
ಶಿವಮೊಗ್ಗ: ‘ಇಲ್ಲಿನ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಜೆಡಿಎಸ್ ನಗರ ಘಟಕದಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇದುವರೆಗೂ ಸೂಡಾ ವ್ಯಾಪ್ತಿಯಲ್ಲಿ ನಡೆಸಿರುವ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಬೇಕು. ಬಡವರಿಗೆ ಕಡಿಮೆ ದರದಲ್ಲಿ ನಿವೇಶನ ಕೊಡಬೇಕಾದ ಸೂಡಾ, ಸುಳ್ಳು ರಸೀದಿ, ಅವೈಜ್ಞಾನಿಕ ಕಾಮಗಾರಿಗಳ ಮೂಲಕ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುತ್ತಿದೆ. ಈ ಬಗ್ಗೆ ಇಬ್ಬರು ಗುತ್ತಿಗೆದಾರರು ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ’ ಎಂದು ಪ್ರತಿಭಟನಕಾರರು ಆರೋಪಿಸಿದರು.
ಊರಗಡೂರು ಬಡಾವಣೆ ಸೇರಿದಂತೆ ಸೂಡಾ ನಿರ್ಮಿಸುತ್ತಿರುವ ಬಡಾವಣೆಗಳ ಕಾಮಗಾರಿಯಲ್ಲೂ ಅಕ್ರಮ ನಡೆದಿದೆ. ಇದರಿಂದ ನಿವೇಶನ ಆಕಾಂಕ್ಷಿಗಳಿಗೆ ತೊಂದರೆಯಾಗಿದೆ. ಬಡಾವಣೆಗಳ ರಸ್ತೆ ನಿರ್ಮಾಣಕ್ಕೆ ನಿವೇಶನದ ಜಾಗದಿಂದಲೇ ಮಣ್ಣು ಬಗೆದು ಬಳಸಲಾಗಿದೆ. ಆ ನಿವೇಶನದ ಗುಂಡಿಗಳಿಗೆ ನಗರದ ಕಸ ತುಂಬಲಾಗಿದೆ ಎಂದು ಆರೋಪಿಸಿದರು.
ಆದ್ದರಿಂದ ಜಿಲ್ಲಾಡಳಿತ 91ಕ್ಕೂ ಹೆಚ್ಚು ಕಾಮಗಾರಿಗಳ ಬಗ್ಗೆ ತನಿಖೆ ನಡೆಸಬೇಕು. ದುರುಪಯೋಗವಾದ ಹಣ ತಪ್ಪಿತಸ್ಥರಿಂದ ಪ್ರಾಧಿಕಾರಕ್ಕೆ ಮರು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕಡಿದಾಳ್ ಗೋಪಾಲ್, ಮುಖಂಡರಾದ ದೀಪಕ್ ಸಿಂಗ್, ಗೀತಾ ಸತೀಶ್, ಸಂಜಯ್ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.