ADVERTISEMENT

ಅರಣ್ಯಭೂಮಿ ಸಾಗುವಳಿ ಸಮಸ್ಯೆ ವಿರುದ್ಧ ಹೋರಾಟ

ಕಾಂಗ್ರೆಸ್‌ ಜನಧ್ವನಿ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಘೋಷಣೆ

​ಪ್ರಜಾವಾಣಿ ವಾರ್ತೆ
Published 11 ಮೇ 2022, 2:46 IST
Last Updated 11 ಮೇ 2022, 2:46 IST
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಜಿಲ್ಲಾ ಭೋವಿ ಸಮುದಾಯ ಭವನದ ಎದುರು ಆಯೋಜಿಸಿದ್ದ ಜನಧ್ವನಿ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿದರು. ಮಾಜಿ ಸಚಿವ ಕೆ. ಎಸ್.ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಅವರ ನೇತೃತ್ವದಲ್ಲಿ ಅಶೋಕ ವೃತ್ತದಿಂದ ಗೋಪಿ ವೃತ್ತದವರೆಗೆ ಪ್ರತಿಭಟನೆ ಮೆರವಣಿಗೆ ನಡೆಯಿತು.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಜಿಲ್ಲಾ ಭೋವಿ ಸಮುದಾಯ ಭವನದ ಎದುರು ಆಯೋಜಿಸಿದ್ದ ಜನಧ್ವನಿ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿದರು. ಮಾಜಿ ಸಚಿವ ಕೆ. ಎಸ್.ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಅವರ ನೇತೃತ್ವದಲ್ಲಿ ಅಶೋಕ ವೃತ್ತದಿಂದ ಗೋಪಿ ವೃತ್ತದವರೆಗೆ ಪ್ರತಿಭಟನೆ ಮೆರವಣಿಗೆ ನಡೆಯಿತು.   

ಶಿವಮೊಗ್ಗ: ಜಿಲ್ಲೆಯ ಬಗರ್‌ಹುಕುಂ, ಅರಣ್ಯ ಭೂಮಿ ಸಾಗುವಳಿದಾರರ ಸಮಸ್ಯೆಗಳನ್ನು ಇಟ್ಟುಕೊಂಡು ಶಿವಮೊಗ್ಗದ ಕಾಗೋಡಿನಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ ಹೋರಾಟ ರೂಪಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಘೋಷಿಸಿದರು.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಜಿಲ್ಲಾ ಭೋವಿ ಸಮುದಾಯ ಭವನದ ಎದುರು ಆಯೋಜಿಸಿದ್ದ ಜನಧ್ವನಿ ಸಮಾವೇಶವನ್ನು ಡೊಳ್ಳು ಬಾರಿಸುವುದು ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕ್ವಿಟ್ ಇಂಡಿಯಾ ದಿನಾಚರಣೆಯ ಅಂಗವಾಗಿ ಆಗಸ್ಟ್ 9ರಂದು ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಕಾಗೋಡಿನಲ್ಲಿ ಬಗರ್‌ಹುಕುಂ, ಅರಣ್ಯ ಭೂಮಿ ಸಾಗುವಳಿದಾರರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಮಟ್ಟದ ಹೋರಾಟ ರೂಪಿಸಲಾಗುತ್ತದೆ. ರಾಜ್ಯಮಟ್ಟದ ನಾಯಕರೆಲ್ಲರೂ ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ADVERTISEMENT

‘ಮುಂದಿನ ಚುನಾವಣೆ ಸಂಬಂಧ ಶಿವಮೊಗ್ಗ ಮತದಾರರ ಒಲವು ಯಾರ ಕಡೆ ಇದೆ ಎಂದು ತಿಳಿಯಲು ಮೂರು ಸರ್ವೆ ಮಾಡಿಸಿದ್ದೇನೆ. ಎಲ್ಲ ಕಡೆಯೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು ಖಚಿತ ಎಂಬುದು ಸರ್ವೆ ಮೂಲಕ ತಿಳಿದುಬಂದಿದೆ. ಬಿಜೆಪಿಯವರು ಭ್ರಷ್ಟಾಚಾರದಿಂದ ರಾಜ್ಯಕ್ಕೆ ಕಳಂಕ ತಂದಿದ್ದಾರೆ. ಇದನ್ನು ತೊಳೆಯುವುದಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿ ಸರ್ಕಾರದ ಆಡಳಿತದಲ್ಲಿ ವಿಧಾನಸೌಧದ ಗೋಡೆಗಳು ಕಾಸು ಕಾಸು ಎಂದು ಕೇಳುತ್ತಿವೆ. ಕರ್ನಾಟಕ ದೇಶದಲ್ಲೇ ನಂ. 1 ಭ್ರಷ್ಟಾಚಾರದ ರಾಜ್ಯ ಎಂಬ ಮುದ್ರೆ ಒತ್ತಿದ್ದಾರೆ. ನಾವು ಸರ್ಕಾರ ನಡೆಸಿದ್ದೇವೆ. ನಾನು ಇಂಧನ ಸಚಿವನಾಗಿದ್ದೆ. ಆಗ ಡಿ.ಕೆ.ಶಿವಕುಮಾರ್ ಅವರಿಗೆ ಯಾರಾದರೂ ₹ 10 ಲಂಚ ಕೊಟ್ಟಿದ್ದಾರೆ ಎಂದು ಸಾಬೀತು ಮಾಡಿದರೆ ಅವತ್ತೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಖಾರವಾಗಿ ಹೇಳಿದರು.

‘ನಮ್ಮ ವೇದ-ಉಪನಿಷತ್ತುಗಳಲ್ಲಿ ಗಂಗಾ ಸ್ನಾನಕ್ಕೆ, ತುಂಗಾ ಪಾನಕ್ಕೆ ಎಂಬ ಮಾತಿದೆ. ಗಂಗಾ ನದಿಯ ನೀರು ಸ್ನಾನ ಮಾಡಲು ಯೋಗ್ಯ, ತುಂಗಾನದಿಯ ನೀರು ಕುಡಿಯಲು ಯೋಗ್ಯ ಎಂದರ್ಥ. ಆದರೆ ಬಿಜೆಪಿ ಸರ್ಕಾರ ತುಂಗಾ ನದಿಯನ್ನು ಮಾತ್ರವಲ್ಲ ಇಡೀ ರಾಜ್ಯವನ್ನೇ ಕಲ್ಮಶ ಮಾಡಿದೆ. ಈ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಲು ಮುಂದಾಗಿದೆ. ಯಡಿಯೂರಪ್ಪನವರೇ, ಈಶ್ವರಪ್ಪನವರೇ ನೀವು ಬಂಡವಾಳ ಹೂಡಿಕೆದಾರರನ್ನು ಶಿವಮೊಗ್ಗ ಜಿಲ್ಲೆಗೆ ಕರೆತನ್ನಿ. ಈ ಜಿಲ್ಲೆಯ 8 ಸಾವಿರ ಜನರಿಗೆ ಉದ್ಯೋಗ ನೀಡಲು ಯಾರಾದರೂ ಧೈರ್ಯವಾಗಿ ಮುಂದೆ ಬರುತ್ತಾರಾ ಎಂಬುದನ್ನು ನೋಡಿ’ ಎಂದು ಹೇಳಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಭ್ರಷ್ಟಾಚಾರದಿಂದ ರಾಜ್ಯ ಮುಳುಗಿಹೋಗಿದ್ದು, ಅಭಿವೃದ್ಧಿ ನಿಂತುಹೋಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಅತ್ಯಂತ ಅಪಾಯದ ಸ್ಥಿತಿ’ ಎಂದು ವಾಗ್ದಾಳಿ ನಡೆಸಿದರು.

‘ಶಿವಮೊಗ್ಗ ಜಿಲ್ಲೆ ಹೋರಾಟದ ನೆಲ. ಹೋರಾಟದ ಮೂಲಕವೇ ಜಿಲ್ಲೆಗೆ ಹಲವು ಶಾಸನ, ಸೌಲಭ್ಯಗಳನ್ನು ಪಡೆಯಲಾಗಿದೆ. ಹೀಗಾಗಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಹೋರಾಟದ ಮೂಲಕವೇ ಮತ್ತೆ ಅಧಿಕಾರಕ್ಕೆ ಬರೋಣ. ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದರು.

ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಶಾಸಕರಾದ ರಾಜೇಗೌಡ, ವೆಂಕಟರಮಣಪ್ಪ, ಬಿ.ಕೆ ಸಂಗಮೇಶ್, ಮಾಜಿ ಶಾಸಕ ಮಧು ಬಂಗಾರಪ್ಪ, ಆರ್.ಪ್ರಸನ್ನ ಕುಮಾರ್, ಎಐಸಿಸಿ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿಶ್ರೀನಿವಾಸ್, ಮುಖಂಡರಾದ ಆರ್.ಎಂ ಮಂಜುನಾಥ ಗೌಡ, ಮುಖಂಡರಾದ ಭೀಮಣ್ಣನಾಯ್ಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಎಸ್ ಸುಂದರೇಶ್ ಇದ್ದರು.

ಶಿವಮೊಗ್ಗ ಈಗ ಭ್ರಷ್ಟರ ಕೂಪ

ವಿಶ್ವಮಾನವತೆ ಸಾರಿದ ರಾಷ್ಟ್ರಕವಿ ಕುವೆಂಪು ಅವರ ತವರೂರು ಶಿವಮೊಗ್ಗ ಈಗ ಯಾವ ಸ್ಥಿತಿಯಲ್ಲಿ ಇದೆ ಎಂಬುದೇ ಬೇಜಾರಿನ ಸಂಗತಿ. ಈಶ್ವರಪ್ಪ ಅವರು ಶೇ 40 ಕಮಿಷನ್ ಪಡೆದು ಕೋಟಿಗಟ್ಟಲೆ ಹಣ ಮಾಡಿದ್ದಾರೆ. ಅವರ ಮನೆಯಲ್ಲಿ 2 ಹಣ ಎಣಿಸುವ ಯಂತ್ರಗಳಿವೆ. ಈ ಮಟ್ಟಕ್ಕೆ ಈಶ್ವರಪ್ಪ ಭ್ರಷ್ಟರಾಗಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಕಟುವಾಗಿ ಹೇಳಿದರು.

ಹಿಂದು ಧರ್ಮಕ್ಕೂ, ಹಿಂದುತ್ವಕ್ಕೂ ವ್ಯತ್ಯಾಸ ಇದೆ. ಸರ್ವ ಧರ್ಮಗಳ ತೋಟ ಭಾರತ, ಇಲ್ಲಿ ಪ್ರಜಾಪ್ರಭುತ್ವ ನೆಲೆಗೊಳ್ಳಿಸಬೇಕು. ಈ ರಾಷ್ಟ್ರಕ್ಕೆ ಕಾಂಗ್ರೆಸ್ ಹಲವು ಕೊಡುಗೆ ನೀಡಿದೆ ಎಂದರು.

ಈಶ್ವರಪ್ಪ ಅವರು ಜಿಲ್ಲೆಯ ಜನರಿಗೆ ಧಮ್ಕಿ ಹಾಕುತ್ತಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸರನ್ನು ಎಂಜಲು ತಿನ್ನುವ ನಾಯಿಗಳು ಎಂದರು. ಇಡೀ ಪೊಲೀಸ್ ಇಲಾಖೆಯನ್ನು ಭ್ರಷ್ಟಾಚಾರದ ಕೇಂದ್ರವನ್ನಾಗಿಸಿದ ಕೀರ್ತಿ ಆರಗ ಜ್ಞಾನೇಂದ್ರ ಅವರಿಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದರು.

ಬೃಹತ್ ಪ್ರತಿಭಟನೆ

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಒಂದನೇ ಆರೋಪಿ ಕೆ. ಎಸ್.ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಜನಪ್ರತಿನಿಧಿಗಳು ಭಾಗಿಯಾಗಿದ್ದರು. ನಗರದ ಅಶೋಕ ಸರ್ಕಲ್‌ನಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬಿಎಚ್ ರಸ್ತೆ ನೆಹರೂ ರಸ್ತೆ ಗೋಪಿ ವೃತ್ತದಲ್ಲಿ ಸಂಪನ್ನಗೊಂಡಿತು.

ಕಿಮ್ಮನೆ ಬೆಂಬಲಿಗರಿಂದ ವಾಗ್ವಾದ

ಸಭೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರಿಗೆ ಮಾತನಾಡಲು ಅವಕಾಶ ಸಿಗದಿದ್ದುದಕ್ಕೆ ಅವರ ಬೆಂಬಲಿಗರು ನಾಯಕರೊಂದಿಗೆ ವಾಗ್ವಾದಕ್ಕಿಳಿದರು.

ಸಭೆಯಲ್ಲಿ ಹಲವು ಪಕ್ಷದ ಮುಖಂಡರು ಮಾತನಾಡಿದರು. ಅದರೆ, ಕಿಮ್ಮನೆ ರತ್ನಾಕರ ಅವರಿಗೆ ಅವಕಾಶ ಸಿಗಲಿಲ್ಲ. ಇದರಿಂದ ಬೇಸರಗೊಂಡ ಅವರ ಬೆಂಬಲಿಗರು, ‘ಕಿಮ್ಮನೆಗೆ ಯಾಕೆ ಮಾತನಾಡಲು ಅವಕಾಶ ಕೊಡಲಿಲ್ಲ. ಬಿಜೆಪಿ ಸರ್ಕಾರ ವಿರುದ್ಧ ಕೋಣಂದೂರಿನಿಂದ ಪಾದಯಾತ್ರೆ ಮೂಲಕ ಬಂದಿದ್ದೇವೆ. ನಮ್ಮ ನಾಯಕರಿಗೆ ಮಾತನಾಡಲು ಅವಕಾಶ ಕೊಡದಿದ್ದ ಮೇಲೆ ನಾವೇಕೆ ಬರಬೇಕಿತ್ತು’ ಎಂದು ವಾಗ್ವಾದಕ್ಕಿಳಿದರು. ಈ ಸಂದರ್ಭದಲ್ಲಿ ಕಿಮ್ಮನೆ ರತ್ನಾಕರ, ‘ಡಿ.ಕೆ. ಶಿವಕುಮಾರ್ ಅವರು ತುರ್ತಾಗಿ ಹೊರಡಬೇಕಾಗಿದೆ. ಅದಕ್ಕಾಗಿ ನಾನೇ ಮಾತನಾಡಲಿಲ್ಲ’ ಎಂದು ಬೆಂಬಲಿಗರನ್ನು ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.