ್ಯಾಗರ್ತಿ ಸಮೀಪದ ಮನೆಘಟ್ಟದ ರಘುನಾಥ್, ವಿಜಯಾ ನಳಿನಿ ಶರ್ಮಾ ದಂಪತಿ   

ತ್ಯಾಗರ್ತಿ:‌ ಕೃಷಿಯಿಂದ ವಿಮುಖರಾಗಿ ಜನರು ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗುತ್ತಿರುವ ಇಂದಿನ ದಿನಗಳಲ್ಲಿ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿ ವೃತ್ತಿಗೆ ವಿದಾಯ ಹೇಳಿ ಸಾವಯವ ಕೃಷಿಯಲ್ಲಿ ನೆಮ್ಮದಿ ಜೀವನ ಕಂಡುಕೊಂಡಿದ್ದಾರೆಸಾಗರ ತಾಲ್ಲೂಕಿನ ಮನೆಘಟ್ಟ ನಿವಾಸಿ ರಘುನಾಥ್ ಮನೆಘಟ್ಟ.

ದೂರದರ್ಶನದಲ್ಲಿ 35 ವರ್ಷಗಳ ಕಾಲ ವಿಡಿಯೊಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಘುನಾಥ್ ಮನೆಘಟ್ಟ ಸ್ವಯಂ ನಿವೃತ್ತಿ ಪಡೆದು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವರಿಗೆ ಮಾದರಿಯಾಗಿದ್ದಾರೆ.ವೃತ್ತಿಗೆ ವಿದಾಯ ಹೇಳಿ ಪತ್ನಿ ವಿಜಯಾ ನಳಿನಿ ಶರ್ಮಾ ಅವರೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಅವರ ಶ್ರದ್ಧೆ, ಬತ್ತದ ಉತ್ಸಾಹ ಯುವಕರಿಗೆ ಮಾದರಿ.

ಮೂಲತಃ ಕೃಷಿ ಕುಟುಂಬದಿಂದ ಬಂದ ಅವರು 2017ರಲ್ಲಿ ಸಾಗರ ತಾಲ್ಲೂಕಿನ ಹೊಸಂತೆ ಗ್ರಾಮದಲ್ಲಿ ತಮ್ಮ ನಿವೃತ್ತಿ ಹಣದಿಂದ 4 ಎಕರೆ ಖುಷ್ಕಿ ಜಮೀನು ಖರೀದಿಸಿದ್ದಾರೆ. ಕೊಳವೆಬಾವಿ ಕೊರೆಯಿಸಿ ಸೋಲಾರ್ ವಿದ್ಯುತ್ ಅಳವಡಿಸಿ ಹಲವು ರೀತಿಯ ಬೆಳೆಗಳನ್ನು ಪ್ರಾಯೋಗಿಕವಾಗಿ ಬೆಳೆಯುತ್ತಿದ್ದಾರೆ. ಇವರ ಈ ಕೃಷಿ ಪ್ರೀತಿಗೆ ಕುಟುಂಬದವರು ಬೆಂಬಲವಾಗಿ ನಿಂತಿದ್ದಾರೆ.

ADVERTISEMENT

ಅಲ್ಪ ಜಮೀನಿನಲ್ಲಿ ರಸಗೊಬ್ಬರಗಳನ್ನು ಬಳಸದೇ ಸಾವಯವ ಕೃಷಿಗೆ ಒತ್ತು ನೀಡಿರುವ ಅವರು ವಾಣಿಜ್ಯ ಬೆಳೆಗಳ ಜತೆಗೆ ವಿವಿಧ ರೀತಿಯ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ.

ಅವರ ಜಮೀನಿನಲ್ಲಿ ತೆಂಗು, ಅಡಿಕೆ, ಕಾಫಿ, ಗೇರು, ದೀರ್ಘಾವಧಿ ಬೆಳೆಗಳಾದ ಮಾವು, ಹಲಸು, ಅಲ್ಪಾವಧಿ ಬೆಳೆಗಳಾದ ಗೆಣಸು, ಶುಂಠಿ, ಅರಿಶಿನ, ಶೇಂಗಾ, ಬಾಳೆ, ಮರಗೆಣಸು ಮತ್ತು ಹಣ್ಣಿನ ಗಿಡಗಳಾದ ದಾಳಿಂಬೆ, ಮೋಸಂಬಿ, ಕಿತ್ತಳೆ, ನೋನಿ, ಲಿಚಿ, ಅಂಜೂರ, ಆಲೀವ್, ಪೇರಲೆ, ಸಪೋಟ, ಲಕ್ಷ್ಮಣ ಫಲ, ಸೀತಾಫಲ, ಕಿವಿ ಹಣ್ಣು, ಬೆಣ್ಣೆ ಹಣ್ಣು ಹಾಗೂ ನಿಂಬೆ, ನುಗ್ಗೆ, ರುದ್ರಾಕ್ಷಿ ಹೀಗೆ ವೈವಿಧ್ಯಮಯ
ಬೆಳೆಗಳು ನಳನಳಿಸುತ್ತಿವೆ. ಅವರ ಜಮೀನಿಗೆ ಒಮ್ಮೆ ಭೇಟಿ ನೀಡಿದರೆ ವಿವಿಧ ರೀತಿಯ ಬೆಳೆಗಳಿಂದ ಒಂದು ಕೃಷಿ ವಿಶ್ವವಿದ್ಯಾಲಯದಂತೆ ಕಾಣುತ್ತದೆ.ಕಾಳುಮೆಣಸು ಬೆಳೆಯಲು ಸಿಲ್ವರ್ ಓಕ್ ಗಿಡಗಳನ್ನು ನೆಟ್ಟಿದ್ದಾರೆ.

ಲಾಭಕ್ಕಿಂತ ಹೆಚ್ಚು ಪ್ರಾಯೋಗಿಕವಾಗಿಯೇ ವೈವಿಧ್ಯಮಯ ಬೆಳೆಗಳತ್ತ ಮುಖ ಮಾಡಿದ್ದಾರೆ. ಕೆಲ ಬೆಳೆಗಳು ಈಗಾಗಲೇ ಅವರಿಗೆ ಲಾಭ ತಂದು ತಂದುಕೊಟ್ಟಿದ್ದು, ಅವರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಏಕಬೆಳೆ ಪದ್ಧತಿ ಬಿಟ್ಟು ಸಮಗ್ರ ಬೇಸಾಯಕ್ಕೆ ಒತ್ತು ನೀಡಿದರೆ ಕೃಷಿ ಕೈ ಹಿಡಿಯುವ ಜತೆಗೆ ನೆಮ್ಮದಿ ಜೀವನವನ್ನೂ ನೀಡುತ್ತದೆಎಂದು ತಮ್ಮ ಅನುಭವ ಬಿಚ್ಚಿಡುತ್ತಾರೆ ರಘುನಾಥ್.

‘ಲಾಭದ ದೃಷ್ಟಿಯಿಂದ ನೋಡದೇ ಮಾನಸಿಕ ನೆಮ್ಮದಿಗಾಗಿ ಸ್ವಯಂ ನಿವೃತ್ತಿಯ ನಂತರ ಕೃಷಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಇದು ಸಂತಸ ತಂದಿದೆ. ನನ್ನ ಕಾರ್ಯಕ್ಕೆಪತ್ನಿಯೂ ಕೈ ಜೋಡಿಸಿದ್ದಾರೆ’ ಎಂದು ಸಂತಸ ಹಂಚಿಕೊಂಡರು ಅವರು.

‘ಆರೋಗ್ಯ, ನೆಮ್ಮದಿಯ ಜೀವನ, ಉತ್ತಮ ಪರಿಸರ ದೃಷ್ಠಿಯಿಂದ ನಗರ ಪ್ರದೇಶವನ್ನು ತೊರೆದು ಹಳ್ಳಿಗೆ ಬಂದಿರುವುದು ಮನಸ್ಸಿಗೆ ಸಂತೋಷ ತಂದಿದೆ’ ಎಂದು ರಘುನಾಥ್ ಪತ್ನಿ ವಿಜಯಾ ನಳಿನಿ ಶರ್ಮಾ ಖುಷಿಯಿಂದಲೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.