ಸಾಗರ: ‘ಈಚೆಗೆ ಉಡುಪಿಯಲ್ಲಿ ನಡೆದ ಸಂತರ ಸಮಾವೇಶದಲ್ಲಿ ಪೇಜಾವರ ಮಠದ ಶ್ರೀಗಳು ‘ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮನ್ನು ಗೌರವಿಸುವ ಸಂವಿಧಾನವಿತ್ತು. ಈಗ ನಮ್ಮನ್ನು ಗೌರವಿಸುವ ಸಂವಿಧಾನದ ಅಗತ್ಯವಿದೆ’ ಎಂದು ಹೇಳಿರುವುದು ಅಪಾಯಕಾರಿ ಮತ್ತು ಬೆಚ್ಚಿ ಬೀಳಿಸುವ ಸಂಗತಿಯಾಗಿದೆ’ ಎಂದು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ಸಂವಿಧಾನ ನುಡಿ–ನಮ್ಮ ನಡೆ’ ಕುರಿತು ಉಪನ್ಯಾಸ ನೀಡಿದ ಅವರು, ‘ಸಂವಿಧಾನವನ್ನು ವಿರೋಧಿಸುವ ಮೂಲಕ ಸ್ವಾಮೀಜಿಗಳು ಮತ್ತೊಮ್ಮೆ ಜೀವ ವಿರೋಧಿಯಾಗಿರುವ ಮನುಸ್ಮೃತಿಯನ್ನು ಜಾರಿಗೊಳಿಸಲು ಮುಂದಾಗಿರುವಂತೆ ಕಾಣುತ್ತಿದೆ’ ಎಂದರು.
‘ನಾವು ಅಸಮಾನತೆಯೇ ಪ್ರಧಾನವಾಗಿದ್ದ ಅಲಿಖಿತ ಸಂವಿಧಾನವನ್ನು ಅಳಿಸಿ ಲಿಖಿತ ಸಂವಿಧಾನವನ್ನು ಒಪ್ಪಿಕೊಂಡು 75ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಈ ಬಗ್ಗೆ ಸಂಭ್ರಮ ಪಡಬೇಕಾದ ಈ ಹೊತ್ತಿನಲ್ಲಿ ಸಂವಿಧಾನದ ಬಗ್ಗೆ ಅಪಸ್ವರ ಕೇಳಿ ಬರುತ್ತಿರುವುದು ಸಂವಿಧಾನವನ್ನು ದುರ್ಬಲಗೊಳಿಸುವ ಹುನ್ನಾರದ ಭಾಗವಾಗಿದೆ’ ಎಂದು ಅಭಿಪ್ರಾಯಪಟ್ಟರು.
‘ಸಂವಿಧಾನ ಎಂದ ಕೂಡಲೇ ಕೇವಲ ಮೀಸಲಾತಿ ಎಂಬ ಅಭಿಪ್ರಾಯ ಮೂಡುವಂತಾಗಿದೆ. ನಮ್ಮ ಸಂವಿಧಾನ ಕೇವಲ ಜಾತಿ ತಾರತಮ್ಯದ ಕುರಿತು ಮಾತ್ರ ಮಾತನಾಡದೆ ಲಿಂಗ ತಾರತಮ್ಯವನ್ನೂ ಪ್ರಶ್ನಿಸಿ ಅದಕ್ಕೆ ಕಾನೂನಾತ್ಮಕ ಪರಿಹಾರ ನೀಡಿದೆ ಎಂಬುದು ನಮಗೆ ಮುಖ್ಯವಾಗಬೇಕು’ ಎಂದರು.
‘ನಮ್ಮ ಸಂವಿಧಾನ ಪ್ರಜಾಪ್ರಭುತ್ವದ ವ್ಯವಸ್ಥೆಯ ಉಸಿರು ಇದ್ದಂತೆ. ಅನೇಕ ವೈರುಧ್ಯಗಳಿರುವ ಭಾರತೀಯ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಜವಾಬ್ದಾರಿಯನ್ನು ಸಂವಿಧಾನ ಹೊತ್ತಿದೆ. ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲು ನಾವು ಜಾಗೃತರಾಗದಿದ್ದರೆ ಅದೊಂದು ಕೇವಲ ಗ್ರಂಥವಾಗಿ ಮಾತ್ರ ಉಳಿಯುತ್ತದೆ’ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲ ಜಿ.ಸಣ್ಣಹನುಮಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಜಗದೀಶ ಬಿದರಕೊಪ್ಪ, ಹರಿಣಿ ಶಾಸ್ತ್ರಿ, ಕುಂಸಿ ಉಮೇಶ್, ಮಮತಾ ಹೆಗಡೆ ಇದ್ದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.