ADVERTISEMENT

ಅಂಬುತೀರ್ಥ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ

₹ 25 ಕೋಟಿ ವೆಚ್ಚದ ಬೃಹತ್ ಯೋಜನೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 16:41 IST
Last Updated 28 ಜೂನ್ 2020, 16:41 IST
ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಭಾನುವಾರ ಶರಾವತಿ ಉಗಮ ಸ್ಥಾನದ ಅಭಿವೃದ್ಧಿ ಕಾಮಗಾರಿ ಹಾಗೂ ಶ್ರೀರಾಮೇಶ್ವರ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಉದ್ಘಾಟಿಸಿದರು.
ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಭಾನುವಾರ ಶರಾವತಿ ಉಗಮ ಸ್ಥಾನದ ಅಭಿವೃದ್ಧಿ ಕಾಮಗಾರಿ ಹಾಗೂ ಶ್ರೀರಾಮೇಶ್ವರ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಉದ್ಘಾಟಿಸಿದರು.   

ಶಿವಮೊಗ್ಗ: ಒಂದು ವರ್ಷದಲ್ಲಿ ತಲಕಾವೇರಿಯಂತೆ ಅಂಬುತೀರ್ಥವನ್ನು ಅಭಿವೃದ್ಧಿಪಡಿಸಿ ಪುಣ್ಯ ಕ್ಷೇತ್ರವಾಗಿ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಭಾನುವಾರ ಶರಾವತಿಉಗಮ ಸ್ಥಾನದ ಅಭಿವೃದ್ಧಿಗೆ ₹ 25 ಕೋಟಿಅಂದಾಜು ವೆಚ್ಚದ ಬೃಹತ್ ಯೋಜನೆ ಕಾಮಗಾರಿ ಹಾಗೂ ಅಂಬುತೀರ್ಥದ ಶ್ರೀರಾಮೇಶ್ವರ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾನಾಡಿದರು.

ಅಂತರ್ಜಲ ವೃದ್ಧಿಪಡಿಸುವ ಪವಿತ್ರ ಕೆಲಸ ಸರ್ಕಾರ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಅಂಬುತೀರ್ಥವು ಅಭಿವೃದ್ಧಿಯಾಗಲಿದೆ ಎಂದರು.

ADVERTISEMENT

ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ‘ಯಾವುದೇಪ್ರಸಿದ್ಧ ದೇವಸ್ಥಾನ ನಿರ್ಮಾಣ ಮಾಡಬೇಕಾದರೆ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಉಳ್ಳವರು ಕೈಜೋಡಿಸಬೇಕು. ಶ್ರೀರಾಮೇಶ್ವರ ದೇವಾಲಯದ ಅಭಿವೃದ್ಧಿಗೆ ಮುಜರಾಯಿ ಇಲಾಖೆ ವತಿಯಿಂದ ₹ 1 ಕೋಟಿ ಅನುದಾನ ನೀಡಲಿದ್ದೇನೆ’ ಎಂದು ಹೇಳಿದರು.

ರಾಜ್ಯ ಸರ್ಕಾರ ಇಂದು ಕೊರೊನಾ ಆತಂಕದ ದಿನಗಳಲ್ಲೂ ಧಾರ್ಮಿಕ ಸಂಸ್ಥೆಗಳಿಗೆ ಅನುದಾನ ನೀಡುತ್ತಿದೆ. ಅಂಬುತೀರ್ಥದ ಕನಸು ನನಸಾಗಿದೆ. ಸಾರ್ವಜನಿಕರ ಸಹಭಾಗಿತ್ವ ಇದ್ದಾಗ ದೇವಾಲಯಗಳ ಅಭಿವೃದ್ಧಿ ಸಾಧ್ಯ. ಅಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾದಂತೆ ಇಲ್ಲಿಯೂ ಶ್ರೀರಾಮೇಶ್ವರನ ದೇವಾಲಯದ ಅಭಿವೃದ್ಧಿ ಖಚಿತವಾದಂತೆ ಎಂದರು.

ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ‘ಪುರಾಣ ಪ್ರಸಿದ್ಧ ರಾಮಾಯಣದ ಮಹತ್ವ ಹೊಂದಿರುವ ಅಂಬುತೀರ್ಥದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಈಗಾಗಲೇ ಜಿಲ್ಲೆಯ ಹಲವು ಪ್ರವಾಸಿ ಕೇಂದ್ರಗಳಿಗೆ ₹ 28 ಕೋಟಿ ಅನುದಾನ ಘೋಷಣೆಯಾಗಿದೆ. ಈ ಕ್ಷೇತ್ರಕ್ಕೂ ₹ 1.80 ಕೋಟಿ ನೀಡಿದ್ದೇನೆ’ ಎಂದು ಹೇಳಿದರು.

ಸರ್ಕಾರ ಶಿವಮೊಗ್ಗ ಜಿಲ್ಲೆಗೆ ಭೀಮಪಾಲು ನೀಡುತ್ತ ಬಂದಿದೆ. ಜೀವ ವೈವಿಧ್ಯ ಉಳಿಸುವ ಅಂಬುತೀರ್ಥ ಸುತ್ತಲಿನ ಪರಿಸರವನ್ನು ಉಳಿಸಿ, ಮಲೆನಾಡಿನ ಜೀವ ವೈವಿಧ್ಯವನ್ನು ನಾಶ ಮಾಡಿದ ನೀಲಗಿರಿ, ಅಕೇಶಿಯಾವನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದರು.

ಮೊದಲಿಗೆ ರಾಮೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ಸಚಿವರು, ನಂತರ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದರು.

ಶಾಸಕ ಆರಗ ಜ್ಙಾನೇಂದ್ರ ಪ್ರಾಸ್ತವಿಕವಾಗಿ ಮಾತನಾಡಿದರು. ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ವೈಶಾಲಿ, ಅರ್ಚಕ ರಾಮಭಟ್, ನೊಣಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಧರಣೇಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ಶರಧಿ ಪೂರ್ಣೇಶ್,ತಹಶೀಲ್ದಾರ್ ಡಾ.ಶ್ರೀಪಾದ್, ಲಕ್ಷೀ ಉಮೇಶ್, ಆಶಾಲತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.