
ಹೊಸನಗರ: ರಾಜ್ಯದಲ್ಲಿ ಈಡಿಗರ ಜನಾಂಗ ನೆಮ್ಮದಿಯ ಜೀವನ ಸಾಗಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಹೊಸನಗರ ತಾಲ್ಲೂಕು ಆರ್ಯ ಈಡಿಗರ ಸಂಘ, ದೀವರ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆದ ಆರ್ಯ ಈಡಿಗರ ಸಂಘದ ನೂತನ ಸಮುದಾಯ ಭವನ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದರು.
‘ಎಸ್. ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪ ಜನರ ಮಧ್ಯದಲ್ಲಿಯೇ ಬೆಳೆದು ರಾಜಕೀಯ ನೇತಾರರಾದರು. ಸಮಾಜದ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದರು. ಅವರ ಹೋರಾಟ ಫಲವಾಗಿ ನಮ್ಮವರು ಸುಖ ಜೀವನ ನಡೆಸುವಂತಾಗಿದೆ’ ಎಂದರು.
‘ನಮ್ಮ ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮಾಡಿ ಸ್ವಾಭಿಮಾನಿಗಳಾಬೇಕು. ಬಾಲಕಿಯರ ವಿದ್ಯಾರ್ಥಿ ನಿಲಯ ಆದಷ್ಟು ಬೇಗ ನಿರ್ಮಾಣವಾಬೇಕು. ನಮ್ಮ ಕುಟುಂಬದ ಪರವಾಗಿ ₹ 25 ಲಕ್ಷ ಹಣ ಕೊಡುತ್ತೇನೆ ಎಂದು ಘೋಷಿಸಿದರು.
ಬಾಲಕಿಯರ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ, ಸಮಾಜದ ಹಿತದೃಷ್ಟಿಯಲ್ಲಿ ಪಕ್ಷಾತೀತವಾಗಿ ಒಂದಾಗಬೇಕು. ಎಲ್ಲರೂ ಸಂಘಟನೆಯಿಂದ ಬಲಯುತವಾಗಬೇಕು. ಸಮಾಜದ ವಿಷಯದಲ್ಲಿ ಒಟ್ಟಾಗಿ ಹೋಗೋಣ ಎಂದರು.
ಜಿಲ್ಲೆಯ ಎಲ್ಲಾ ಸಮುದಾಯಗಳ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಿದ್ದೇನೆ. ಸಂಘದ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣಕ್ಕೆ ₹ 1 ಕೋಟಿ ಅನುದಾನ ಕೊಡುತ್ತೇನೆ ಎಂದರು.
ಸಮಾರಂಭವನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಿ ಮಾತನಾಡಿದರು.
ಗರತಿಕೆರೆ ನಿಟ್ಟೂರು ನಾರಾಯಣಗುರು ಸಂಸ್ಥಾನ ಮಠದ ಶ್ರೀರೇಣುಕಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಆರ್ಯ ಈಡಿಗರ ಸಂಘದ ಅಧ್ಯಕ್ಷ ಬಂಡಿ ರಾಮಚಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಜಿ.ಡಿ. ನಾರಾಯಣಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶ್ವೇತಾ ಬಂಡಿ, ಪ್ರಮುಖರಾದ ಕಲಗೋಡು ರತ್ನಾಕರ್, ಸುರೇಶ್ ಸ್ವಾಮಿರಾವ್, ಪುಟ್ಟಸ್ವಾಮಿ, ಮುರುಳೀಧರ, ಎಂ.ಪಿ. ಸುರೇಶ್, ಹುಲಿಗಾರು ಕೃಷ್ಣಮೂರ್ತಿ ಇದ್ದರು.
ಸಂಘದ ಉಪಾಧ್ಯಕ್ಷ ಎರಗಿ ಉಮೇಶ್ ಸ್ವಾಗತಿಸಿದರು. ಶಿಕ್ಷಕ ಪ್ರದೀಪ್ ಹಾಗೂ ಸುರೇಖಾ ನಿರೂಪಿಸಿದರು.
ಸಮಸ್ಯೆ ಮುಗಿದಿಲ್ಲ
ರಾಜ್ಯದಲ್ಲಿ ರೈತರ ಬಗರ್ ಸಮಸ್ಯೆ ದಿನೇದಿನೆ ಜಟಿಲವಾಗುತ್ತಿದೆ. ಬಡಪಾಯಿ ರೈತರ ಮೇಲೆ ಅರಣ್ಯ ಅಧಿಕಾರಿಗಳು ಕಾನೂನು ಸಮರ ಹೊಡಿದ್ದಾರೆ. ಅಲ್ಲಲ್ಲಿ ದೌರ್ಜನ್ಯ ನಡೆಯುತ್ತಿದೆ. ತಿಂಗಳೊಳಗೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಿದ್ದಾರೆ. ಇಲ್ಲಿನ ಶಾಸಕರು ಮತ್ತು ಸಚಿವರು ರೈತರ ಹಿತ ದೃಷ್ಟಿಯಿಂದ ಸರ್ಕಾರದ ಗಮನ ಸೆಳೆಯಬೇಕು ಎಂದು ಮಾಜಿ ಸಚಿವ ಹಾಲಪ್ಪ ಹರತಾಳು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.