ADVERTISEMENT

ಅಗತ್ಯ ವಸ್ತುಗಳ ಬೆಲೆ ಏರಿಸಿರುವುದೇ ಕಾಂಗ್ರೆಸ್ ಸಾಧನೆ: ಹರತಾಳು ಹಾಲಪ್ಪ ಟೀಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2025, 15:56 IST
Last Updated 22 ಮೇ 2025, 15:56 IST
ಎಚ್.ಹಾಲಪ್ಪ ಹರತಾಳು
ಎಚ್.ಹಾಲಪ್ಪ ಹರತಾಳು   

ಸಾಗರ: ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಜನರ ಬದುಕಿಗೆ ಬರೆ ಎಳೆದಿರುವುದೇ ರಾಜ್ಯದ ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ಸಾಧನೆಯಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಚ್.ಹಾಲಪ್ಪ ಹರತಾಳು ಟೀಕಿಸಿದರು.

‘ಹಾಲು, ಬಸ್, ಪೆಟ್ರೋಲ್, ಡೀಸೆಲ್, ಬಿತ್ತನೆ ಬೀಜ ಹೀಗೆ ಬಹುತೇಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಜನನ– ಮರಣ ಪ್ರಮಾಣ ಪತ್ರಕ್ಕೂ ಶುಲ್ಕ ಹೆಚ್ಚಿಸಲಾಗಿದೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮನೆಯ ವಿಸ್ತೀರ್ಣ ಆಧರಿಸಿ ಕಸಕ್ಕೆ ತೆರಿಗೆ ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ದೂರಿದರು.

‘ಜಿಲ್ಲೆಯಲ್ಲಿ ಯಾವ ಅಭಿವೃದ್ಧಿ ಕೆಲಸವೂ ನಡೆಯುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಕ್ಷೇತ್ರವಾಗಿರುವ ಸೊರಬ ತಾಲ್ಲೂಕಿನ ಹರೀಶೆ ಗ್ರಾಮದಲ್ಲಿ ಈಚೆಗೆ ಇಸ್ಪೀಟ್ ಕ್ಲಬ್ ಆರಂಭಿಸಲಾಗಿದೆ. ಈ ಮೂಲಕ ಜೂಜಿಗೆ ಶಿಕ್ಷಣ ಸಚಿವರೇ ಕುಮ್ಮಕ್ಕು ನೀಡಿದಂತಾಗಿದೆ’ ಎಂದು ಅವರು ಆರೋಪಿಸಿದರು.

ADVERTISEMENT

ಸಾಗರ ಕ್ಷೇತ್ರದಲ್ಲಿ ಅಭಿವೃದ್ಧಿ ಎಂಬುದು ನಿಂತ ನೀರಾಗಿದೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಮಡಸೂರು ಗ್ರಾಮದ 7 ರೈತರನ್ನು 13 ದಿನಗಳ ಕಾಲ ಜೈಲಿನಲ್ಲಿಟ್ಟಿದ್ದೆ ಶಾಸಕ ಬೇಳೂರು ಸಾಧನೆಯಾಗಿದೆ. ಹೆನೆಗೆರೆ ಗ್ರಾಮದ ರವಿ ಹೆಗಡೆ, ರುಕ್ಮಿಣಿ ರಾಜು ಎಂಬ ಎಸ್ ಸಿ ಮಹಿಳೆ, ಆವಿನಹಳ್ಳಿಯ ಕೇಶವ ಜೋಗಿ, ನೆಲ್ಲಿಬೀಡು ಗ್ರಾಮದ ನವೀನ್ ಜೈನ್ ಎಂಬುವವರಿಗೆ ಬಗರ್ ಹುಕುಂ ವಿಷಯಕ್ಕೆ ಸಂಬಂಧಿಸಿದಂತೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ದೂರಿದರು.

ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಬಸ್ ಸ್ಟ್ಯಾಂಡ್ ರಾಘು ಎಂದು ಬೇಳೂರು ಕೇವಲವಾಗಿ ಅಪಹಾಸ್ಯ ಮಾಡುತ್ತಿದ್ದಾರೆ. ಸಂಸದರು ಬಸ್ ಸ್ಟ್ಯಾಂಡ್ ಜೊತೆಗೆ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಸಿಗಂದೂರು ಸೇತುವೆಯನ್ನೂ ಕಟ್ಟಿಸಿದ್ದಾರೆ. ಇಂತಹ ಒಂದೂ ಕೆಲಸ ಮಾಡದ ಬೇಳೂರು ಸಂಸದರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.

ಬಿಜೆಪಿಯ ಪ್ರಮುಖರಾದ ಟಿ.ಡಿ.ಮೇಘರಾಜ್, ದೇವೇಂದ್ರಪ್ಪ ಯಲಕುಂದ್ಲಿ, ಕೆ.ಆರ್.ಗಣೇಶ್ ಪ್ರಸಾದ್, ಮಲ್ಲಿಕಾರ್ಜುನ ಹಕ್ರೆ, ಸತೀಶ್ ಮೊಗವೀರ, ಗಿರೀಶ್ ಗುಳ್ಳಳ್ಳಿ, ಸುಜಯ್ ಶೆಣೈ, ಜನಾರ್ದನ್‌, ನವೀನ್, ರಮೇಶ್ ಹಾರೆಗೊಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.