ಶಿವಮೊಗ್ಗ: ಮತಗಳ್ಳತನದ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೆ.15ರಿಂದ ಪಕ್ಷದ ಅಭಿಯಾನ ಬೂತ್ ಮಟ್ಟದಲ್ಲಿ ಆರಂಭವಾಗಿದ್ದು, ಅಕ್ಟೋಬರ್ 15ರವರೆಗೆ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಕ್ಟೋಬರ್ 22ರಂದು ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ‍್ಪ ಸಾರ್ವಜನಿಕರಿಂದ ಸಹಿ ಸಂಗ್ರಹಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ರಾಷ್ಟದ ಹಲವು ಕಡೆ ಮತ ಕಳುವಿನ ಬಗ್ಗೆ ಎಐಸಿಸಿ ನಾಯಕ ರಾಹುಲ್‌ಗಾಂಧಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಹಲವೆಡೆ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಕಂಡು ಬಂದಿದೆ. ಗ್ರಾಮೀಣ ಪ್ರದೇಶಕ್ಕಿಂತ ನಗರದ ಪ್ರದೇಶದಲ್ಲಿ ಇದು ಹೆಚ್ಚಾಗಿದೆ. ಈ ಬಗ್ಗೆ ಸಾರ್ವಜನಿಕರು ಜಾಗೃತಿ ವಹಿಸಲು ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲೆಯ 14 ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಮೂಲಕ ಅಭಿಯಾನ ನಡೆಸಲಿದೆ ಎಂದರು.
ಪಕ್ಷದ ಬೂತ್‌ಮಟ್ಟದ ನಾಯಕರು ಮತಪಟ್ಟಿಯನ್ನು ಪಡೆದು ಪರಿಶೀಲಿಸಬೇಕು. ವ್ಯತ್ಯಾಸಗಳಿದ್ದರೆ ಬಿಎಲ್‌ಒ ಗಮನಕ್ಕೆ ತಂದು ಸರಿಪಡಿಸಬೇಕು. ಈ ಬಗ್ಗೆ ಮಾಹಿತಿ ನೀಡಲು ಈಗಾಗಲೇ ಹಲವು ಬ್ಲಾಕ್ ಸಮಿತಿ ಸಭೆ ನಡೆಸಿದ್ದೇವೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಂಪಾಷಾ, ಶಿವಕುಮಾರ್, ಪ್ರಮುಖರಾದ ಶಿವಣ್ಣ, ಮಂಜುನಾಥ್ ಬಾಬು, ಅರ್ಚನಾ ನಿರಂಜನ, ನಳಿನಿ, ಪವನ್‌ಕುಮಾರ್, ಯು. ಶಿವಾನಂದ್, ಸೈಯದ್ ವಾಹಿದ್ ಅಡ್ಡು ಉಪಸ್ಥಿತರಿದ್ದರು.
ಭಾರತ-ಪಾಕಿಸ್ತಾನದ ನಡುವೆ ಈಗ ಕ್ರಿಕೆಟ್ ಆಡಿಸುವ ಅಗತ್ಯವೇನಿತ್ತು. ಅಮಿತ್ ಶಾ ಪುತ್ರ ಬಿಸಿಸಿಐ ಅಧ್ಯಕ್ಷ ಜಯ್ ಶಾ ಭಾರತ ತಂಡದ ಆಟಗಾರರ ಮೇಲೆ ಒತ್ತಡ ಹಾಕಿ ಆಟ ಆಡಿಸಿದ್ದಾರೆ.ಆರ್.ಪ್ರಸನ್ನಕುಮಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.