ADVERTISEMENT

ಹರತಾಳು ಹಾಲಪ್ಪ ಅವರದ್ದು ಕುಟುಂಬ ಒಡೆಯುವ ಮನಃಸ್ಥಿತಿ: ಕಲಸೆ ಚಂದ್ರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 16:21 IST
Last Updated 12 ಜುಲೈ 2024, 16:21 IST
<div class="paragraphs"><p>ಕಲಸೆ ಚಂದ್ರಪ್ಪ</p></div>

ಕಲಸೆ ಚಂದ್ರಪ್ಪ

   

ಸಾಗರ: ‘ಬಿಜೆಪಿ ಮುಖಂಡ ಹರತಾಳು ಹಾಲಪ್ಪ ಕುಟುಂಬ ಒಡೆಯುವ ಮನಸ್ಥಿತಿಯುಳ್ಳವರಾಗಿದ್ದಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಅವರಿಂದ ಅವರ ಮಗಳು ಡಾ.ರಾಜನಂದಿನಿ ಅವರನ್ನು ರಾಜಕೀಯವಾಗಿ ದೂರ ಮಾಡಿದ್ದೇ ಇದಕ್ಕೆ ಸಾಕ್ಷಿ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಆರೋಪಿಸಿದ್ದಾರೆ.

‘ಈಚೆಗೆ ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಹಾಲಪ್ಪ ಅವರು ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ನಂಬಿದವರನ್ನು ಕುಟುಕುವ ಚೇಳು ಎಂದು ಟೀಕಿಸಿದ್ದಾರೆ. ಈ ಮಾತು ವಿಧಾನಸಭೆ ಚುನಾವಣೆ ಸೋಲಿನಿಂದ ಬಂದಿರುವ ಹತಾಶೆಯ ಹೇಳಿಕೆಯಾಗಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಕಾಗೋಡು ತಿಮ್ಮಪ್ಪ ವಿರುದ್ಧ ಚುನಾವಣೆಗೆ ನಿಂತಿದ್ದಾಗ ಅವರ ವಯಸ್ಸು, ಅನುಭವವನ್ನು ಲೆಕ್ಕಿಸದೆ ತೀರಾ ಲಘುವಾಗಿ ಟೀಕಿಸಿದ್ದ ಹಾಲಪ್ಪ ಈಗ ಅವರ ಬಗ್ಗೆ ಹುಸಿ ಕಾಳಜಿ ತೋರುತ್ತಿರುವುದು ಆಶ್ಚರ್ಯದ ಸಂಗತಿಯಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಹಾಲಪ್ಪ ಅವರು ಅಧಿಕಾರದಲ್ಲಿದ್ದಾಗ ಅಹಂಕಾರದ ವರ್ತನೆ ತೋರಿ ಜನರಿಂದ ದೂರವಾಗಿದ್ದರು. ಈ ಕಾರಣಕ್ಕೆ ಚುನಾವಣೆಯಲ್ಲಿ ಅವರಿಗೆ ಸೋಲು ಉಂಟಾಗಿದೆ. ಎಲ್ಲಾ ವರ್ಗದ ಜನರನ್ನು ಪ್ರೀತಿಯಿಂದ ಕಾಣುವ ಸರಳ ವ್ಯಕ್ತಿತ್ವದ ಬೇಳೂರು ಅವರನ್ನು ಸಾಗರದ ಜನ ಆರಿಸಿದ್ದಾರೆ. ಇದನ್ನು ಸಹಿಸದೆ ಹಾಲಪ್ಪ ಅವರು ಇಲ್ಲಸಲ್ಲದ ಟೀಕೆ ಮಾಡುತ್ತಿರುವುದು ಅನಾರೋಗ್ಯಕರ ರಾಜಕಾರಣದ ಲಕ್ಷಣವಾಗಿದೆ ಎಂದು ಅವರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಡೆಂಗಿ ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಈ ಸಮಿತಿ ಸದಸ್ಯರನ್ನು ಹಾಲಪ್ಪ ಅವರು ಟೀಕಿಸುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.

ಹಾಲಪ್ಪ ಅಧಿಕಾರದಲ್ಲಿದ್ದಾಗ ಗಣಪತಿ ಕೆರೆ, ಮಾರಿಕಾಂಬಾ ದೇವಸ್ಥಾನ ಸಮಿತಿ ಹೀಗೆ ಎಲ್ಲಾ ವಿಚಾರಗಳಲ್ಲೂ ಮೂಗು ತೂರಿಸುತ್ತಿದ್ದರು. ಇದಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ. ಇನ್ನಾದರೂ ಹಾಲಪ್ಪ ಅವರು ಆರೋಗ್ಯಕರ ರಾಜಕಾರಣ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.