ADVERTISEMENT

ಯುವ ಕಾಂಗ್ರೆಸ್‌ನಿಂದ ಸಂಸದರ ಮನೆ ಮುತ್ತಿಗೆಗೆ ಯತ್ನ

ಕೇಂದ್ರ ಸರ್ಕಾರದ ಆಡಳಿತ ಖಂಡಿಸಿ ಪ್ರತಿಭಟನೆ, ಕಾರ್ಯಕರ್ತರ ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 3:43 IST
Last Updated 6 ಆಗಸ್ಟ್ 2021, 3:43 IST
ಶಿವಮೊಗ್ಗ ನಗರದಲ್ಲಿರುವ ಸಂಸದರ ರಾಘವೇಂದ್ರ ಅವರ ನಿವಾಸಕ್ಕೆ ಗುರುವಾರ ಮುತ್ತಿಗೆ ಹಾಕಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು
ಶಿವಮೊಗ್ಗ ನಗರದಲ್ಲಿರುವ ಸಂಸದರ ರಾಘವೇಂದ್ರ ಅವರ ನಿವಾಸಕ್ಕೆ ಗುರುವಾರ ಮುತ್ತಿಗೆ ಹಾಕಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು   

ಶಿವಮೊಗ್ಗ: ಸಂಸತ್‌ನಲ್ಲಿ ಬಿಜೆಪಿ ಸಂಸದರ ಮೌನ ನಡೆ ಖಂಡಿಸಿ ಗುರುವಾರ ಶಿವಮೊಗ್ಗದಲ್ಲಿನ ಸಂಸದ ಬಿ.ವೈ.ರಾಘವೇಂದ್ರ ಅವರ ನಿವಾಸಕ್ಕೆ ಗುರುವಾರ ಮುತ್ತಿಗೆ ಹಾಕಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ವಿನೋಬ ನಗರದ ಪೊಲೀಸ್‌ ಚೌಕಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕಾಂಗ್ರೆಸ್‌ ಬಾವುಟ ಹಿಡಿದು ವಿನೋಬ ನಗರದಲ್ಲಿರುವ ನಿವಾಸದಲ್ಲಿ ಮುತ್ತಿಗೆ ಹಾಕಲು ಮುಂದಾದರು. ಆ ಮಾರ್ಗದಲ್ಲಿ ಬ್ಯಾರಿಕೇಡ್‌ ನಿರ್ಮಿಸಿದ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಈ ಸಮಯದಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಕೊರೊನಾ ಲಾಕ್‌ಡೌನ್‌ ಸಂಕಷ್ಟದ ಜತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ರಾಜ್ಯದ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೂ, ರಾಜ್ಯದ ಬಿಜೆಪಿ ಸಂಸದರು ಸಂಸತ್ತಿನಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತದೆ ಮೌನ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ದೇಶದಲ್ಲಿ ಅಚ್ಛೇ ದಿನ್ ತರುತ್ತೇನೆಂದು ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಕಡಿಮೆ ಇದ್ದರೂ ನಿತ್ಯ ಪೆಟ್ರೋಲ್– ಡೀಸೆಲ್, ಅಡುಗೆ ಅನಿಲ ದರ ಏರಿಕೆ ಮಾಡುತ್ತಾ ಜನಸಾಮಾನ್ಯರು ಪರದಾಡುವಂತೆ ಮಾಡಿದ್ದಾರೆ. ಕೋವಿಡ್ ಸಂಕಷ್ಟದಲ್ಲಿರುವ ದೇಶದ ಜನರ ನೆರವಿಗೆ ಬರಬೇಕಾದ ಸರ್ಕಾರ ಜನವಿರೋಧಿ ನೀತಿಯಿಂದ ಜನರನ್ನು ಸಂಕಷ್ಟದ ಕೂಪಕ್ಕೆ ನೂಕಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರೆ ಪರಿಹಾರ, ಜಿಎಸ್‌ಟಿ ತೆರಿಗೆಯಿಂದ ಬರಬೇಕಾದ ಪರಿಹಾರದ ಹಣವನ್ನು ನೀಡದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಹೀಗಿದ್ದರೂ ಬಿಜೆಪಿ ರಾಜ್ಯದ ಪರವಾಗಿ ಧ್ವನಿ ಎತ್ತದೆ ಮೌನವಹಿಸಿ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಯುವ ಘಟಕದ ಜಿಲ್ಲಾಧ್ಯಕ್ಷ ಎಚ್.ಪಿ.ಗಿರೀಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ, ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಎನ್.ರಮೇಶ್, ಕಾಂಗ್ರೆಸ್ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಎಂ.ಪ್ರವೀಣ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಎಸ್.ರವಿ ಕುಮಾರ್, ಮಹಾನಗರ ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್, ರೇಖಾ ರಂಗನಾಥ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.