ADVERTISEMENT

ಅಸಮಾನತೆ ತೊಲಗಿಸಲು ಜಾತಿಯ ಬೇರು ಕೀಳಬೇಕು

ಸಂವಿಧಾನ ಚಲನಶೀಲವಾಗಿದ್ದು ಅಧ್ಯಯನದ ಮೂಲಕ ಜಾಗೃತಿ ಸಾಧ್ಯ; ಎಚ್.ಎನ್.ನಾಗಮೋಹನದಾಸ್‌

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 4:30 IST
Last Updated 27 ನವೆಂಬರ್ 2025, 4:30 IST
ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಸಂವಿಧಾನದ ಪ್ರತಿಜ್ಞಾ ವಿಧಿ ಭೋಧಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಸಂವಿಧಾನದ ಪ್ರತಿಜ್ಞಾ ವಿಧಿ ಭೋಧಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.   

ತೀರ್ಥಹಳ್ಳಿ: ‘ಪರಿಶಿಷ್ಟ ಜಾತಿಗಳಲ್ಲಿಯೇ 101 ಜಾತಿಗಳಿವೆ. ಅದರಲ್ಲಿ ಸ್ಪೃಶ್ಯರು, ಅಸ್ಪೃಶ್ಯರಿದ್ದು, ಶ್ರೇಣೀಕೃತ ವ್ಯವಸ್ಥೆ ಇಂದಿಗೂ ಉಳಿದಿದೆ. ರಾಜ್ಯದ ಒಂದೇ ಒಂದು ಕೇರಿಯಲ್ಲಿ ಕೇವಲ 4 ಜಾತಿಗಳು ಒಟ್ಟಿಗೆ ಇರುವ ಉದಾಹಣೆ ಇಲ್ಲ. ಜಾತಿ ಬೇರು ಕೀಳದೆ ಸಮಾನತೆ ನೀಡಲು ಸಾಧ್ಯವಿಲ್ಲ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್‌ ಅಭಿಪ್ರಾಯಪಟ್ಟರು.

ತುಂಗಾ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಕಾಮ್ರೆಡ್ ಕೆ.ಎಂ.ಶ್ರೀನಿವಾಸ್ ಮತ್ತು ಯಡೂರು ಶ್ರೀನಿವಾಸ ಜೋಯ್ಸ್ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಂವಿಧಾನ ಅರಿವು ಮತ್ತು ನಾಗರಿಕ ಸಮಾಜ’ ಕುರಿತ ಉಪನ್ಯಾಸದಲ್ಲಿ ಅವರು ಮಾತನಾಡಿದರು.

‘18ನೇ ಲೋಕಸಭೆಯಲ್ಲಿ ಶೇ 40ರಷ್ಟು ಸಂಸದರು ಅಪರಾಧ ಪ್ರಕರಣದ ಹಿನ್ನೆಲೆ ಹೊಂದಿದ್ದಾರೆ. ಮತದಾರರು ಮೌಲ್ಯ ಇಟ್ಟುಕೊಂಡವರನ್ನು ಸೋಲಿಸಿದರೆ ಪ್ರಜಾಪ್ರಭುತ್ವಕ್ಕೆ ದಕ್ಕೆಯಾಗುತ್ತದೆ. ಸಂವಿಧಾನ ಕಿತ್ತು ಹಾಕುತ್ತೇವೆ ಎಂದು ಹೇಳುವವರು ಪರ್ಯಾಯವಾಗಿ ಏನನ್ನು ಸ್ಥಾಪಿಸುತ್ತಾರೆ ಎಂದು ಬಹಿರಂಗಪಡಿಸಲಿ. ಇಲ್ಲ ಸರ್ವಾಧಿಕಾರಿ ಆಡಳಿತ ನೀಡುತ್ತೇವೆಂದು ಘೋಷಿಸಲಿ’ ಎಂದು ನುಡಿದರು.

ADVERTISEMENT

‘ಸಂವಿಧಾನದ ಆಶಯದಂತೆ ಜಾತಿಯ ಅಸಮಾನತೆ ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ. ಹುಟ್ಟಿನ ಜಾತಿಯ ವೃತ್ತಿಗಳನ್ನು ಮಾಡಬೇಕಿದ್ದ ರಾಷ್ಟ್ರಪತಿ, ಪ್ರಧಾನಿ ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಅದೇ ರೀತಿ ಬದಲಾವಣೆ ದೇಶದಲ್ಲಿ ನಿಧಾನವಾಗಿ ನಡೆಯುತ್ತಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭ ಇದ್ದ ಸ್ಥಿತಿಗೂ ಇಂದಿಗೂ ಅಜಗಜಾಂತರ ಬದಲಾವಣೆಯನ್ನು ಸಂವಿಧಾನ ನೀಡಿದೆ’ ಎಂದು ಹೇಳಿದರು.

‘ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಸ್ವೇಚ್ಛಾಚಾರ ಅಪಾಯಕಾರಿ. ದೇಶವನ್ನು ಯಾವ ತತ್ವದ ಮೇಲೆ ಕಟ್ಟಬೇಕು ಎಂಬುದನ್ನು ಸಂವಿಧಾನ ಒಳಗೊಂಡಿದೆ. ಸಂವಿಧಾನ ಕಥೆ, ಕಾದಂಬರಿ ಆಗಿರದ ಕಾರಣ ಅದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬ ಸುಲಭ ವಿಧಾನವನ್ನು ಕಂಡುಕೊಳ್ಳಬೇಕು’ ಎಂದು ಹೇಳಿದರು.

‘ಮಿಶ್ರ ಸಂತತಿಯ ದೇಶದ ಕಲ್ಪನೆ ಅರ್ಥಮಾಡಿಕೊಳ್ಳುವಲ್ಲಿ ನಾವೆಲ್ಲ ವಿಫಲವಾಗಿದ್ದೇವೆ. ಜಾತಿ, ಧರ್ಮದ ಹೆಸರಿನಲ್ಲಿ ಬಡಿದಾಡುವುದು ಸರಿಯಲ್ಲ. ಧರ್ಮ, ಜಾತಿಯ ಹೆಸರಿನಲ್ಲಿ ಭೇದ ತೋರದೆ ಎಲ್ಲರೂ ಸಮಾನವಾಗಿ ಬದುಕಬೇಕು. ಕಲ್ಯಾಣ ರಾಜ್ಯದ ಅವಕಾಶವನ್ನು ಸಂವಿಧಾನ ನೀಡಿದ್ದರೂ ಅರ್ಥವಾಗದೇ ಜಗಳವಾಡುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸರ್ಕಾರ ದಿನಕ್ಕೊಂದು ಕ್ಷೇತ್ರವನ್ನು ಖಾಸಗೀಕರಣ ಮಾಡುತ್ತಿದೆ. ಮುಂದೆ ಪಾರ್ಲಿಮೆಂಟ್ ನಡೆಸಲು ಆಗಲ್ಲ ಎಂದು ಅದಾನಿ, ಅಂಬಾನಿಗೆ ಕೊಟ್ಟರೆ ಕಥೆ ಏನು ಎಂಬ ಅನುಮಾನ ಮೂಡುವಂತಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲ ವರ್ಗ, ಜಾತಿ, ಧರ್ಮದ ಜನರೂ ಪಾಲ್ಗೊಂಡಿದ್ದರು. ಸ್ವಾತಂತ್ರ್ಯ ನಂತರದ ದೇಶ ಸಾಧನೆ ಮಾಡಿಲ್ಲ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ರಾಜತ್ವ ಕೊನೆಗೊಂಡು ರಾಜಕೀಯ ಆಡಳಿತಕ್ಕೆ ಒಳಪಟ್ಟಿದೆ. ಇದೆಲ್ಲ ಸಂವಿಧಾನ ಬಂದ ನಂತರ ಸಾಧ್ಯವಾಗಿದೆ. ದೇಶದ ಅಭಿವೃದ್ಧಿಯಲ್ಲಿ ಸಂವಿಧಾನದ ಪಾತ್ರ ಬಹಳ ಮಹತ್ವದ್ದು’ ಎಂದು ತಿಳಿಸಿದರು.

‘ಗಾಳಿ, ನೀರು, ಬೆಳಕು, ಹಸಿವಿಗೆ ಜಾತಿ ಎಲ್ಲಿದೆ. ಅಂತರ್ಜಾತಿ ವಿವಾಹ ಹೊರತುಪಡಿಸಿ ಜಾತಿ ವ್ಯವಸ್ಥೆ ಕಿತ್ತೊಗೆಯಲು ಸಾಧ್ಯವಿಲ್ಲ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಂ.ಎನ್.ರಮೇಶ್‌, ವಿಹಂಗಮದ ಕಡಿದಾಳು ದಯಾನಂದ, ಬಾಸ್ಕರ ಜೋಯ್ಸ್‌, ಆರ್.ಕುಮಾರಸ್ವಾಮಿ, ಪ್ರಸನ್ನ ಕೆ.ಎಲ್‌. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.